ನನ್ನ ಮೇಲೆ ನಂಬಿಕೆ, ವಿಶ್ವಾಸವಿಟ್ಟು ಶಾಸಕನಾಗಿ ಆಯ್ಕೆ ಮಾಡಿದರೆ ಶಿರಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ವಿಧಾನ ಪರಿಷತ್ ಸದಸ್ಯನಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದ್ದೇನೆ, ೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ಶಿರಾ ಕ್ಷೇತ್ರದ ಜನತೆ ನನ್ನ ಮೇಲೆ ನಂಬಿಕೆ, ವಿಶ್ವಾಸವಿಟ್ಟು ಶಾಸಕನಾಗಿ ಆಯ್ಕೆ ಮಾಡಿದರೆ ಶಿರಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಹೇಳಿದರು.ಅವರು ಶಿರಾ ಕಾಳಿದಾಸ ನಗರ ಹಾಗೂ ಸೊಪ್ಪಿನಹಟ್ಟಿ ಬಡಾವಣೆಗಳಲ್ಲಿ ಚಿದಾನಂದ್ ಎಂ. ಗೌಡ ಅಭಿಮಾನಿ ಬಳಗದಿಂದ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಶಿರಾ ತಾಲೂಕಿನ ಪ್ರತಿಯೊಂದು ಗ್ರಾಮದ ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ಸೂರ್ಯಬಿಂಬ ಹೈ ಮಾಸ್ಕ್ ದೀಪ ಅಳವಡಿಸಿ ಬೆಳಕು ನೀಡುತ್ತಿರುವ ಸೇವೆ ಹೆಚ್ಚು ತೃಪ್ತಿ ನೀಡುತ್ತಿದೆ. ಅದೇ ರೀತಿ ತಾಲೂಕಿನ ೨೫೦ ಗ್ರಾಮಗಳಲ್ಲಿಯೂ ಕೂಡ ರಂಗೋಲಿ ಸ್ಪರ್ಧೆ ಏರ್ಪಡಿಸಿ ಮಹಿಳೆಯರಲ್ಲಿ ಹೊಸ ಉತ್ಸಾಹದ ಜೊತೆಗೆ ಮಹಿಳೆಯರಲ್ಲಿ ಸ್ನೇಹಮಯ ವಾತಾವರಣ ಮೂಡಿಸಿ ಸಮಾಜದ ಮುಖ್ಯ ವಾಹಿನಿಗೆ ತರುವುದೇ ನಮ್ಮ ಗುರಿ. ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಮಹಿಳೆಯರ ಪ್ರಾಮಾಣಿಕತೆಯೇ ದೊಡ್ಡ ಶಕ್ತಿ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಿಕ್ಕಣ್ಣ, ಗ್ರಾಮಾಂತರ ಮಂಡಲ ಅಧ್ಯಕ್ಷ ಈರಣ್ಣ ಪಟೇಲ್, ಕಾರ್ಯದರ್ಶಿ ಕುಮಾರ್ ಮಾಸ್ಟರ್, ಬೊಪ್ಪರಾಯಪ್ಪ, ಮಹಿಳಾ ಘಟಕದ ನಾಗರತ್ನಮ್ಮ, ಪದ್ಮ ಮಂಜುನಾಥ್, ಹೇಮಲತಾ, ಶೋಭಾ, ವಿಜಯಲಕ್ಷ್ಮಿಮ್ಮ, ಕವಿತಾ, ತಿಮ್ಮರಾಜಮ್ಮ, ಶಕುಂತಲಮ್ಮ, ಯುವ ಮೋರ್ಚಾ ಅಧ್ಯಕ್ಷ ಸ್ನೇಹಪ್ರಿಯ ಶಿವು, ಯುವ ಮುಖಂಡ ಮದ್ದಕ್ಕನಹಳ್ಳಿ ರಂಗನಾಥ್, ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.