ಸಾರಾಂಶ
ಪರ್ಯಾಯ ಶ್ರೀಪುತ್ತಿಗೆ ಮಠದ ವತಿಯಿಂದ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಸಂದರ್ಭದಲ್ಲಿ ಗಂಗಾವತಿ ಪ್ರಾಣೇಶ್ ತಂಡದಿಂದ ಹಾಸ್ಯೋತ್ಸವ ಕಾರ್ಯಕ್ರಮ ಜರುಗಿತು.
ಕನ್ನಡಪ್ರಭ ವಾರ್ತೆ ಉಡುಪಿ
ಪರ್ಯಾಯ ಶ್ರೀಪುತ್ತಿಗೆ ಮಠದ ವತಿಯಿಂದ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಸಂದರ್ಭದಲ್ಲಿ ಗಂಗಾವತಿ ಪ್ರಾಣೇಶ್ ತಂಡದಿಂದ ಹಾಸ್ಯೋತ್ಸವ ಕಾರ್ಯಕ್ರಮ ಜರುಗಿತು.ಗಂಗಾವತಿ ಪ್ರಾಣೇಶ್, ನರಸಿಂಹ ಜೋಶಿ, ಬಸವರಾಜ ಮಹಾಮನಿ ಅವರು ಕಿಕ್ಕಿರಿದ ಸಭೆಯನ್ನು ತಮ್ಮ ಹಾಸ್ಯ ಮಾತುಗಾರಿಕೆಯಿಂದ ನಗೆಗಡಲಲಲ್ಲಿ ತೇಲಿಸಿದರು.ಈ ಮುನ್ನ ನಡೆದ ಸಭೆಯಲ್ಲಿ ಪೂಜ್ಯ ಪರ್ಯಾಯ ಶ್ರೀಪಾದರು, ಭಗವದ್ಗೀತೆಯಲ್ಲೂ ಶ್ರೀಕೃಷ್ಣ ನಗುನಗುತ್ತಲೇ ಅರ್ಜುನನ ದುಗುಡ ದುಮ್ಮಾನಗಳಿಗೆ ಉತ್ತರಿಸಲು ಶುರು ಮಾಡಿದ. ಹೀಗೆ ಯಾವುದೇ ಸಮಸ್ಯೆಗಳಿಗೆ ನಗುವೂ ಪರಿಹಾರದ ಉತ್ತರವಾಗಬಲ್ಲುದು ಎಂದು ತೋರಿಸಿಕೊಟ್ಟ. ಯಾವ ಪ್ರಾಣಿಗೂ ನೀಡದ ಈ ವರ ಮನುಜನಿಗೆ ಭಗವಂತ ಕರುಣಿಸಿದ. ಇಂತಹ ನಗುವಿನ ಹಾಸ್ಯೋತ್ಸವ ಈ ಗೀತೋತ್ಸವದಲ್ಲಿ ಸಕಾಲಿಕವಾಗಿದೆ. ನಮ್ಮೆಲ್ಲ ಜೀವನದ ಸಮಸ್ಯೆಗಳು ನಗುವಿನಿಂದ ಪರಿಹಾರವಾಗಬಲ್ಲುದು ಎಂದು ಹೇಳಿ ಪ್ರಾಣೇಶ್ ತಂಡದವರನ್ನು ಅಭಿನಂದಿಸಿದರು.ಇದೇ ಸಂದರ್ಭ ಭಗವದ್ಗೀತೆಗಾಗಿಯೇ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಗೀತಾ ಮಾತೆಯರೆಂದು ಮಾನ್ಯೆಯರಾದ, ಲಕ್ಷ್ಮಿ ಶಾನುಭಾಗ್, ಮೀರಾ ಜಿ. ಪೈ, ಕೆ. ಪ್ರೇಮಾ ಮತ್ತು ಕುಶಾಲನಗರದ ಪದ್ಮಾ ಪುರುಷೋತ್ತಮ್, ಪಿರಿಯಾ ಪಟ್ಟಣದ ರಮಾ ವಿಜಯೇಂದ್ರ ಅವರನ್ನು ಸನ್ಮಾನಿಸಲಾಯಿತು.ಈ ಬೃಹತ್ ಗೀತೋತ್ಸವದಲ್ಲಿ ಬಹು ಜನರ ಬೇಡಿಕೆಯಂತೆ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಪ್ರಾರಂಭಿಸಲಾಗಿದೆ.