ಸಾರಾಂಶ
ಹಿರೇಕೆರೂರು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶಾಲಾಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಕಾಮಗಾರಿಗಳನ್ನು ನಿರ್ವಹಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಸೂಚನೆ ನೀಡಿದರು.ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆದ ಹಿರೇಕೆರೂರ, ರಟ್ಟೀಹಳ್ಳಿ ತಾಲೂಕಿನ ನರೇಗಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಂತ್ರಿಕ ಸಹಾಯಕರು ಕಾರ್ಯತತ್ಪರತೆಯಿಂದ ಕೆಲಸ ಮಾಡಬೇಕು. ಶಾಲಾಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಶಾಲೆಗಳಲ್ಲಿ ಅಡುಗೆ ಕೇಂದ್ರ ಕಟ್ಟಡಗಳ ನಿರ್ಮಾಣ ಮಾಡಲು ನರೇಗಾ, ಶಿಕ್ಷಣ ಇಲಾಖೆ ಸಿಬ್ಬಂದಿ ಸಮನ್ವಯತೆ ಸಾಧಿಸಿ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.ಅವಳಿ ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ವತಿಯಿಂದ ಏಕಕಾಲದಲ್ಲಿ ಕಾಂಕ್ರೀಟ್ ರಸ್ತೆ ಇಲ್ಲವೇ ಚರಂಡಿ ನಿರ್ಮಾಣ ಕಾಮಗಾರಿ ಪ್ರಾರಂಭಿಸಬೇಕು ಎಂದು ಸೂಚಿಸಿದರು.ತಾಪಂ ನೊಡೆಲ್ ಅಧಿಕಾರಿ ಎಚ್.ವೈ. ಮಿಶಿ, ಇಒ ಮಲ್ಲಿಕಾರ್ಜುನ ಕೆ.ಎಂ., ಬಿಇಒ ಎನ್. ಶ್ರೀಧರ ಸೇರಿದಂತೆ ತಾಪಂ ಅಧಿಕಾರಿಗಳು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ನರೇಗಾ ತಾಂತ್ರಿಕ ಸಹಾಯಕರು ಇದ್ದರು.