ಧರ್ಮಸ್ಥಳದಲ್ಲಿ ಪೌಷ್ಟಿಕ ಆಹಾರ ಉತ್ಪಾದನೆಗೆ ಆದ್ಯತೆ

| Published : Jun 02 2024, 01:46 AM IST

ಸಾರಾಂಶ

ಪೌಷ್ಟಿಕ ಆಹಾರವನ್ನು ಉತ್ಪಾದಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದು ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನಾಧಿಕಾರಿ ಅಕ್ಷತಾ ರೈ ಹೇಳಿದರು. ಅರಸೀಕೆರೆಯ ಅಗ್ಗುಂದ ಸಿದ್ದರಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಸಂಸ್ಥೆಯ ವತಿಯಿಂದ ಸಿರಿಧಾನ್ಯ ಬಿತ್ತನೆ ಬೀಜಗಳಾದ ಸಾಮೆ, ಹಾರಕ, ಕೊರಲೆ ಬೀಜವನ್ನು ರೈತರಿಗೆ ವಿತರಿಸಿ ಮಾತನಾಡಿದರು.

ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನಾಧಿಕಾರಿ ಅಕ್ಷತಾ ರೈ ಹೇಳಿಕೆ । ರೈತರಿಗೆ ಸಿರಿಧಾನ್ಯ ಬಿತ್ತನೆ ಬೀಜಗಳ ವಿತರಣೆ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಇಂದು ವಿವಿಧ ದೈಹಿಕ ಸಮಸ್ಯೆಗಳಿಗೆ ಅಪೌಷ್ಟಿಕತೆ ಕಾರಣವಾಗಿದ್ದು ಪೌಷ್ಟಿಕ ಆಹಾರವನ್ನು ಉತ್ಪಾದಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದು ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನಾಧಿಕಾರಿ ಅಕ್ಷತಾ ರೈ ಹೇಳಿದರು

ತಾಲೂಕಿನ ಅಗ್ಗುಂದ ಸಿದ್ದರಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಸಂಸ್ಥೆಯ ವತಿಯಿಂದ ಸಿರಿಧಾನ್ಯ ಬಿತ್ತನೆ ಬೀಜಗಳಾದ ಸಾಮೆ, ಹಾರಕ, ಕೊರಲೆ ಬೀಜವನ್ನು ರೈತರಿಗೆ ವಿತರಿಸಿ ಮಾತನಾಡಿ, ‘ತಾಲೂಕಿನಲ್ಲಿ ನಮ್ಮ ಸಂಸ್ಥೆಯು ಸಿರಿಧಾನ್ಯವನ್ನು ಬೆಳೆಯುವ ಗುರಿಯೊಂದನ್ನು ನಿಗದಿ ಮಾಡಿಕೊಂಡಿದ್ದೆವು. ಆದರೆ ಅದು ದುಪ್ಪಟ್ಟು ಆಗಿದೆ. ರೈತರು ಹೆಚ್ಚಿನ ಆಸಕ್ತಿಯನ್ನು ಸಹ ತೋರುತ್ತಿದ್ದು ಸಿರಿಧಾನ್ಯ ಗುಣಮಟ್ಟದ ಬಿತ್ತನೆ ಬೀಜವನ್ನು ವಿತರಿಸುತ್ತಿದ್ದೇವೆ’ ಎಂದು ಹೇಳಿದರು.

