ಸಾರಾಂಶ
- ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಬಸ್ ತಂಗುದಾಣ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಗರದ ಸೌಂದರ್ಯ ಹೆಚ್ಚಿಸುವ ಜೊತೆಗೆ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಿ ಮೇ ಮಾಹೆಯ ಅಂತ್ಯದೊಳಗೆ ನಗರದ ಎಲ್ಲಾ ರಸ್ತೆಗಳನ್ನು ಸಂಪೂರ್ಣ ಡಾಂಬರೀಕರಣ ಮಾಡಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ನಗರದ ಬಸವೇಶ್ವರ ರಸ್ತೆ ಬಸವತತ್ತ್ವಪೀಠದ ಮುಂಭಾಗ ಹಾಗೂ ಕಣಿವೆ ರುದ್ರೇಶ್ವರ ದೇವಸ್ಥಾನದ ಸಮೀಪ ತಲಾ ₹12 ಲಕ್ಷ ರು. ವೆಚ್ಚದಲ್ಲಿ ಶಾಸಕರ ನಿಧಿಯಿಂದ ನಿರ್ಮಿಸಲಾಗಿರುವ ಸುಸಜ್ಜಿತ ಅತ್ಯಾಧುನಿಕ ಬಸ್ ತಂಗುದಾಣಗಳನ್ನು ಶನಿವಾರ ಸಾರ್ವಜನಿಕರಿಗೆ ಸಮರ್ಪಣೆಗೊಳಿಸಿ ಮಾತನಾಡಿದರು.ನಗರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದ ಎಲ್ಲಾ ರಸ್ತೆಗಳನ್ನು ಸುಮಾರು ₹20.50 ಕೋಟಿ ವೆಚ್ಚದಲ್ಲಿ ಡಿಸೆಂಬರ್‌ನಿಂದ ನಗರದ ಎಲ್ಲಾ ರಸ್ತೆಗಳ ಡಾಂಬರೀಕರಣ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ನವೀನವಾದ ಅತ್ಯಾಧುನಿಕ ಮಾದರಿಯಲ್ಲಿ ಬಸ್ ತಂಗುದಾಣಗಳನ್ನು ನಿರ್ಮಾಣ ಮಾಡಬೇಕೆಂಬ ಕನಸು ಕಂಡಿದ್ದು, ಅದರಂತೆ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮದಲ್ಲಿ ಲೈಫ್ ಲೈನ್ ಫಿಡ್ಸ್ ಮಾದರಿಯಾಗಿದೆ ಎಂದರು.ಜನರ ಬೇಡಿಕೆಗನುಗುಣವಾಗಿ ಹತ್ತರಲ್ಲಿ ಮೂರನ್ನಾದರೂ ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುವಂತೆ ಕಾಮಗಾರಿ ಕೈಗೊಂಡು ಅಭಿಲಾಷೆ ಮತ್ತು ಸದುದ್ದೇಶ ಹೊಂದಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.ಕಣಿವೆ ರುದ್ರೇಶ್ವರ ದೇವಸ್ಥಾನದ ಸಮೀಪ, ಕಲ್ಯಾಣ ನಗರದಲ್ಲಿ, ಹೌಸಿಂಗ್ ಬೋರ್ಡ್‌ನಲ್ಲಿ ಮತ್ತು ದೊಡ್ಡ ಕುರುಬರ ಹಳ್ಳಿಯಲ್ಲಿ ಈಗಾಗಲೇ ಈ ನಾಲ್ಕು ಬಸ್ ತಂಗುದಾಣಗಳನ್ನು ನಿರ್ಮಾಣ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ನೂತನ ಕಚೇರಿ ಮುಂಭಾಗ ದಂಟರಮಕ್ಕಿ ಬಡಾವಣೆಯಲ್ಲಿ ಮತ್ತು ಪಾಲಿಟೆಕ್ನಿಕ್ ಬಳಿ ಅತ್ಯಾಧುನಿಕ ಬಸ್ ತಂಗುದಾಣ ನಿರ್ಮಾಣ ಮಾಡಲು ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದರು.ವಿದೇಶ ಪ್ರವಾಸ ಸಂದರ್ಭದಲ್ಲಿ ಜರ್ಮನಿಯಲ್ಲಿ ಈ ರೀತಿ ಅತ್ಯಾಧುನಿಕ ಬಸ್ ತಂಗುದಾಣಗಳನ್ನು ನಿರ್ಮಿಸಿರುವುದನ್ನು ಗಮನಿಸಿ ಇದೇ ಮಾದರಿಯಲ್ಲಿ ಕ್ಷೇತ್ರದಲ್ಲೂ ಅಳವಡಿಸಿಕೊಳ್ಳಬೇಕೆಂದು ನಿರ್ಧರಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಬಸ್ ತಂಗುದಾಣ ನಿರ್ಮಿಸಲಾಗಿದೆ ಎಂದು ಹೇಳಿದರು.