ಸಾರಾಂಶ
ಶಿರೂರ ಪಟ್ಟಣದಲ್ಲಿನ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದಲೋನಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಕಮತಗಿ
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಶಿಕ್ಷಕರು ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮಕ್ಕಳು ಶಿಕ್ಷಣ ಪಡೆದು ಉನ್ನತ ಹುದ್ದೆಹೊಂದಿ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಎಂದು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಹೇಳಿದರು.ಸಮೀಪದ ಶಿರೂರ ಪಟ್ಟಣದಲ್ಲಿನ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದಲೋನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರದ ಅನೇಕ ಶಿಕ್ಷಣಪರ ಯೋಜನೆಗಳು ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಪೂರಕವಾಗಿವೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಜಿಲ್ಲೆಯ ಅಂಕಿತಾ ಕೊಣ್ಣೂರ ಇತರೆ ಮಕ್ಕಳಿಗೆ ಮಾದರಿಯಾಗಿದ್ದಾಳೆ ಎಂದರು.ಜಿಪಂ ಸಿಇಒ ಶಶೀಧರ ಕುರೇರ ಮಾತನಾಡಿ, ಶಾಲಾ ಪ್ರಾರಂಭೋತ್ಸವ ಮಕ್ಕಳ ಹಬ್ಬವನ್ನಾಗಿ ಮಾಡಿದ್ದೀರಿ. ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಮಾಡಬೇಡಿ, ಶಿಕ್ಷಕರಾದವರು ಸಹ ಬೌದ್ಧಿಕ ಹಾಗೂ ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗಬೇಕೆಂದರು.
ಡಿಡಿಪಿಐ ಬಿ.ಕೆ. ನಂದನೂರ ಮಾತನಾಡಿ, ಇಂದು ಜಿಲ್ಲೆಯ 1450 ಸರ್ಕಾರಿ ಶಾಲೆಗಳಲ್ಲಿ ಏಕಕಾಲಕ್ಕೆ ಶಾಲಾ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.ನಂತರ ತೆರೆದ ಬಂಡೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಶಾಲಾ ಮಕ್ಕಳಿಂದ ಶಾಲಾ ದಾಖಲಾತಿ ಆಂದೋಲನದ ಜಾಥಾ ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ಬಡದಾನಿ, ಅಕ್ಷರ ದಾಸೋಹದ ಕೇಶ ಪೆಟ್ಲೂರ, ಸಹಾಯಕ ನಿರ್ದೇಶಕ ಅರಿಹಂತ ಶಾಮತೀರ್ಥ, ಶಾಲೆಯ ಮುಖ್ಯಶಿಕ್ಷಕ ವೈ.ಎಲ್. ಅಪ್ಪನ್ನವರ, ಎಂ.ಬಿ. ಪಾಟೀಲ, ಕ್ಷೇತ್ರ ಸಮನ್ವಯಧಿಕಾರಿ ಎಚ್.ಕೆ. ಗುಡೂರ, ಸಿಆರ್‌ಪಿ ಕಮಲಾ ಕುಂಟೋಜಿ, ಎಸ್.ಟಿ. ಕರಲಿಂಗನ್ನವರ, ಸಂಜಯ ನಡುವಿನಮನಿ, ವಿವಿಧ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಇದ್ದರು.