ನೆಲಮಂಗಲ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಬಿಜೆಪಿ, ಜೆಡಿಎಸ್ ಪಕ್ಷದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನಾಗಲಿ, ನಮ್ಮ ಪಕ್ಷದ ಮುಖಂಡರಾಗಲಿ ಯಾರ ಮೇಲೂ ದಬ್ಬಾಳಿಕೆ, ದೌರ್ಜನ್ಯ ಮಾಡಿಲ್ಲ, ಯಾವುದೇ ಕೆರೆ ಒತ್ತುವರಿ, ಬಡವರ ಜಮೀನು ಒತ್ತುವರಿ, ಗೋಮಾಳ ಒತ್ತುವರಿ, ರೋಲ್ ಕಾಲ್ ಮಾಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಜನರ ಮುಂದೆ ಎಳೆಎಳೆಯಾಗಿ ಬಿಚ್ಚಿಡುತ್ತೇನೆ. 2028ರಲ್ಲಿ ಜನರೇ ಉತ್ತರ ನೀಡುತ್ತಾರೆ ಕಾದು ನೋಡಿ ಎಂದರು.
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಸೋಲೂರು ಹೋಬಳಿಗೆ ಸಂಪರ್ಕ ಕಲ್ಪಿಸುವ ಕೆಲವು ರಸ್ತೆಗಳು ಕಳೆದ 25 ವರ್ಷಗಳಿಂದ ಅಭಿವೃದ್ಧಿಯಾಗಿರಲಿಲ್ಲ. ಈ ಬಗ್ಗೆ ಸಾರ್ವಜನಿಕರು, ನಮ್ಮ ಪಕ್ಷದ ಮುಖಂಡರು ಅಭಿವೃದ್ಧಿಪಡಿಸುವಂತೆ ನನ್ನ ಗಮನಕ್ಕೆ ತಂದಿದ್ದರು. ಇದೀಗ ಅಂತಹ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸುಮಾರು ₹31.5 ಕೋಟಿ ವೆಚ್ಚದಲ್ಲಿ ಅನುದಾನ ಬಿಡುಗಡೆಯಾಗಿದ್ದು, ಮೊದಲನೇ ಹಂತದಲ್ಲಿ ಕಾವೇರಿ ನೀರಾವರಿ ನಿಗಮದ ಮುಖೇನ ₹8.5 ಕೋಟಿ ವೆಚ್ಚದ ಅನುದಾನ ಮಂಜೂರು ಮಾಡಿಸಿದ್ದೇನೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.ನೆಲಮಂಗಲ ತಾಲೂಕಿನ ಸೋಲೂರು ಹೋಬಳಿಯ ಗದ್ದುಗೆ ಮಠದಲ್ಲಿ ರಸ್ತೆ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದರು.
ನಾನು ಕ್ಷೇತ್ರಾದಾದ್ಯಂತ ರಂಗೋಲಿ ಸ್ಪರ್ಧೆ ಮಾಡುವ ಸಂದರ್ಭದಲ್ಲಿ ಮಹಿಳೆಯರು, ಸಾರ್ವಜನಿಕರು ರಸ್ತೆ ಸಮಸ್ಯೆಯ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ರಂಗೋಲಿ ಸ್ಪರ್ಧೆ ನಂತರ ಕಾಮಗಾರಿಗೆ ಚಾಲನೆ ನೀಡುತ್ತೇನೆಂದು ಮಾತು ನೀಡಿದ್ದೇನು. ಅದರಂತೆ ಇಂದು ಮೊದಲನೇ ಹಂತದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸೋಲೂರಿನ ಬೇರೆ ಗ್ರಾಮಗಳನ್ನು ಸಹ ಅಭಿವೃದ್ಧಿಪಡಿಸುತ್ತೇನೆ. ಜನತೆಗೆ ಆಗುತ್ತಿದ್ದ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಹೆಚ್ಚಿನ ಅನುದಾನ ನೀಡಲು ಸಿದ್ಧ: ಅಭಿವೃದ್ಧಿಪಡಿಸುವ ಕಾಮಗಾರಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬಿಡುಗಡೆಯಾಗಿರುವ ₹31.5 ಕೋಟಿಗಿಂತಲೂ ಇನ್ನೂ ಸುಮಾರು ₹4 ರಿಂದ ₹5 ಕೋಟಿ ಹೆಚ್ಚಿನ ಅನುದಾನ ಬೇಕಾಗುತ್ತದೆ. ಹೆಚ್ಚಿನ ಅನುದಾನ ನೀಡಲು ಸಿದ್ಧನಿದ್ದೇನೆ. ಉಳಿದ ಕಾಮಗಾರಿಗೆ 2-3 ವಾರದಲ್ಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡುತ್ತೇನೆ ಎಂದರು.
