ಸಮಗ್ರ, ಸಮತೋಲನ ಅಭಿವೃದ್ಧಿಗೆ ಆದ್ಯತೆ

| Published : Apr 09 2025, 12:33 AM IST

ಸಾರಾಂಶ

ಪ್ರಸ್ತುತ ಸಂದರ್ಭದಲ್ಲಿ ಈಗಿನ ಕಾಲಕ್ಕೆ ಅನುಗುಣವಾಗಿ ನಂಜುಂಡಪ್ಪ ವರದಿಯ ಪುನರ್ ವಿಮರ್ಶೆ ಮಾಡುವ ಜತೆಗೆ ಸದ್ಯದ ಮಾನವ ಅಭಿವೃದ್ಧಿ ಸೂಚ್ಯಂಕ ಆಧರಿಸಿ ಹೊಸ ಮಾರ್ಗಸೂಚಿ ಅಥವಾ ಶಿಫಾರಸುಗಳ ಅಗತ್ಯವಿದೆ.

ಕೊಪ್ಪಳ:

ಸಮಗ್ರ, ಸಮತೋಲನ ಅಭಿವೃದ್ಧಿಗೆ ಆದ್ಯತೆ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯ ಕಾರ್ಯದರ್ಶಿಯೂ ಆಗಿರುವ ವಿತ್ತೀಯ ಸುಧಾರಣೆ ಮತ್ತು ಯೋಜನಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ವಿಶಾಲ್ ಆರ್. ಹೇಳಿದರು.

ಮಂಗಳವಾರ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾಮಟ್ಟದ ಸಂವಾದ ಸಭೆಯಲ್ಲಿ ಮಾತನಾಡಿದರು.

ಡಾ. ಡಿ.ಎಂ. ನಂಜುಂಡಪ್ಪ ವರದಿ 22 ವರ್ಷ ಹಳೆಯಾಗಿದ್ದು ಹಾಗೂ ರಾಜ್ಯದಲ್ಲಿ ಈ ಹಿಂದೆ ಇದ್ದ 175 ತಾಲೂಕು ಬದಲು ಪ್ರಸ್ತುತ 240 ತಾಲೂಕುಗಳಿವೆ ಎಂದು 2023ರ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಅದರಂತೆ ನಂಜುಂಡಪ್ಪ ವರದಿ ಅನುಷ್ಠಾನದಿಂದ ತಾಲೂಕುಗಳ ಅಭಿವೃದ್ಧಿ ಹೊಂದಿರುವ ಹಾಗೂ ಅಭಿವೃದ್ಧಿ ಹೊಂದದೆ ಇರುವ ತಾಲೂಕುಗಳನ್ನು ಗುರುತಿಸಿ ಹೊಸದಾಗಿ ಸೂಚ್ಯಂಕ ಕಂಡು ಹಿಡಿದು ಪ್ರಾದೇಶಿಕ ಅಸಮತೋಲನ ನಿವಾರಿಸಲು ಸರ್ಕಾರ ಆರ್ಥಿಕ ತಜ್ಞ ಪ್ರೊ. ಎಂ. ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ರಚಿಸಿದೆ ಎಂದರು.

ಪ್ರಸ್ತುತ ಸಂದರ್ಭದಲ್ಲಿ ಈಗಿನ ಕಾಲಕ್ಕೆ ಅನುಗುಣವಾಗಿ ನಂಜುಂಡಪ್ಪ ವರದಿಯ ಪುನರ್ ವಿಮರ್ಶೆ ಮಾಡುವ ಜತೆಗೆ ಸದ್ಯದ ಮಾನವ ಅಭಿವೃದ್ಧಿ ಸೂಚ್ಯಂಕ ಆಧರಿಸಿ ಹೊಸ ಮಾರ್ಗಸೂಚಿ ಅಥವಾ ಶಿಫಾರಸುಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಮಿತಿಯು 40ರಿಂದ 50 ಸೂಚ್ಯಂಕಗಳನ್ನು ಪಟ್ಟಿ ಮಾಡಿಕೊಂಡಿದ್ದು, ಅವುಗಳ ಆಧಾರದ ಮೇಲೆ ವಿಸ್ತೃತವಾಗಿ ಅಧ್ಯಯನ ಕೈಗೊಂಡು ಅಗತ್ಯ ಕ್ರಮಗಳನ್ನು ಸಮಿತಿಯು ಶಿಫಾರಸು ಮಾಡಲಿದೆ ಎಂದು ಹೇಳಿದರು.

