ಜೀವನ ಮೌಲ್ಯ ಶಿಕ್ಷಣಕ್ಕೆ ಆದ್ಯತೆ ಸಿಗಲಿ

| Published : Sep 07 2025, 01:01 AM IST

ಸಾರಾಂಶ

ಮತ್ತೆ ಮನೆಯೇ ಮೊದಲ ಪಾಠಶಾಲೆ ಆಗುವ ಕಾಲದ ಹತ್ತಿರದಲ್ಲಿದ್ದೇವೆ. ಆಚಾರ್ಯ ಸಂಸ್ಕೃತಿಯ ಮುರುಸ್ಥಾಪನೆ ಆಗಬೇಕಿದೆ

ಹಾನಗಲ್ಲ: ಮಕ್ಕಳು ಗುರುಗಳನ್ನು ಅನುಕರಿಸುತ್ತಾರೆ ಎಂಬ ಎಚ್ಚರ, ಜೀವನ ಮೌಲ್ಯಗಳನ್ನು ಕಲಿಸಬೇಕು ಎಂಬ ಕಾಳಜಿ, ರಾಷ್ಟ್ರ ನಿರ್ಮಾಣದ ಪ್ರೇರಣೆ ಶಾಲಾ ಹಂತದಲ್ಲೇ ಗುರುಗಳಿಂದ ಆದರೆ, ಅದುವೇ ಆದರ್ಶ ಶಿಕ್ಷಣ ಎಂದು ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ವಿಜಯಲಕ್ಷ್ಮಿ ಗೇಟಿಯವರ ತಿಳಿಸಿದರು.

ಶುಕ್ರವಾರ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಸ್ಥೆಯ 6 ಅಂಗ ಸಂಸ್ಥೆಗಳ ಶಿಕ್ಷಕರನ್ನೊಳಗೊಂಡು ಎನ್‌ಸಿಜೆಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ, ಮತ್ತೆ ಮನೆಯೇ ಮೊದಲ ಪಾಠಶಾಲೆ ಆಗುವ ಕಾಲದ ಹತ್ತಿರದಲ್ಲಿದ್ದೇವೆ. ಆಚಾರ್ಯ ಸಂಸ್ಕೃತಿಯ ಮುರುಸ್ಥಾಪನೆ ಆಗಬೇಕಿದೆ. ಅಂಕಪಟ್ಟಿಯ ನಮೂದಿಗಿಂತ ಮೌಲ್ಯ ಹಾಗೂ ಸಾಮರ್ಥ್ಯದ ಶಿಕ್ಷಣ ಅತ್ಯಗತ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಸುರೇಶ ರಾಯಕರ, ಮಕ್ಕಳಿಗೆ ಒತ್ತಡದ ಮೂಲಕ ಏನನ್ನೂ ಕಲಿಸಲಾಗದು. ಬಹುತೇಕ ಶಿಕ್ಷಕರು ಪಾಠ ಪ್ರವಚನವಿಲ್ಲದೆ ಕೇವಲ ತಿಂಗಳ ವೇತನಕ್ಕೆ ಮೀಸಲಾಗುವ ಕಾಲದಲ್ಲಿದ್ದೇವೆ ಎಂಬುದೇ ವಿಷಾದದ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ಮಾತನಾಡಿದರು. ನಿರ್ದೇಶಕಿ ರೇಖಾ ಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಕೆ. ಮಾಲತೇಶ, ಸುಭಾಸ ಹೊಸಮನಿ, ನಿರಂಜನ ಗುಡಿ, ಸುಬ್ರಹ್ಮಣ್ಯ ಮಾತನಾಡಿದರು. ನಿರ್ದೇಶಕರಾದ ಹನುಮಂತಪ್ಪ ಮಲಗುಂದ, ದುಶ್ಯಂತ ನಾಗರವಳ್ಳಿ, ಅಶೋಕ ಹಂಗರಗಿ, ಜಗದೇವ ಶಿಡ್ಲಾಪೂರ, ಮಧುಮತಿ ಪೂಜಾರ ಅತಿಥಿಗಳಾಗಿದ್ದರು.

ಸನ್ಮಾನ: ಶೇಕಡಾ ನೂರರಷ್ಟು ಫಲಿತಾಂಶಕ್ಕೆ ಸಾಕ್ಷಿಯಾದ ಆಕ್ಸಪರ್ಡ್‌ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಾದ ಆರ್. ಭಾಗ್ಯಾ, ಪ್ರಭು ಬಾರಿಗಿಡದ, ರೇವಣಪ್ಪ ಹನಕನಹಳ್ಳಿ, ಉಮಾ ಗೊಂಡಲಕರ, ಸುಮಾ ಗೊಂದಿ, ರೇಖಾ ಅಂಗಡಿ ಜನತಾ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕರಾದ ನಿರಂಜನ ಗುಡಿ, ಶಿವಾನಂದ ಗಿರಿಯಣ್ಣನವರ, ಕೆ.ಕೆ. ರೂಪಶ್ರೀ, ಕೆ. ರೇಣುಕಾ, ಪ್ರದೀಪ ಪೂಜಾರ, ಗೌರಮ್ಮ ಕೊಂಡೋಜಿ, ನ್ಯೂ ಸಂಯುಕ್ತ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ರವೀಂದ್ರ ಜಡೆಗೊಂಡರ, ಕೇಶವ ಶೇಷಗಿರಿ, ಜ್ಯೋತಿ ಸಣ್ಣಮನಿ ಅವರನ್ನು ಸಂಸ್ಥೆಯಿಂದ ಗೌರವಿಸಲಾಯಿತು.

ಸಿಂಚನಾ ಮಡಿವಾಳರ ಪ್ರಾರ್ಥನೆ ಹಾಡಿದರು. ಉಪನ್ಯಾಸಕ ರವಿ ಜಡೆಗೊಂಡರ ಸ್ವಾಗತಿಸಿದರು. ಅನುಷಾ ಹೊನ್ನಮ್ಮನವರ ಹಾಗೂ ಭಾರ್ಗವಿ ಬಾಗೇವಾಡಿ ನಿರೂಪಿಸಿದರು. ಉಪನ್ಯಾಸಕ ಕೆ.ಬಿ. ಶೇಷಗಿರಿ ವಂದಿಸಿದರು.