ದೇವಸ್ಥಾನಗಳ ಅಭಿವೃದ್ಧಿಯಲ್ಲಿ ಭಕ್ತರು ಹಾಗೂ ಸಮಿತಿಯ ಸದಸ್ಯರ ಪಾತ್ರ ಮಹತ್ವದ್ದಾಗಿದೆ.
ಬ್ಯಾಡಗಿ: ದೇವಸ್ಥಾನಗಳ ಅಭಿವೃದ್ಧಿಯ ಜೊತೆಗೆ ಸಮಾಜಮುಖಿ ಹಾಗೂ ಧಾರ್ಮಿಕ ಚಟುವಟಿಕೆಗೆ ಆದ್ಯತೆ ನೀಡುವುದು ಉತ್ತಮ ಕಾರ್ಯವಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಪಟ್ಟಣದ ಎಪಿಎಂಸಿ ಗೇಟ್ ಪಕ್ಕದಲ್ಲಿ ಶ್ರೀ ಗ್ರಾಮ ದೇವತಾ ದೇವಸ್ಥಾನ (ಟ್ರಸ್ಟ್) ಸೇವಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಅವರೊಂದಿಗೆ ಉದ್ಘಾಟಿಸಿ ನಂತರ ಅವರು ಮಾತನಾಡಿದರು. ದೇವಸ್ಥಾನದ ಆಸ್ತಿ ಹಾಗೂ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.ಮಾಜಿ ಶಾಸಕ ಸುರೇಶಗೌಡ ಬಿ. ಪಾಟೀಲ ಅವರು ಮಾತನಾಡಿ, ದೇವಸ್ಥಾನಗಳ ಅಭಿವೃದ್ಧಿಯಲ್ಲಿ ಭಕ್ತರು ಹಾಗೂ ಸಮಿತಿಯ ಸದಸ್ಯರ ಪಾತ್ರ ಮಹತ್ವದ್ದಾಗಿದೆ. ದೇವಸ್ಥಾನದ ಹೆಸರಿನಲ್ಲಿ ಶಾಶ್ವತ ಆಸ್ತಿ ನಿರ್ಮಿಸುವುದರಿಂದ ಮುಂದಿನ ದಿನಗಳಲ್ಲಿ ದೇವಸ್ಥಾನದ ನಿರ್ವಹಣೆ ಹಾಗೂ ಧಾರ್ಮಿಕ ಕಾರ್ಯಗಳಿಗೆ ಆರ್ಥಿಕ ಬಲ ದೊರೆಯಲಿದೆ. ಇಂತಹ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಪಂಚಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ. ದೇವಸ್ಥಾನ ಟ್ರಸ್ಟ್ ಸೇವಾ ಸಮಿತಿಯ ಪದಾಧಿಕಾರಿಗಳಾದ ಗಂಗಣ್ಣ ಎಲಿ, ಬಸವರಾಜ ಸಂಕಣ್ಣನವರ, ಚಿಕ್ಕಪ್ಪ ಛತ್ರದ, ಮಲ್ಲಿಕಾರ್ಜುನ ಹುಚಗೊಂಡರ, ಶಂಭಣ್ಣ ಮಠದ, ರಮೇಶ ಮೋಟೆಬೆನ್ನೂರ, ಈಶ್ವರ ಮಠದ, ಸೇರಿದಂತೆ ಸಮಿತಿ ಸದಸ್ಯರು, ಗಣ್ಯರು, ಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.