ಸಾರಾಂಶ
ಹುಬ್ಬಳ್ಳಿ: ಪಾಲಿಕೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದೇನೆ. ಆದರೆ, ಮಹಾನಗರದ ಅಭಿವೃದ್ಧಿಗೆ ನನ್ನಲ್ಲಿ ಸಾಕಷ್ಟು ಕನಸುಗಳಿವೆ. ನಗರದ ಸೌಂದರ್ಯೀಕರಣವೂ ಒಂದು. ಕುಡಿಯುವ ನೀರು, ರಸ್ತೆ ದುರಸ್ತಿ ಇವುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತೇನೆ...
ಸೋಮವಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾದ ಜ್ಯೋತಿ ಪಾಟೀಲ ಅವರ ಕನಸುಗಳು ಇವು.ಪಾಲಿಕೆಗೆ ಹೊಸಬಳು. ಆದರೆ, ಮೂರು ವರ್ಷಗಳಲ್ಲಿ ಆಡಳಿತ ನಡೆಸಿದ ಮೇಯರ್, ಉಪ ಮೇಯರ್ ಅವರ ಕಾರ್ಯವೈಖರಿಯನ್ನು ಹಾಗೂ ಅಧಿಕಾರಿಗಳ ಜತೆಗೆ ಹೇಗೆ ಸಂಯೋಜನೆ ಮಾಡಿಕೊಂಡು ಕೆಲಸ ಮಾಡಬೇಕು ಎಂಬುದನ್ನು ಹತ್ತಿರದಿಂದ ಗಮನಿಸಿದ್ದೇನೆ. ನಮ್ಮ ಸದಸ್ಯರಲ್ಲಿಯೇ ಅನೇಕ ಹಿರಿಯರು ಇದ್ದಾರೆ. ಅವರೆಲ್ಲರ ಮಾರ್ಗದರ್ಶನದಲ್ಲಿ ಮೇಯರ್ ಹುದ್ದೆ ನಿಭಾಯಿಸುವುದು ಕಷ್ಟವಾಗುವುದಿಲ್ಲ ಎಂದರು.
ಅವಳಿ ನಗರದ ಪ್ರಮುಖ ಸಮಸ್ಯೆಗಳಾದ 24/7 ಕುಡಿಯುವ ನೀರು ಯೋಜನೆ, ಆರೋಗ್ಯ ಕ್ಷೇತ್ರದ ಸುಧಾರಣೆ ಮುಖ್ಯ ಗುರಿಯಾಗಿಟ್ಟುಕೊಂಡು ಕೆಲಸ ಮಾಡಬೇಕೆಂದಿದ್ದೇನೆ. ಸ್ವಚ್ಛತೆ ಕಾಪಾಡುವುದಕ್ಕೆ ಒತ್ತು ನೀಡಲಿದ್ದೇನೆ. ಅದರ ಜತೆಗೆ ಈಗಾಗಲೇ ಪಾಲಿಕೆ ಹಣಕಾಸು ಸ್ಥಿತಿ ಸರಿದಾರಿಗೆ ಬರುತ್ತಿದ್ದು, ಸಂಪನ್ಮೂಲ ಕ್ರೊಡೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿದ್ದೇನೆ ಎಂದು ಹೇಳಿದರು.ನಾನು ಧಾರವಾಡ ಪ್ರತಿನಿಧಿಸುವ ಪಾಲಿಕೆ ಸದಸ್ಯಳಾಗಿದ್ದರೂ ಹು-ಧಾ ಮಹಾನಗರ ಪಾಲಿಕೆ ಮೇಯರ್ ಆಗಿದ್ದೇನೆ. ಹೀಗಾಗಿ ಹುಬ್ಬಳ್ಳಿ-ಧಾರವಾಡ ಅಂತ ಯಾವುದೇ ತಾರತಮ್ಯ ಮಾಡದೇ ಎರಡೂ ನಗರಗಳ ಅಭಿವೃದ್ಧಿಗೆ ಗಮನ ಹರಿಸುತ್ತೇನೆ ಎಂದರು.
ನನ್ನ ಅಧಿಕಾರ ಹಾಗೂ ರಾಜಕಾರಣದಲ್ಲಿ ನಮ್ಮ ಮನೆಯವರು ಯಾರೂ ಹಸ್ತಕ್ಷೇಪ ಮಾಡುವುದಿಲ್ಲ. ಎಂಬಿಎ ಪದವೀಧರೆ ಆಗಿದ್ದರಿಂದ ಸಮರ್ಥವಾಗಿ ನಿಭಾಯಿಸುತ್ತೇನೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.ಮೇಯರ್ ಗೌನ್‌ಗೆ ಅದರದೇ ಆದ ಗೌರವವಿದೆ. ನನ್ನ ಅವಧಿ ಮುಗಿಯುವ ವರೆಗೆ ಮೇಯರ್ ಗೌನ್ ಧರಿಸುತ್ತೇನೆ, ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ಮಹಾನಗರ ಅಭಿವೃದ್ಧಿಗೆ ಗಮನ: ನೂತನ ಮೇಯರ್ ಜತೆ ಸೇರಿ ಹು-ಧಾ ಮಹಾನಗರದ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸುತ್ತೇನೆ ಎಂದು ಉಪ ಮೇಯರ್ ಸಂತೋಷ ಚವ್ಹಾಣ ಹೇಳಿದರು.ಉಪ ಮೇಯರ್ ಆಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಮೇಯರ್ ಹುದ್ದೆಗೆ ಅದರದೇ ಆದ ಅಧಿಕಾರಗಳಿವೆ. ಅವುಗಳನ್ನು ಅರಿತುಕೊಂಡು ನೂತನ ಮೇಯರ್ ಜತೆ ಸಮನ್ವಯದೊಂದಿಗೆ ಕೆಲಸ ಮಾಡುತ್ತೇನೆ. ನನಗೆ ಈ ಗೌರವ ಸಿಗಲು ಕಾರಣಿಕರ್ತರಾದ ಪಕ್ಷದ ಎಲ್ಲ ನಾಯಕರಿಗೆ ಅಭಿನಂದನೆ, ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.