ಸರ್ಕಾರದ ಅನುದಾನ ಘೋಷಣೆ ಜತೆಗೆ ಕೈಗಾರಿಕೆ, ಆಹಾರ ಸಂಸ್ಕರಣೆ ಮತ್ತಿತರ ಕ್ಷೇತ್ರಗಳಿಗೆ ಯಾವ ರೀತಿಯ ಉತ್ತೇಜನ ನೀಡಬೇಕು ಎಂಬುದನ್ನು ಅರಿತುಕೊಂಡು ಆ ಅಂಶಗಳನ್ನು ವರದಿಯಲ್ಲಿ ಅಳವಡಿಸಲಾಗುವುದು. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಅತ್ಯಂತ ಹಿಂದುಳಿದ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗುವುದು. ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಿಗೆ ಭೇಟಿ ನೀಡಿ, ಆಯಾ ಭಾಗದ ಜನರ ಸಲಹೆ-ಸೂಚನೆ ಪಡೆದುಕೊಳ್ಳಲಾಗುತ್ತಿದೆ. ಈ ಸಭೆಯಲ್ಲಿ ಸಚಿವರು, ಸಂಸದರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿ ತಮ್ಮ ಸಲಹೆ ನೀಡಿದ್ದಾರೆ ಎಂದರು.

ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯ ಎಸ್.ಟಿ. ಬಾಗಲಕೋಟಿ ಮಾತನಾಡಿ, ಐತಿಹಾಸಿಕ, ಭೌಗೋಳಿಕ, ಮಾನವ ನಿರ್ಮಿತ ಕಾರಣಗಳಿಂದಾಗಿ ಪ್ರದೇಶಗಳ ಅಭಿವೃದ್ಧಿ ಹಾಗೂ ಬೆಳವಣಿಗೆ ಭಿನ್ನವಾಗಿರುತ್ತದೆ. ತೀವ್ರ ಅಸಮಾನತೆ, ಜಟಿಲ ಹಾಗೂ ಅಸಮಾಧಾನಕರ ಪರಿಸ್ಥಿತಿಗೆ ಕಾರಣವಾಗುತ್ತದೆ. ಪ್ರಾದೇಶಿಕ ಅಸಮಾನತೆ ನಿವಾರಿಸಲು ಹಲವಾರು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ಹಳೆ ಮೈಸೂರು ಭಾಗದಂತೆ ನಮ್ಮ ಭಾಗ ಅಭಿವೃದ್ಧಿಯಾಗಿಲ್ಲ. ಯಾದಗಿರಿ ಜಿಲ್ಲೆ ಶಿಕ್ಷಣ ಹಾಗೂ ಮಹಿಳಾ ಸಾಕ್ಷರತೆಯಲ್ಲಿ ಬಹಳ ಹಿಂದುಳಿದಿದೆ. ಅದನ್ನು ಬಿಟ್ಟರೆ ಕೊಪ್ಪಳ ಜಿಲ್ಲೆ ಬರುತ್ತದೆ ಎಂದರು.

ಸಂಸದ ಕೆ. ರಾಜಶೇಖರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ರಾಹುಲ್ ರತ್ನಂ ಪಾಂಡೇಯ ಮಾತನಾಡಿದರು.

ಸಭೆಯಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಪಂ ಮುಖ್ಯ ಯೋಜನಾಧಿಕಾರಿ ಡಿ. ಮಂಜುನಾಥ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಟಿ., ಡಿಡಿಪಿಯು ಜಗದೀಶ, ಡಿಡಿಪಿಐ ಶ್ರೀಶೈಲ ಬಿರಾದರ, ಪಶು ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ, ಮುಖಂಡರಾದ ಯಂಕಣ್ಣ ಯರಾಶಿ, ದೇವೇಂದ್ರಪ್ಪ ಬಳೂಟಗಿ, ಶರಣಪ್ಪ ದೊಡ್ಡಮನಿ, ವೀರೇಶ ಸೇರಿದಂತೆ ರೈತ ಮುಖಂಡರು, ಜನಪ್ರತಿನಿಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.