ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಕಡ್ಡಾಯವಾಗಿ ವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ನಗರದ ಎ ಅಂಡ್ ಎ ಕನ್ವೆನ್ಷನ್ ಹಾಲ್‌ನಲ್ಲಿ ಆಧ್ಯಾಪನಾ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ವಿಜ್ಞಾನ ತರಂಗ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳೇ ಇರಲಿಲ್ಲ. ಇದೀಗ ವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಪ್ರಾಮುಖ್ಯತೆ ನೀಡುತ್ತಿರುವುದಾಗಿ ತಿಳಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಕಡ್ಡಾಯವಾಗಿ ವಿಜ್ಞಾನದ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಟಿಂಕರಿಂಗ್ ಪ್ರಯೋಗಾಲಯ ಸ್ಥಾಪನೆಗೆ ಒತ್ತು ನೀಡಲಾಗುವುದು. ಕಂಪ್ಯೂಟರ್ ಆಧಾರಿತ ಪಠ್ಯಕ್ರಮ ಪಿಯುಸಿ ಹಂತದಲ್ಲಿ ಇರಲಿಲ್ಲ. ಅದನ್ನು ಮಕ್ಕಳ ಕಲಿಕೆಗೆ ಅನುಗುಣವಾಗಿ ಸೇರಿಸಿರುವುದಾಗಿ ಹೇಳಿದರು.ಮಕ್ಕಳಲ್ಲಿ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹ ನೀಡಿದಾಗ ಅವರಲ್ಲಿರುವ ಪ್ರತಿಭೆ ಅನಾವರಣಗೊಳ್ಳುತ್ತದೆ. ಸರ್ಕಾರಿ ಶಾಲೆಯ ಮಕ್ಕಳಲ್ಲೂ ಸಾಧಕ ಮಕ್ಕಳಿದ್ದಾರೆ. ಅವರಿಗೆ ಉತ್ತೇಜನ, ಪ್ರೋತ್ಸಾಹದ ಅಗತ್ಯವಿದೆ ಎಂದರು.
ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆ ಎದುರಾಗದಂತೆ ವಾರದಲ್ಲಿ ೬ ದಿನಗಳ ಕಾಲ ಮೊಟ್ಟೆ ನೀಡುವುದಕ್ಕೆ ನಿರ್ಧರಿಸಲಾಗಿದೆ. ಸೆ.೩೦ರೊಳಗೆ ಅದು ಈ ಭಾಗದಲ್ಲಿ ಜಾರಿಯಾಗಲಿದೆ. ಶಿಕ್ಷಣದಲ್ಲಿ ಸಮಾನತೆಯನ್ನು ತರುವುದರೊಂದಿಗೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ ಸಾಕಷ್ಟು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಾಸಕರಾದ ಪಿ.ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ, ಕೆ.ಎಂ.ಉದಯ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಆಧ್ಯಾಪನ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್‌ನ ಎಂ.ಬಿ.ದಿವ್ಯಶ್ರೀ, ಜಿ.ಟಿ.ಪ್ರವೀಣ್‌ಕುಮಾರ್, ಕೆ.ಎನ್.ನಯನ ಇದ್ದರು.
-----------೩೦ಕೆಎಂಎನ್‌ಡಿ-೪
ಮಂಡ್ಯದ ಎ ಅಂಡ್ ಎ ಕನ್ವೆನ್ಷನ್ ಹಾಲ್‌ನಲ್ಲಿ ಆಧ್ಯಾಪನಾ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸದ್ದ ಜಿಲ್ಲಾಮಟ್ಟದ ವಿಜ್ಞಾನ ತರಂಗ ಸ್ಪರ್ಧೆ ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು.