ಸಾರಾಂಶ
ಬ್ಯಾಡಗಿ: ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ನಗರದಲ್ಲಿ ಮೂಲಸೌಕರ್ಯಕ್ಕೆ ಜನರಿಂದ ಒತ್ತಡವಿದ್ದು, ಪಟ್ಟಣದ ಜನರ ಆಶೋತ್ತರಗಳಿಗೆ ಸ್ಪಂದಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು. ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ-4 ಎಸ್‌ಇಪಿ ಟಿಎಸ್‌ಪಿ ಯೋಜನೆಯಡಿ ರು.35.50 ಲಕ್ಷ ವೆಚ್ಚದಲ್ಲಿ ಪಟ್ಟಣದ ಗಾಂಧಿನಗರ ಹಾಗೂ ವಾಲ್ಮೀಕಿ ಸಂಘದಲ್ಲಿರುವ ಉದ್ಯಾನವನಗಳ ಅಭಿವೃದ್ಧಿ, ವಾಲ್ಮೀಕಿ ಸಂಘ ಹಾಗೂ ಸುಭಾಸ ನಗರದಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು. ಮಾರುಕಟ್ಟೆ ಜೊತೆ ಬ್ಯಾಡಗಿ ಪಟ್ಟಣವೂ ಸಹ ಬೆಳೆಯುತ್ತಿದೆ. ಜನಸಂಖ್ಯೆ 40 ಸಾವಿರ ಸಮೀಪಿಸುತ್ತಿದೆ. ಎಲ್ಲರಿಗೂ ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಹಲವು ಅಭಿವೃದ್ಧಿ ಕಾರ್ಯಕೈಗೊಳ್ಳಬೇಕಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಗೆ ಯಾವುದೇ ಚ್ಯುತಿ ಬಾರದಂತೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದರು. ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ಮಾತನಾಡಿ, ಪಟ್ಟಣದಲ್ಲಿನ ಸಾರ್ವಜನಿಕರಿಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ ರಾಜಿ ಇಲ್ಲ, ಕುಡಿಯುವ ನೀರು, ಚರಂಡಿ, ನೈರ್ಮಲ್ಯ ಸೇರಿದಂತೆ ಯಾವುದೇ ರೀತಿಯ ತೊಂದರೆಗಳಿದ್ದಲ್ಲಿ ಪುರಸಭೆಯ ಗಮನಕ್ಕೆ ತಂದಲ್ಲಿ ಶೀಘ್ರದಲ್ಲಿ ಪರಿಹರಿಸುವ ಭರವಸೆ ನೀಡಿದರು.
ಈ ಸಂದರ್ಬದಲ್ಲಿ ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಸರೋಜಾ ಉಳ್ಳಾಗಡ್ಡಿ, ಕಲಾವತಿ ಬಡಿಗೇರ, ಗಾಯತ್ರಿ ರಾಯ್ಕರ, ಕವಿತಾ ಸೊಪ್ಪಿನಮಠ, ಶಿವರಾಜ ಅಂಗಡಿ, ರಾಜೇಸಾಬ ಕಳ್ಯಾಳ, ರಫೀಕ ಅಹದ್ಮ ಮುದಗಲ್, ಸುಮಂಗಲಾ ರಾರಾವಿ, ಸೋಮಣ್ಣ ಸಂಕಣ್ಣನವರ, ಸೋಮಣ್ಣ ಕರ್ಚಾಡ, ಆಶ್ರಯ ಸಮಿತಿ ಅಧ್ಯಕ್ಷ ಮುನಾಫ್ ಏರೇಶಿಮಿ, ಖಾದರಸಾಬ್ ದೊಡ್ಮನಿ, ಮಜೀದ್ ಮುಲ್ಲಾ, ಎ.ಎಂ.ಸೌದಾಗರ, ಅರುಣ ಪಾಟೀಲ ಸೇರಿದಂತೆ ಹಲವರಿದ್ದರು.