ಸಾರಾಂಶ
ಶಿವಮೊಗ್ಗ: ಅಪರಾಧಿಗಳ ಪಾಲಿಗೆ ಇನ್ನು ಮುಂದೆ ಅಪರಾಧ ಮಾಡುವುದಿಲ್ಲ ಎಂಬ ಸಂಕಲ್ಪ ಮಾಡಬೇಕಾದ ಸ್ಥಳವಾಗಬೇಕಿದ್ದ ಸೆರೆಮನೆಗಳು ಕೆಲ ಕೈದಿಗಳ ಪಾಲಿಗೆ ಅರಮನೆಗಳಾಗಿವೆ ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಕಿಡಿಕಾರಿದರು.
ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ನಟೋರಿಯಸ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಅಪರಾಧಿಗಳಿಗೆ ಜೈಲಿನಲ್ಲೇ ಮೊಬೈಲು, ಟಿವಿ, ಬಿರಿಯಾನಿ ಊಟ, ಪಾರ್ಟಿಗೆ ಅವಕಾಶ ನೀಡಿ ರಾಜ್ಯಾತಿಥ್ಯ ನೀಡುತ್ತಿರುವುದು ರಾಜ್ಯದಲ್ಲಿ ಕಾರಾಗೃಹಗಳ ವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಕೈಗನ್ನಡಿಯಾಗಿದೆ. ಆರೋಪಿಗಳು ಪಾರ್ಟಿ ಮಾಡುವುದು, ಟಿವಿ ನೋಡುವುದು, ಮೊಬೈಲ್‌ನಲ್ಲಿ ಮಾತನಾಡುವ ವಿಡಿಯೋಗಳು ಜನರಿಗೆ ಸಿಗುತ್ತವೆ ಎಂದರೆ ರಾಜ್ಯದ ಗೃಹ ಸಚಿವರಿಗೆ ಯಾಕೆ ಸಿಗುವುದಿಲ್ಲ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸುಧಾರಣಾ ಕೇಂದ್ರಗಳಾಗಿ ಇರಬೇಕಾದ ಜೈಲುಗಳು, ಇಂದು ಉಗ್ರರನ್ನು ಹುಟ್ಟುಹಾಕುವ ಕೇಂದ್ರಗಳಾಗಿ ಮಾರ್ಪಡುತ್ತಿವೆ. ಒಬ್ಬ ಸಿನಿಮಾ ನಟನಿಗೆ ಹಾಸಿಗೆ-ದಿಂಬುಗಳಿಗಾಗಿ ಕೋರ್ಟ್‌ಗೆ ಹೋಗಬೇಕಾಗುತ್ತದೆ. ಆದರೆ, ಇಲ್ಲಿನ ವಿಚಾರಣಾಧೀನ ಮತ್ತು ಸಜಾಬಂಧಿಗಳ ಕೈಯಲ್ಲಿ ಕೂತಲ್ಲಿಯೇ ಎಲ್ಲವೂ ಸಿಗುತ್ತಿದೆ ಎಂದು ಹರಿಹಾಯ್ದರು.
ಪರಪ್ಪನ ಅಗ್ರಹಾರ ಜೈಲಿನ ಕೈದಿಗಳಿಗೆ ರಾಜ್ಯಾತಿಥ್ಯ ನೀಡಿದ್ದಕ್ಕೆ ಅವರು ಹುಟ್ಟುಹಬ್ಬ ಆಚರಿಸಿಕೊಂಡ ವಿಡಿಯೋ ವೈರಲ್ ಆಗಿತ್ತು. ಇಂತಹ ಘಟನೆಗಳಿಂದ ಜನರಲ್ಲಿ ಹೊರಗಡೆಗಿಂತ ಜೈಲೇ ಸರಿಯಾದ ಜಾಗ ಎಂಬ ಭಾವನೆ ಮೂಡಿದರೆ, ಕಾನೂನು ಮತ್ತು ಸುವ್ಯವಸ್ಥೆಯ ಕಥೆ ಏನಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.ತಮ್ಮ ಅವಧಿಯಲ್ಲಿ ಜೈಲಿಗೆ ಜ್ಯಾಮರ್ ಹಾಕಿದ್ದಾಗ ವಸತಿ ನಿವಾಸಿಗಳಿಂದ ಆಕ್ಷೇಪ ಬಂದಿತ್ತು. ಅದನ್ನು ಸರಿಪಡಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈಗ ಅದು ಸರಿಪಡಿಸದೆ ಇರುವುದರಿಂದ ಜ್ಯಾಮರ್‌ನಿಂದ ಅನಾನುಕೂಲವಾಗುತ್ತಿರುವ ಬಗ್ಗೆ ಸಾರ್ವಜನಿಕರು ಮತ್ತೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಉತ್ತರಿಸಬೇಕು ಎಂದು ಆಗ್ರಹಿಸಿದರು.
