ಸಾರಾಂಶ
- ಕುಸುಬೂರು ಸರ್ಕಾರಿ ಶಾಲೆಯಲ್ಲಿ ನೂತನ ಶೌಚಾಲಯ, ಕುಡಿಯವ ನೀರಿನ ಘಟಕ, ರಂಗ ಮಂದಿರ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಖಾಸಗಿ ಸಂಘ, ಸಂಸ್ಥೆಗಳು ಕೈಜೋಡಿಸಿ ಮೂಲ ಸೌಕರ್ಯ ಒದಗಿಸಿದರೆ ಸರ್ಕಾರಿ ಶಾಲೆಗಳು ಉಳಿಯಲು ಸಹಾಯಕವಾಗಲಿದೆ ಎಂದು ಕ್ಯೂಲರ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥ ಹಾಗೂ ಶಾಲೆ ಹಳೇವಿದ್ಯಾರ್ಥಿ ಕೆ.ಬಿ.ಲಕ್ಷ್ಮೀನಾರಾಯಣ ಹೇಳಿದರು. ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಯೂಲರ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ನಿರ್ಮಿಸಿದ ನೂತನ ಶೌಚಾಲಯ, ಕುಡಿಯುವ ನೀರಿನ ಘಟಕ ಹಾಗೂ ರಂಗಮಂದಿರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಿಗೂ ಮೂಲ ಸೌಕರ್ಯ ದೊರೆಯುವಂತಾಗಬೇಕು. ಸರ್ಕಾರಿ ಶಾಲೆ ಗಳು ಅಭಿವೃದ್ಧಿಯಾಗ ಬೇಕು. ಈ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕಡಿಮೆಯಾಗುತ್ತಿದ್ದು ಸರ್ಕಾರಿ ಶಾಲೆಗಳಲ್ಲೂ ಓದುವವರ ಸಂಖ್ಯೆ ಹೆಚ್ಚಾಗುವಂತೆ ಮಾಡಬೇಕು. ನಮ್ಮ ಸಂಸ್ಕೃತಿಯಲ್ಲಿ ವಿದ್ಯಾರ್ಥಿಗಳನ್ನು ಬೆಳೆಸಬೇಕು. ಮಕ್ಕಳು ಉತ್ತಮ ಶಿಕ್ಷಣ ಪಡೆದು ನಾಯಕರಾಗಬೇಕು ಎಂದರು.ತುಮಕೂರು ನೆವಿಲ್ ಫೌಂಡೇಶನ್ ನ ಕೆ.ಚಂದ್ರಶೇಖರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಕಂಪನಿ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್ ಆರ್) ಪೋಲಾಗಬಾರದು ಎಂಬ ಉದ್ದೇಶದಿಂದ ಸಂಘ, ಸಂಸ್ಥೆಗಳ ಸಹಕಾರ ಪಡೆದು ಸಮುದಾಯಕ್ಕೆ ಕೊಡುಗೆ ನೀಡಲಾಗಿದೆ ಎಂದರು.
ಹಳೇ ವಿದ್ಯಾರ್ಥಿ ಸಂಘದ ಕೆ.ಮಂಜುನಾಥ್ ಮಾತನಾಡಿ, ಶಿಕ್ಷಣದಿಂದ ಮಾತ್ರ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಾಧ್ಯ. ವಿದ್ಯೆಯಾರು ಕದಿಯಲಾಗದ ಸಂಪತ್ತಾಗಿದೆ ಎಂದರು.ಬೆಂಗಳೂರು ಕ್ಯೂಲರ್ ಕಂಪನಿ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಶಶಿಶೇಖರ್ ರೆಡ್ಡಿ ಮಾತನಾಡಿ, ಕಂಪನಿ ಯಿಂದ ಒದಗಿಸಲಾದ ಮೂಲ ಸೌಕರ್ಯ ಬಳಸಿಕೊಂಡು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಹೆಚ್ಚು ಅಭಿವೃದ್ಧಿಯಾಗ ಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಕ್ಷೇತ್ರಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪಾ ಮಾತನಾಡಿ, ಜಪ ಮಾಡುವ ಕೈಗಳಿಗಿಂತಲೂ ಸೇವೆ ಮಾಡುವ ಕೈಗಳೇ ಶ್ರೇಷ್ಠ. ಲಕ್ಷ್ಮೀನಾರಾಯಣ ಅವರು ಈ ಶಾಲೆ ಹಳೇ ವಿದ್ಯಾರ್ಥಿಯಾಗಿದ್ದು ಪ್ರಸ್ತುತ ಕ್ಯೂಲರ್ ಗ್ರೂಫ್ ಆಫ್ ಇಂಡಿಯಾದ ಮುಖ್ಯಸ್ಥರಾಗಿರುವುದು ಹೆಮ್ಮೆಯ ವಿಷಯವಾಗಿದೆ. ತಾವು ಓದಿದ ಶಾಲೆ ಅಭಿವೃದ್ಧಿಯಲ್ಲಿ ಎಲೆಮರೆ ಕಾಯಿ ಯಂತೆ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರ.ಕ್ಯೂಲರ್ ಕಂಪನಿ ಶಶಿಕುಮಾರ್ ಉಡುಪ, ಮುತ್ತಿನಕೊಪ್ಪ ಗ್ರಾಪಂ ಸದಸ್ಯರಾದ ಬೆಳ್ಳಪ್ಪ, ಸುಧಾಕರ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಎಲ್.ಪ್ರವೀಣ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎನ್.ನಂದೀಶ್, ಕ್ಷೇತ್ರ ಸಮನ್ವಯಾಧಿಕಾರಿ ಸೇವ್ಯಾನಾಯ್ಕ, ಸಿಆರ್ ಪಿ ಗೀತಾ, ಮುಖ್ಯಶಿಕ್ಷಕ ಹೇಮರಾಜ್, ಸಹಶಿಕ್ಷಕಿ ಹೇಮಾವತಿ, ಮಂಜುಳಾ ಇದ್ದರು.