ಕ್ಷೇತ್ರದಲ್ಲೂ ಪಕ್ಷಾತೀತ, ಜಾತ್ಯಾತೀತವಾಗಿ ನಡೆದುಕೊಳ್ಳಲು ತೀರ್ಮಾನಿಸಿದ್ದು, ಜನರ ಅವಶ್ಯಕತೆಗೆ ತಕ್ಕಂತೆ ಸೌಲಭ್ಯ ಕಲ್ಪಿಸಲು ಮುಂದಾಗಿರುವುದಾಗಿ ಭರವಸೆ ನೀಡಿದರು.ಸುಮಾರು ₹20 ಕೋಟಿ ವೆಚ್ಚದಲ್ಲಿ ಮುಂದಿನ ತಿಂಗಳು ಕೆಎಸ್‌ಆರ್‌ಟಿಸಿ ಸುಸಜ್ಜಿತ ಅತ್ಯಾಧುನಿಕ ಬಸ್ ನಿಲ್ದಾಣವನ್ನು ನಗರದಲ್ಲಿ ನಿರ್ಮಾಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಆಹ್ವಾನಿಸಿ ಶಂಕುಸ್ಥಾಪನೆ ನೆರವೇರಿಸುವುದಾಗಿ ಹೇಳಿದರು.ಈ ಬಾರಿ ಅತೀ ಹೆಚ್ಚು ಮಳೆ ಬಿದ್ದ ಪರಿಣಾಮ ನಗರದಲ್ಲಿ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಯುಜಿಡಿ ಮತ್ತು ಅಮೃತ್ ಯೋಜನೆಯಿಂದ ಹಾನಿಯಾದ ರಸ್ತೆಗಳನ್ನು ಡಿಸೆಂಬರ್‌ನಿಂದ ಡಾಂಬರೀಕರಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಪ್ರಯಾಣಿಕರ ಅವಶ್ಯಕತೆಗೆ ತಕ್ಕಂತೆ ಬಸ್ ತಂಗುದಾಣ ನಿರ್ಮಾಣ ಮಾಡಿ ಇಂದು ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡುತ್ತಿರುವ ಶಾಸಕ ಎಚ್.ಡಿ. ತಮ್ಮಯ್ಯ ಗೆ ಅಭಿನಂದಿಸುವುದಾಗಿ ಹೇಳಿದರು.ನಗರಸಭೆ ಸದಸ್ಯ ಅರುಣ್‌ಕುಮಾರ್ ಮಾತನಾಡಿ, ಕಲ್ಯಾಣ ನಗರದ ಟ್ರಸ್ಟ್ ಜೊತೆ ಸೇರಿ ವಾರ್ಡ್‌ನ್ನು ಸ್ವಚ್ಛಗೊಳಿ ಸುತ್ತಿ ದ್ದೇವೆ ಜೊತೆಗೆ ಇದನ್ನು ಮಾದರಿ ವಾರ್ಡ್ ಮಾಡುವ ಗುರಿ ಹೊಂದಲಾಗಿದ್ದು, ಶಾಸಕರು ನಗರಸಭೆಯೊಂದಿಗೆ ಕೈ ಜೋಡಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಗರದ ಎಲ್ಲಾ ವಾರ್ಡ್‌ಗಳಲ್ಲಿಯೂ ರಸ್ತೆಗಳ ಡಾಂಬರೀಕರಣ, ಬೀದಿನಾಯಿಗಳ ಉಪಟಳ ಸಮಸ್ಯೆ ಇದ್ದು, ಇದಕ್ಕೆ ಅಗತ್ಯಕ್ರಮಕೈಗೊಂಡು ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಆಗ್ರಹಿಸಿದರು.ಕಾರ್ಯಕ್ರಮದಲ್ಲಿ ಸಿಡಿಎ ಅಧ್ಯಕ್ಷ ನಯಾಜ್ ಅಹಮದ್, ನಗರಸಭೆ ಉಪಾಧ್ಯಕ್ಷೆ ಲಲಿತಾನಾಯ್ಕ, ಲೈಫ್ ಲೈನ್ ಫೀಡ್ಸ್ ವ್ಯವಸ್ಥಾಪಕ ನಿರ್ದೇಶಕ
ಕಿಶೋರ್ ಕುಮಾರ್ ಹೆಗ್ಡೆ, ಸದಸ್ಯರಾದ ಗುರುಮಲ್ಲಪ್ಪ, ಎ.ಸಿ. ಕುಮಾರ್, ನಾಮಿನಿ ಸದಸ್ಯ ಕೀರ್ತಿಶೇಠ್, ಆಯುಕ್ತರಾದ ಬಿ.ಸಿ. ಬಸವರಾಜ್, ಸಿಡಿಎ ಆಯುಕ್ತರಾದ ನಾಗರತ್ನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಪ್ರವೀಣ್, ಗಂಗಾಧರ್ ಉಪಸ್ಥಿತರಿದ್ದರು. 11 ಕೆಸಿಕೆಎಂ 3ಚಿಕ್ಕಮಗಳೂರಿನ ಬೈಪಾಸ್ ರಸ್ತೆಯಲ್ಲಿ ನೂತನ ಬಸ್ ನಿಲ್ದಾಣವನ್ನು ಶಾಸಕ ಎಚ್.ಡಿ. ತಮ್ಮಯ್ಯ ಶನಿವಾರ ಉದ್ಘಾಟಿಸಿದರು. ಲೈಪ್ ಲೈನ್ ಎಂಡಿ ಕಿಶೋರ್ ಕುಮಾರ್ ಹೆಗ್ಡೆ, ಸಿಡಿಎ ಅಧ್ಯಕ್ಷ ನಯಾಜ್ ಅಹಮ್ಮದ್, ಪೌರಾಯುಕ್ತ ಬಿ.ಸಿ. ಬಸವರಾಜ್ ಇದ್ದರು.