ಕನ್ನಡಪ್ರಭ ವಾರ್ತೆ ಬಾಗಲಕೋಟೆಭೋವಿ ಅಭಿವೃದ್ಧಿ ನಿಗಮದ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಲು ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಸಮುದಾಯದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗುವ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಿಗಮದ ಅಧ್ಯಕ್ಷ ರಾಮಪ್ಪ ಎಂ. ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭೋವಿ ಅಭಿವೃದ್ಧಿ ನಿಗಮದ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಲು ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಸಮುದಾಯದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗುವ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಿಗಮದ ಅಧ್ಯಕ್ಷ ರಾಮಪ್ಪ ಎಂ. ಸೂಚಿಸಿದರು.

ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಮಂಗಳವಾರ ಅವರ ಅಧ್ಯಕ್ಷತೆಯಲ್ಲಿ ನಡೆದ ನಿಗಮದ ಪ್ರಗತಿ ಪರಿಶೀಲನಾ ಸಭೆ ಹಾಗೂ ಭೋವಿ ಸಮುದಾಯದ ಮುಖಂಡರೊಂದಿಗಿನ ಸಮಾಲೋಚನಾ ಸಭೆಯಲ್ಲಿ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

ನಿಗಮದ ಸೌಲಭ್ಯಗಳ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಕುರಿತು ಸಂಜಯ ಪ್ರಭಾಕರ ಮಾಹಿತಿ ಕೋರಿದರು. ಸಭೆಗಳಲ್ಲಿ ಕೇಳಿದ ಮಾಹಿತಿಗೆ ಸಮರ್ಪಕ ಉತ್ತರ ದೊರೆಯುತ್ತಿಲ್ಲ ಎಂದು ವೈ.ಎಸ್. ಬಂಡಿವಡ್ಡರ ಅಸಮಾಧಾನ ವ್ಯಕ್ತಪಡಿಸಿದರು. ಭೋವಿ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ಪಡೆದು ನಿಗಮದ ಸೌಲಭ್ಯ ಪಡೆಯುತ್ತಿರುವವರ ಕುರಿತು ದೂರುಗಳು ಬಂದಿದ್ದು, ಈ ಬಗ್ಗೆ ಮಾಹಿತಿ ನೀಡಿದರೆ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದರು.

ನಿಗಮದಿಂದ ಸಾಲ ಮಂಜೂರಾದರೂ ಬ್ಯಾಂಕ್‌ಗಳಿಂದ ಸಾಲ ದೊರೆಯುತ್ತಿಲ್ಲ ಎಂಬ ವೆಂಕಟೇಶ ಅವರ ದೂರಿಗೆ ಸ್ಪಂದಿಸಿದ ರಾಮಪ್ಪ, ಸರ್ಕಾರದ ಸೌಲಭ್ಯಗಳು ಬಡವರಿಗಾಗಿ ರೂಪಿಸಿರುವುದರಿಂದ ಅರ್ಹರಿಗೆ ಮಾನವೀಯ ದೃಷ್ಟಿಯಿಂದ ಸಾಲ ಸೌಲಭ್ಯ ಒದಗಿಸುವಂತೆ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಬೇಕು ಎಂದರು.

ಭೋವಿ ಸಮುದಾಯದ ಸಾಂಪ್ರದಾಯಿಕ ಕಸುಬಾದ ಕಲ್ಲು ಒಡೆಯುವ ಕೆಲಸಕ್ಕೆ ಅರಣ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ತೊಂದರೆಯಾಗುತ್ತಿರುವ ಬಗ್ಗೆಯೂ ಮುಖಂಡರು ಗಮನ ಸೆಳೆದರು. ಮಾನವೀಯ ದೃಷ್ಟಿಯಿಂದ ಅವಕಾಶ ಕಲ್ಪಿಸುವಂತೆ ರಾಮಪ್ಪ ಸೂಚಿಸಿದರು. ಈ ಕುರಿತು ಕಾನೂನಿನಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಲೋಕಾಪುರ ಮಹಿಳಾ ಸಂಘಕ್ಕೆ ಕ್ಯಾಂಟಿನ್ ಆರಂಭಿಸಲು ₹2.50 ಲಕ್ಷ ಸಾಲ ಸೌಲಭ್ಯ ಒದಗಿಸಲಾಗುವುದು ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಜಿಲ್ಲೆಯಲ್ಲಿ ನಿಗಮದ ವಿವಿಧ ಯೋಜನೆಗಳ ನಿಗದಿತ ಗುರಿಯನ್ನು ಪೂರ್ಣಗೊಳಿಸಿ, ಅರ್ಹ ಫಲಾನುಭವಿಗಳ ಆಯ್ಕೆಯಲ್ಲಿ ಯಾವುದೇ ಬಾಕಿ ಉಳಿಯದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ರಾಮಪ್ಪ ಸೂಚಿಸಿದರು. ಯೋಜನೆಗಳ ಕುರಿತು ಫಲಾನುಭವಿಗಳಲ್ಲಿ ಜಾಗೃತಿ ಮೂಡಿಸಿ, ಸೌಲಭ್ಯ ಪಡೆಯಲು ಅಗತ್ಯ ಸಹಕಾರ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಿಗಮದ ಜಿಲ್ಲಾ ವ್ಯವಸ್ಥಾಪಕ ರಮೇಶ ಚವ್ಹಾಣ ವಿವಿಧ ಯೋಜನೆಗಳ ಪ್ರಗತಿ ವಿವರ ನೀಡಿದರು. ದೌರ್ಜನ್ಯ ಪ್ರಕರಣಗಳಲ್ಲಿ 19 ಜನರಿಗೆ ಶಿಕ್ಷೆಯಾಗಿರುವುದಾಗಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಗಜಾನನ ಬಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹೀರೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಭೋವಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.