ನಾನು ಗೃಹಸಚಿವನಾಗಿದ್ದಾಗ 20 ವರ್ಷಗಳಿಂದ ಅಲ್ಲೇ ಇದ್ದ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿತ್ತು. ಈಗ ಆ ಅಧಿಕಾರಿಗಳು ವಾಪಸ್ ಆಗಿದ್ದಾರೆ ಎಂದು ಕಾಣಿಸುತ್ತದೆ. ಮಂಗಳೂರು, ಬೆಳಗಾವಿ ಮತ್ತು ಪರಪ್ಪನ ಅಗ್ರಹಾರದಲ್ಲಿ ಆರೋಪಿಗಳಿಗೆ ಸವಲತ್ತುಗಳು, ಮೊಬೈಲ್‌ಗಳು ಸಿಗುವಂತಾಗಿದೆ. ಇದು ಬದಲಾಗಬೇಕು. ಕಾರಾಗೃಹದ ಸಿಬ್ಬಂದಿ ನೇಮಕಾತಿಯೂ ಆಗುತ್ತಿಲ್ಲ. ಕೈದಿಗಳ ಕೈಯಲ್ಲಿ ಮೊಬೈಲ್ ಮೊದಲಾದ ವಸ್ತುಗಳು ಪತ್ತೆಯಾಗುವುದಾದರೆ ಜೈಲುಗಳನ್ನೇ ಬಂದ್ ಮಾಡಬೇಕಾಗುತ್ತದೆ ಎಂದರು.ತಮ್ಮ ಸರ್ಕಾರ ನೆಮ್ಮದಿಯ ವಾತಾವರಣಕ್ಕಾಗಿ ಅನೇಕ ಸುಧಾರಣೆಗಳನ್ನು ಮಾಡಿತ್ತು. ಖೈದಿಗಳ ಕೈಗೆ ಸದಾಕಾಲ ಕೆಲಸ ಕೊಟ್ಟು, ಕೆಲಸ ಹೆಚ್ಚಿಸುವ ಮೂಲಕ ಜೈಲಿನ ಉತ್ಪಾದನೆಯನ್ನು ಸಹ ಹೆಚ್ಚಿಸಿತ್ತು. ತಮ್ಮ ಅವಧಿಯಲ್ಲಿ ಖೈದಿಗಳ ಸಂಬಳವನ್ನೂ ಹೆಚ್ಚಿಸಲಾಗಿತ್ತು. ಆದರೆ, ಈಗಿನ ಸರ್ಕಾರ ಜೈಲಿನ ಬಗ್ಗೆ ಏನೂ ಕ್ರಮ ಕೈಗೊಳ್ಳದ ಕಾರಣ ಈ ಕೃತ್ಯಗಳು ಹೆಚ್ಚು ನಡೆಯುತ್ತಿವೆ. ಕೂಡಲೇ ಸರ್ಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಾವರ್ಕರ್ ಡಿಪಿ ಹಾಕಿಕೊಂಡ ವ್ಯಕ್ತಿಯೊಬ್ಬರಿಗೆ ಜೀವಬೆದರಿಕೆ ಹಾಕಿರುವ ಘಟನೆಯನ್ನು ಖಂಡಿಸಿದ ಅವರು, ಸಾವರ್ಕರ್ ಡಿಪಿ ಹಾಕಿಕೊಂಡರೆ ಇವನಿಗೇನು ಕಷ್ಟ?. ನಟಿ ರಮ್ಯಾ ಅವರಿಗೆ ಅಶ್ಲೀಲ ಮೆಸೇಜ್ ಬಂದ ಪ್ರಕರಣದಲ್ಲಿ ಸುಮೊಟೊ ಪ್ರಕರಣ ದಾಖಲಾಗಿತ್ತು. ಇಂತಹ ಪ್ರಕರಣದಲ್ಲಿ ಸುಮೊಟೊ ಪ್ರಕರಣ ದಾಖಲಿಸಲು ಏನು ಅಡ್ಡಿ, ಈ ಪ್ರಕರಣದ ಬಗ್ಗೆ ಈಗಾಗಲೇ ಎಸ್ಪಿ ಬಳಿ ಮಾತನಾಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಪ್ರಮುಖರಾದ ಮಾಲತೇಶ್, ಕೆ.ವಿ.ಅಣ್ಣಪ್ಪ ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))