ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಮನೆ-ಮನೆಗೂ ಕಸ ಸಂಗ್ರಹಿಸಲು ಬರುವ ವಾಹನಗಳಲ್ಲೂ ವಾಣಿಜ್ಯ ಜಾಹೀರಾತು ಪ್ರಸಾರ ವರ್ಷಕ್ಕೆ ₹ 12ರಿಂದ ₹ 15 ಕೋಟಿ ಆದಾಯ ಗಳಿಸಲು ಪಾಲಿಕೆ ಮುಂದಾಗಿದ್ದು ಮೂರು ಕಂಪನಿಗಳು ಆಸಕ್ತಿ ವಹಿಸಿವೆ. ಹೀಗಾಗಲೇ ಅಧಿಕಾರಿಗಳೊಂದಿಗೆ ಚರ್ಚೆಯನ್ನು ನಡೆಸಿವೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಮನೆ-ಮನೆಗೂ ಕಸ ಸಂಗ್ರಹಿಸಲು ಬರುವ ವಾಹನಗಳಲ್ಲೂ ವಾಣಿಜ್ಯ ಜಾಹೀರಾತು ಪ್ರಸಾರ!.

ಇಂತಹದ್ದೊಂದು ವಿನೂತನ ಪ್ರಯತ್ನಕ್ಕೆ ಹು-ಧಾ ಮಹಾನಗರ ಪಾಲಿಕೆ ಮುಂದಾಗಿದೆ. ಒಂದು ವೇಳೆ ಇದು ಜಾರಿಗೆ ಬಂದಲ್ಲಿ ದೇಶದಲ್ಲೇ ಮೊದಲ ಪ್ರಯತ್ನ ಎಂಬ ಹೆಗ್ಗಳಿಕೆಗೆ ಪಾಲಿಕೆ ಪಾತ್ರವಾಗಲಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 82 ವಾರ್ಡ್‌ಗಳಲ್ಲಿ ನಿತ್ಯ 330ಕ್ಕೂ ಅಧಿಕ ಆಟೋ ಟಿಪ್ಪರ್‌ ಬೆಳಗ್ಗೆ 7ರಿಂದ ಮಧ್ಯಾಹ್ನ 2ರ ವರೆಗೆ ಮನೆ ಮನೆಯಿಂದ ಕಸ ಸಂಗ್ರಹಿಸುತ್ತಿವೆ. ಈ ಆಟೋ ಟಿಪ್ಪರ್‌ಗಳಲ್ಲಿ ಈಗಾಗಲೇ ಆಡಿಯೋ ಸಿಸ್ಟಮ್‌ ಅಳವಡಿಸಿ ಪಾಲಿಕೆ ಆಸ್ತಿ ತೆರಿಗೆ, ಸ್ವಚ್ಛತೆ ಕಾಪಾಡುವುದು, ಹಸಿ ಕಸ, ಒಣ ಕಸ ಪ್ರತ್ಯೇಕಿಸುವುದು ಸೇರಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಹೇಗೆ ಜಾಹೀರಾತು?

ಪ್ರತಿ ಆಟೋ ಟಿಪ್ಪರ್ ನಿತ್ಯವೂ ಒಂದೊಂದು ವಾರ್ಡ್‌ಗಳಲ್ಲಿ 500ಕ್ಕೂ ಅಧಿಕ ಮನೆಗಳಿಗೆ ತೆರಳಿ ಕಸ ಸಂಗ್ರಹಿಸುತ್ತಿದ್ದು, ಒಟ್ಟು 2.5 ಲಕ್ಷ ಮನೆಗೆ ತೆರಳುತ್ತವೆ. ಹೀಗಾಗಿ ಈ ವಾಹನದಲ್ಲಿ ಜಾಹೀರಾತು ಪ್ರಸಾರ ಮಾಡಿದರೆ ಕಂಪನಿಗೂ ತಮ್ಮ ಉತ್ಪನ್ನ ಮಾರಾಟಕ್ಕೆ ಹಾಗೂ ಪಾಲಿಕೆಗೆ ಆದಾಯಕ್ಕೂ ನೆರವಾಗಲಿದೆ ಎಂಬ ಲೆಕ್ಕಾಚಾರವಿದೆ.

