ಮಹಿಳಾ ಸಬಲೀಕರಣಕ್ಕೆ ಆದ್ಯತೆ: ಯಮುನಾ ಧರಣೇಶ್

| Published : Dec 20 2024, 12:50 AM IST

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದೆ ಎಂದು ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ತಿಳಿಸಿದರು. ತಿಪಟೂರಿನಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಮಹಿಳೆಯರು ನಾಲ್ಕು ಗೋಡೆಗಳಿಂದ ಹೊರ ಬಂದು ಆರ್ಥಿಕ, ಸಾಮಾಜಿಕವಾಗಿ ಸದೃಢರಾಗಿ ಸಮಾಜಮುಖಿಗಳಾಗಬೇಕು ಆಗ ಮಾತ್ರ ಮಹಿಳೆ ಸಬಲಳಾಗಲು ಸಾಧ್ಯವೆಂಬುದನ್ನು ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದೆ ಎಂದು ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ತಿಳಿಸಿದರು.

ನಗರದ ಗುರುಕುಲ ಕಲ್ಯಾಣ ಮಂಟಪದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಗ್ರಾಮಾಂತರ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಇಲ್ಲಿ ಮಹಿಳೆಯರಿಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು ಮಹಿಳೆಯರು ಆರ್ಥಿಕ ಸಬಲರಾಗಿ ಸ್ವಾವಲಂಬಿ ಹಾಗೂ ಸ್ವಾಭಿಮಾನಿಗಳಾಗಿ ಜೀವನ ನಡೆಸುತ್ತಿದ್ದಾರೆ ಎಂದರು. ಕೃಷಿ ವಿಜ್ಞಾನ ಕೇಂದ್ರದ ಆಹಾರ ಮತ್ತು ಪೋಷಣೆ ವಿಜ್ಞಾನಿ ಡಾ. ಸಿಂಧು ಮಾತನಾಡಿ, ಸ್ಥಳೀಯವಾಗಿ ಸಿಗುವ ಆಹಾರ ಪದಾರ್ಥಗಳನ್ನು ಬಳಸಿ ಮೌಲ್ಯವರ್ಧನೆ ಮಾಡಿದಾಗ ಹೆಚ್ಚು ಲಾಭಹೊಂದಬಹುದು ಎಂದು ಹೇಳಿ ಮೌಲ್ಯವರ್ಧಿತ ಆಹಾರಗಳ ಉತ್ಪನ್ನ ಮಾರಾಟ, ಬ್ರ್ಯಾಂಡ್, ಪರವಾನಿಗೆ ಬಗ್ಗೆ ಮಾಹಿತಿ ತಿಳಿಸಿಕೊಟ್ಟರು.

ಮೈಕ್ರೋ ಇನ್ಸೂರೆನ್ಸ್ ವಿಭಾಗದ ಹಿರಿಯ ವಿಭಾಗಾಧಿಕಾರಿ ರಾಜ್ಯಶ್ರೀ ಹಂಪನಾ ಮಾತನಾಡಿ, ಮನೆಗೆ ಸೀಮಿತವಾಗಿದ್ದ ಮಹಿಳೆ ಸ್ತ್ರೀಶಕ್ತಿ ಸಂಘಗಳನ್ನು ಮಾಡುತ್ತಾ ಬ್ಯಾಂಕ್‌ಗಳಿಗೆ ಹೋಗಿ ವ್ಯವಹಾರ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಧರ್ಮಸ್ಥಳ ಯೋಜನೆಯೇ ಕಾರಣವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಟೈಡ್ ಸಂಸ್ಥೆಯ ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ ಶೈಲಾಕುಮಾರಿ, ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, ಕೆ.ಸುರೇಶ್, ಉದಯ್, ಎಂ.ಡಿ. ಪದ್ಮಾವತಿ, ಭಾಗ್ಯಲಕ್ಷ್ಮೀ,ಕಲ್ಯಾಣಿ ಇತರರಿದ್ದರು.