ಲಕ್ಷ್ಮೇಶ್ವರ, ರಾಣಿಬೆನ್ನೂರ, ನವಲಗುಂದ, ಗೋಕಾಕ, ಹೊನ್ನಾವರ, ಕುಮಟಾ ಸೇರಿದಂತೆ ತಾಲೂಕುಗಳಲ್ಲಿ ಕ್ರಿಕೆಟ್ ಆಟಗಾರರ ಗುರುತಿಸಲು ಕಮಿಟಿ ರಚಿಸಿ ಪ್ರತಿಭಾವಂತ ಆಟಗಾರನ್ನು ಗುರುತಿಸಿ ಅವರಿಗೆ ಬೇಕಾದ ಮೂಲ ಸೌಲಭ್ಯ ಒದಗಿಸಿ, ಪ್ರೋತ್ಸಾಹಿಲಾಗುವುದು.
ಹುಬ್ಬಳ್ಳಿ:
ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಭೆ ಹೊಂದಿರುವ ಕ್ರಿಕೆಟ್ ಪಟುಗಳಿದ್ದು, ಅವರನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು. ಇದರಿಂದ ಈ ಭಾಗದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ದೊರೆಯಲಿದ್ದಾರೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಧಾರವಾಡ ವಲಯ ಸಂಚಾಲಕ ವೀರಣ್ಣ ಸವಡಿ ಹೇಳಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕು ಮಟ್ಟದಲ್ಲಿ ಕ್ರಿಕೆಟ್ ಬೆಳೆಸಲು ಆದ್ಯತೆ ನೀಡಲಾಗುವುದು. ಲಕ್ಷ್ಮೇಶ್ವರ, ರಾಣಿಬೆನ್ನೂರ, ನವಲಗುಂದ, ಗೋಕಾಕ, ಹೊನ್ನಾವರ, ಕುಮಟಾ ಸೇರಿದಂತೆ ತಾಲೂಕುಗಳಲ್ಲಿ ಕ್ರಿಕೆಟ್ ಆಟಗಾರರ ಗುರುತಿಸಲು ಕಮಿಟಿ ರಚಿಸಿ ಪ್ರತಿಭಾವಂತ ಆಟಗಾರನ್ನು ಗುರುತಿಸಿ ಅವರಿಗೆ ಬೇಕಾದ ಮೂಲ ಸೌಲಭ್ಯ ಒದಗಿಸಿ, ಪ್ರೋತ್ಸಾಹಿಲಾಗುವುದು ಎಂದರು.
ಕಟ್ಟಡ ಕಾಮಗಾರಿ ಪೂರ್ಣ:ಧಾರವಾಡ ವಲಯದ ಹುಬ್ಬಳ್ಳಿ, ಬೆಳಗಾವಿ ಹಾಗೂ ಗೋಕಾಕ ಮೈದಾನದ ಕಟ್ಟಡ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು. ಇದಕ್ಕೆ ಕೆಎಸ್‌ಸಿಎ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದೆ ಎಂದ ಅವರು, ಧಾರವಾಡ ವಲಯಕ್ಕೆ ಅಭಿಲಾಷ ಜೋಶಿ ಆಯ್ಕೆಗಾರರಾಗಿ ಬರಲಿದ್ದು, ಅವರೊಂದಿಗೆ ಸೇರಿ ಈ ಭಾಗದಲ್ಲಿ ಕ್ರಿಕೆಟ್ ಬೆಳೆಸಲು ಹಾಗೂ ಹೆಚ್ಚು ಪಂದ್ಯ ಆಡಿಸಲಾಗುವುದು ಎಂದು ಹೇಳಿದರು.
ಹುಬ್ಬಳ್ಳಿ ಮೈದಾನದ ಕಟ್ಟಡಕ್ಕೆ ಹಾಗೂ ಮೂಲಸೌಕರ್ಯಕ್ಕೆ ₹50 ಲಕ್ಷ ಹಾಗೂ ಬೆಳಗಾವಿಗೆ ₹1 ಕೋಟಿ ವೆಚ್ಚವಾಗಲಿದೆ. ಶೀಘ್ರದಲ್ಲಿ ಎಲ್ಲ ಸೌಕರ್ಯ ಒದಗಿಸುವ ಮೂಲಕ ರಣಜಿ, ಮಹರಾಜ ಹಾಗೂ ಬಿಸಿಸಿಐ ಪಂದ್ಯಗಳು ಇಲ್ಲಿಗೆ ಬರುವಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.ಧಾರವಾಡ ವಲಯದಿಂದ 1ನೇ ವಿಭಾಗ ಮಟ್ಟದ ಲೀಗ್ ಪಂದ್ಯ ಆರಂಭವಾಗಿದ್ದು, 12 ತಂಡಗಳಿಂದ 66 ಪಂದ್ಯ ನಡೆಯಲಿವೆ. ಮಾರ್ಚ್‌ನಲ್ಲಿ 1,2,3 ವಿಭಾಗ ಮಟ್ಟದ ಪಂದ್ಯ ನಡೆಸಲು ರೂಪಿಸಲಾಗಿದೆ. ಏಪ್ರಿಲ್ ಹಾಗೂ ಮೇ ನಲ್ಲಿ ಶಾಲಾ- ಕಾಲೇಜ್ ಮಟ್ಟದ 16, 19 ವಯೋಮಾನದೊಳಗಿನ ಪಂದ್ಯ ನಡೆಸಲಾಗುವುದು ಎಂದರು.
23ಕ್ಕೆ ಆಯ್ಕೆ ಪ್ರಕ್ರಿಯೆ:ಡಿ. 23ರಂದು ಬೆಳಗ್ಗೆ 7.30ಕ್ಕೆ ರಾಜನಗರ ಕೆಎಸ್‌ಸಿಎ ಮೈದಾನದಲ್ಲಿ 14 ವರ್ಷದೊಳಗಿನ ಆಟಗಾರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 3-4 ತಂಡ ಮಾಡಿ ಪಂದ್ಯ ಆಡಿಸಿ ಡಿ. 31ರೊಳಗೆ ಒಂದು ಉತ್ತಮ ತಂಡ ಆಯ್ಕೆ ಮಾಡಲಾಗುವುದು. ಸದ್ಯ ಮಹಿಳಾ ಕ್ರಿಕೆಟ್ ಬಹಳ ಪ್ರಸಿದ್ಧಿ ಪಡೆಯುತ್ತಿದ್ದು ವಲಯದಲ್ಲಿ ಬರುವ ಎಲ್ಲ ಕ್ಲಬ್‌ಗಳಲ್ಲಿರುವ ಪ್ರತಿಭಾವಂತ ಮಹಿಳಾ ಕ್ರಿಕೆಟರಗಳನ್ನು ಗುರುತಿಸಲಾಗುವುದು ಎಂದರು.