ತಾಲೂಕಿನ ನಾಗೇನಹಳ್ಳಿ ಯಡವನಹಳ್ಳಿ ಸಂಕ್ಲಾಪುರ ಸಣ್ಣೇನಹಳ್ಳಿ ಅಗುಂದ ಗೊಲ್ಲರಹಟ್ಟಿ ಸಿದ್ದರಹಳ್ಳಿಗಳಲ್ಲಿ ರೈತರಿಗೆ ಸಿರಿಧಾನ್ಯಗಳಾದ ಹಾರಕ, ಸಾಮ ಮತ್ತು ಸಜ್ಜೆ ಬಿತ್ತನೆ ಬೀಜಗಳನ್ನು ಈಗಾಗಲೇ ವಿತರಿಸಿದ್ದೇವೆ. 98 ರೈತರಿಗೆ 441 ಕೆಜಿ ಸಿರಿಧಾನ್ಯವನ್ನು ವಿತರಿಸಿದ್ದು ಇನ್ನೂ ಹೆಚ್ಚಿನ ಬೇಡಿಕೆ ಬರುತ್ತಿದೆ. ಸುಮಾರು 200 ಎಕರೆ ಪ್ರದೇಶದಲ್ಲಿ ಸಿರಿಧಾನ್ಯವನ್ನು ರೈತರು ಬೆಳೆಯಲಿದ್ದಾರೆ ಎಂದು ತಿಳಿಸಿದರು

ಇತ್ತೀಚೆಗೆ ಸಿರಿಧಾನ್ಯಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದ್ದು ರೈತರು ಅತಿ ಕಡಿಮೆ ನೀರಿನಲ್ಲಿ ಬೆಳೆಯನ್ನು ಬೆಳೆಯಬಹುದಾಗಿದೆ. ಅಲ್ಲದೆ ಆರ್ಥಿಕ ಸುಧಾರಣೆಗೂ ಸಹಕಾರಿಯಾಗಲಿದೆ. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸಂಸ್ಥೆ ನಡೆಸುತ್ತ ಬಂದಿದೆ ಎಂದು ವಿವರಿಸಿದರು.

ಹಿರಿಯ ಪತ್ರಕರ್ತ ಹಾಗೂ ಜನಜಾಗೃತಿ ಸಮಿತಿ ಸದಸ್ಯ ಎಚ್ ಡಿ ಸೀತಾರಾಮ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಾಮಾಜಿಕ, ಆರ್ಥಿಕ ಸುಧಾರಣೆ ಕಾರ್ಯಗಳು ಆಗುತ್ತಿವೆ. ದೇವಾಲಯಗಳ ನಿರ್ಮಾಣ ಜೀರ್ಣೋದ್ಧಾರ, ಕೆರೆಕಟ್ಟೆಗಳ ಅಭಿವೃದ್ಧಿ, ಪರಿಸರಕ್ಕೆ ಹೆಚ್ಚಿನ ಒತ್ತು, ಶಿಕ್ಷಣ ಕ್ಷೇತ್ರಕ್ಕೂ ಸಹ ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ. ದೇಶದ ಬೆನ್ನೆಲುಬಾಗಿರುವ ರೈತನಿಗೆ ಅಗತ್ಯ ಸೌಲಭ್ಯ ಮತ್ತು ಮಾರ್ಗದರ್ಶನವನ್ನು ಒದಗಿಸುವಲ್ಲಿಯೂ ಶ್ರೀ ಕ್ಷೇತ್ರ ಮುಂದಾಗಿದೆ. ಪೌಷ್ಟಿಕತೆಯನ್ನು ಕಾಪಾಡಲು ಸಿರಿಧಾನ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಸಂಸ್ಥೆ ನೀಡುತ್ತಿದ್ದು ತಾಲೂಕಿನ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಸಂಸ್ಥೆಯ ಪ್ರತಿನಿಧಿಗಳು, ಯೋಜನಾಧಿಕಾರಿಗಳು ಮಾಡುತ್ತಿದ್ದಾರೆ. ಇದಕ್ಕೆ ರೈತರ ಸ್ಪಂದನೆ ಬಹಳ ಮುಖ್ಯ ಎಂದು ಹೇಳಿದರು

ಮೇಲ್ವಿಚಾರಕಿ ಹರಿಣಾಕ್ಷಿ, ಜನಜಾಗೃತಿ ಸದಸ್ಯ ಗುರುಮೂರ್ತಿ, ಪ್ರತಿನಿಧಿ ನವೀನ, ಮುನೇಶ್, ಚಂದ್ರಶೇಖರ್ ಇದ್ದರು.