ಸಾರಾಂಶ
ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಾಮುಖ್ಯತೆ ನೀಡಿ ಶಾಲೆಗೆ ಭದ್ರತೆ ಒದಗಿಸಲು ಅವಕಾಶ ಕಲ್ಪಿಸಲಾಗಿದೆ
ಶಿರಸಿ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಾಮುಖ್ಯತೆ ನೀಡಿ ಶಾಲೆಗೆ ಭದ್ರತೆ ಒದಗಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಹಾವಣಗಿ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಶಾಲೆಗಳ ಸುರಕ್ಷತೆ ದೃಷ್ಟಿಯಿಂದ ಹಾಗೂ ಶಾಲಾ ಆವರಣದಲ್ಲಿನ ಸ್ವತ್ತುಗಳನ್ನು ಸಂರಕ್ಷಿಸಲು ಕಂಪೌಂಡ್ ನಿರ್ಮಾಣ ಅತ್ಯಗತ್ಯವಾಗಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಅನುದಾನದ ಕೊರತೆಯಿಂದಾಗಿ ಅದೆಷ್ಟೋ ಶಾಲೆಗಳಿಗೆ ಕಂಪೌಂಡ್ ಭಾಗ್ಯವೇ ಇಲ್ಲದಂತಾಗಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಶಾಲೆಗೆ ಅಗತ್ಯವಿರುವ ಶೌಚಾಲಯ, ಆಟದ ಮೈದಾನ, ಅಂಗನವಾಡಿ ಕಟ್ಟಡ, ಮಳೆ ನೀರಿನ ಕೊಯ್ಲು, ಕಾಂಪೌಂಡ್, ಅಡುಗೆಕೋಣೆ, ಭೋಜನಾಲಯದಂತಹ ಅನೇಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದರಿಂದ ಗ್ರಾಮೀಣ ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಒಂದೊಂದಾಗಿ ಪೂರೈಸಲ್ಪಡುತ್ತಿವೆ ಎಂದು ಹೇಳಿದ್ದಾರೆ.೨೦೨೪-೨೫ರ ಆರ್ಥಿಕ ವರ್ಷದಲ್ಲಿ ತಾಲೂಕಿನದ್ಯಂತ ೪ ಶಾಲಾ ಶೌಚಾಲಯಗಳನ್ನು ಕೈಗೆತ್ತಿಕೊಂಡಿದ್ದು, ೩ ಮುಕ್ತಾಯಗೊಂಡಿದೆ. ಒಂದು ಅಂತಿಮ ಹಂತದಲ್ಲಿದೆ. ಇನ್ನೂ ೧೨ ಶಾಲಾ ಕಾಂಪೌಂಡ್‌ಗಳನ್ನು ಅನುಷ್ಠಾನಗೊಳಿಸಲಾಗಿದೆ. ಅದರಲ್ಲಿ ೯ ಪೂರ್ಣಗೊಂಡಿದ್ದು, ಇನ್ನೂ ೨ ಪ್ರಗತಿಯಲ್ಲಿವೆ. ಒಂದು ಆರಂಭವಾಗಬೇಕಿದೆ. ಇನ್ನೂ ೬ ಆಟದ ಮೈದಾನ ಕಾಮಗಾರಿಗಳಲ್ಲಿ ೩ ಪೂರ್ಣಗೊಂಡಿದ್ದು, ಇನ್ನೂ ೩ ಆರಂಭವಾಗಬೇಕಿದೆ. ಹಾಗೇ ಇಟಗುಳಿ ಕಡಕೋಡ ಶಾಲೆಯಲ್ಲಿ ಒಂದು ಅಡುಗೆಕೋಣೆ ಅಂತಿಮ ಹಂತದಲ್ಲಿದ್ದು, ಸದ್ಯದಲ್ಲಿಯೇ ಪೂರ್ಣಗೊಳ್ಳಲಿದೆ.
ಶಾಲಾ ಅಭಿವೃದ್ಧಿಗೆ ನರೇಗಾ ಯೋಜನೆಯಲ್ಲಿ ಬಹುಮುಖ್ಯವಾಗಿ ಪರಿಗಣಿಸಲಾಗಿದ್ದು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅನುಕೂಲ ಕಲ್ಪಿಸಿದೆ. ಇದರ ಸದುಪಯೋಗ ಪಡೆಯಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಹಾವಣಗಿ ಹೇಳಿದರು.