ಶೀಘ್ರದಲ್ಲೇ ಎಲ್ಲಾ ಅಧಿಕಾರಿಗಳ ವರ್ಗಾವಣೆ:ಸೋಲೂರು ಹೋಬಳಿ ವ್ಯಾಪ್ತಿಯ ಎಲ್ಲ ಇಲಾಖೆಗಳೂ ನೆಲಮಂಗಲ ತಾಲೂಕಿಗೆ ವರ್ಗಾವಣೆಯಾಗಿದೆ. ಕೆಲವು ಅಧಿಕಾರಿಗಳು, ನೌಕರರು ಅವರ ಸೇವಾ ಜ್ಯೇಷ್ಠತೆ ಮೇಲೆ ನೆಲಮಂಗಲಕ್ಕೆ ವರ್ಗಾವಣೆಯಾಗಬೇಕು. ಒಂದು ಟೈಮ್ ಪರ್ಮಿಷನ್ ಪ್ರಕಾರ ಅನುಮತಿ ಕೊಡಿಸಲು ಈಗಾಗಲೇ ಮಖ್ಯಮಂತ್ರಿಗಳು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ವೈಯಕ್ತಿಕವಾಗಿ ಎಲ್ಲಾ ಇಲಾಖೆಗಳಿಗೂ ಪತ್ರ ಬರೆಯುತ್ತಿದ್ದಾರೆ. ಸೇವಾ ಹಿರಿತನದ ಮೇಲೆ ವರ್ಗಾವಣೆಯಾಗಲಿದ್ದಾರೆ. ಎಲ್ಲಾ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.
2028ರಲ್ಲಿ ಜನರೇ ಉತ್ತರಿಸುತ್ತಾರೆ ಕಾದು ನೋಡಿ:ನೆಲಮಂಗಲ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಬಿಜೆಪಿ, ಜೆಡಿಎಸ್ ಪಕ್ಷದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನಾಗಲಿ, ನಮ್ಮ ಪಕ್ಷದ ಮುಖಂಡರಾಗಲಿ ಯಾರ ಮೇಲೂ ದಬ್ಬಾಳಿಕೆ, ದೌರ್ಜನ್ಯ ಮಾಡಿಲ್ಲ, ಯಾವುದೇ ಕೆರೆ ಒತ್ತುವರಿ, ಬಡವರ ಜಮೀನು ಒತ್ತುವರಿ, ಗೋಮಾಳ ಒತ್ತುವರಿ, ರೋಲ್ ಕಾಲ್ ಮಾಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಜನರ ಮುಂದೆ ಎಳೆಎಳೆಯಾಗಿ ಬಿಚ್ಚಿಡುತ್ತೇನೆ. 2028ರಲ್ಲಿ ಜನರೇ ಉತ್ತರ ನೀಡುತ್ತಾರೆ ಕಾದು ನೋಡಿ ಎಂದರು.
ಗದ್ದುಗೆ ಮಠದ ಮಹಾಂತ ಸ್ವಾಮೀಜಿ, ಎನ್ ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ಗ್ರಾಪಂ ಮಾಜಿ ಸದಸ್ಯ ಹನುಮಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರುದ್ರಶರ್ಮಾ, ಮಾಜಿ ಅಧ್ಯಕ್ಷ ರಂಗಸ್ವಾಮಿ ಸೇರಿ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.