ಗರಿಷ್ಠ 30 ಸೆಕೆಂಡ್‌ನಿಂದ 1 ನಿಮಿಷ ಹಾಗೂ ಆಟೋ ಟಿಪ್ಪರ್‌ನಲ್ಲಿ ಒಂದು ಆಡಿಯೋ ಜಾಹೀರಾತು ಪ್ರಸಾರವಾದರೆ ಟೈಮ್‌ ಬ್ಯಾಂಡ್‌ಗೆ ಅನುಗುಣವಾಗಿ ನಿತ್ಯ ₹ 100ರಿಂದ ₹ 150, ಸ್ಥಿರ ಜಾಹೀರಾತು ಪ್ರತಿ ವಾಹನಕ್ಕೆ ತಿಂಗಳಿಗೆ ₹10ರಿಂದ ₹15 ಸಾವಿರ ನಿಗದಿಪಡಿಸಲು ಚಿಂತಿಸಲಾಗುತ್ತಿದೆ. ಈ ಎಲ್ಲ ವಾಹನಗಳಿಗೆ ಜಿಪಿಎಸ್‌, ಜಿಯೋ ಫೆನ್ಸಿಂಗ್‌ ಅಳವಡಿಸಿದ್ದು ಯಾವ ವಾಹನ ಎಷ್ಚು ಜಾಹೀರಾತು ಪ್ರಸಾರ ಮಾಡಿದೆ ಎಂಬ ಮಾಹಿತಿಯೂ ನಿಖರವಾಗಿ ತಿಳಿಯಲಿದೆ.

3 ಕಂಪನಿಗಳ ಉತ್ಸಾಹ:

ಕಸದ ವಾಹನಕ್ಕೆ ಜಾಹೀರಾತು ನೀಡಲು ಮೂರು ಕಂಪನಿಗಳು ಆಸಕ್ತಿ ವಹಿಸಿದ್ದು ಬೆಂಗಳೂರಿನಿಂದ ಆಗಮಿಸಿದ ಕಂಪನಿಯ ಅಧಿಕಾರಿಗಳು ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಗರ ಪರಿವೀಕ್ಷಣೆ ಮಾಡಿ ಸಹಮತ ವ್ಯಕ್ತಪಡಿಸಿವೆ.

ನೀಲನಕ್ಷೆ ಸಿದ್ಧ:

ಇದನ್ನು ಹೇಗೆ ಕಾರ್ಯಾರಂಭ ಮಾಡಬೇಕು? ಪ್ರತಿ ವಾಹನಕ್ಕೆ ಎಷ್ಟು ಬೆಲೆ ನಿಗದಿಗೊಳಿಸಿದರೆ ಉತ್ತಮ, ನಿಮಿಷಕ್ಕೆ, ಗಂಟೆಗೆ, ದಿನಕ್ಕೆ, ಮಾಸಿಕವಾಗಿ ಹೇಗೆ ಜಾಹೀರಾತು ಪಡೆದು ಪ್ರಸಾರ ಮಾಡಬೇಕು ಎಂಬುದರ ಕುರಿತು ಅಧಿಕಾರಿಗಳು ಸಭೆ ನಡೆಸಿ ನೀಲನಕ್ಷೆ ಸಿದ್ಧಪಡಿಸಿದ್ದಾರೆ.

ಮಾಸಿಕ ₹1 ಕೋಟಿ ಗುರಿ:

ಪಾಲಿಕೆಯು ಘನತ್ಯಾಜ್ಯ ನಿರ್ವಹಣೆಗಾಗಿ ಸಾಮಾನ್ಯ ನಿಧಿಯಿಂದ ವಾರ್ಷಿಕ ₹ 55 ಕೋಟಿ ವೆಚ್ಚ ಮಾಡುತ್ತಿದೆ. ಆಟೋ ಟಿಪ್ಪ‌ರ್ ಚಾಲಕರ ವೇತನ, ಡೀಸೆಲ್ ಖರ್ಚು, ವಾಹನಗಳ ದುರಸ್ತಿ, ನಿರ್ವಹಣೆ, ಹೆಚ್ಚುವರಿ ಸಿಬ್ಬಂದಿ ವೇತನ ಸೇರಿ ದೊಡ್ಡ ಮೊತ್ತವನ್ನು ಪಾಲಿಕೆ ಪಾವತಿಸುತ್ತಿದೆ. ಈ ರೀತಿ ಆಟೋ ಟಿಪ್ಪರ್‌ಗಳಲ್ಲಿ ಜಾಹೀರಾತು ಪ್ರಸಾರ ಮಾಡಿ ಮಾಸಿಕ ₹ 1 ಕೋಟಿ, ವಾರ್ಷಿಕ ₹ 12ರಿಂದ ₹ 15 ಕೋಟಿ ಆದಾಯ ಗಳಿಸುವ ಯೋಚನೆ ಹಾಕಿಕೊಳ್ಳಲಾಗಿದೆ.ಕಸ ಸಂಗ್ರಹಿಸುವ ಆಟೋ ಟಿಪ್ಪರ್‌ಗಳಲ್ಲಿ ಜಾಹೀರಾತು ಪ್ರಸಾರ ಮಾಡಲು ಉದ್ದೇಶಿಸಿದ್ದು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ದೊರೆತಿದೆ. ಶೀಘ್ರದಲ್ಲೇ ಟೆಂಡರ್‌ ಕರೆಯಲಾಗುವುದು

ವಿಜಯಕುಮಾರ ಆರ್. ಉಪ ಆಯುಕ್ತ, ಮಹಾನಗರ ಪಾಲಿಕೆ