ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದಲ್ಲಿರುವ ಖಾಸಗಿ ಉದ್ಯಮಿಗಳು ಈಸ್ಟ್ ಇಂಡಿಯಾ ಕಂಪನಿಗಳಂತೆ ವರ್ತಿಸುತ್ತಿದ್ದು, ಕನ್ನಡಿಗರಲ್ಲಿ ಕೌಶಲ್ಯಭರಿತ ಪ್ರತಿಭೆಗಳಿಲ್ಲ ಎಂದು ಆರೋಪ ಮಾಡಿರುವುದನ್ನು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ತೀವ್ರವಾಗಿ ಖಂಡಿಸಿದರು.ಕನ್ನಡಿಗರ ನೆಲ-ಜಲ, ವಿದ್ಯುತ್ ಎಲ್ಲ ಮೂಲಭೂತ ಸೌಕರ್ಯಗಳನ್ನು ಪಡೆದು ಉದ್ಯೋಗ ನೀಡುವುದಿಲ್ಲ ಎಂಬುದು ದುರಂಕಾರದ ಪರಮಾವಧಿ. ನಾವು ಬೇರೆ ಕಡೆ ಹೋಗುತ್ತೇವೆ ಎಂದು ಹೇಳುವ ಉದ್ಯಮಿಗಳು ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಕನ್ನಡಿಗರ ಉದ್ಯೋಗಕ್ಕಾಗಿ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಸದನದಲ್ಲಿ ಮಂಡಿಸಿ ಕಾಯಿದೆಯಾಗಿ ಜಾರಿ ಮಾಡಬೇಕು. ವರದಿಯಲ್ಲಿ ಎ ಮತ್ತು ಬಿ ಹುದ್ದೆಗಳಿಗೆ ಶೇ.೬೦ರಷ್ಟು ಸಿ ಮತ್ತು ಡಿ ಹುದ್ದೆಗಳಿಗೆ ಶೇ.೧೦೦ರಷ್ಟು ಉದ್ಯೋಗ ನೀಡಬೇಕು. ಸರ್ಕಾರ ೧೪ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.ಕೇಂದ್ರ ಸರ್ಕಾರಕ್ಕೆ ೯ ಶಿಫಾರಸ್ಸುಗಳನ್ನು ಕಳುಹಿಸಿ ಒತ್ತಡ ಹೇರಬೇಕು. ೨೦೧೭ರ ಪರಿಷ್ಕೃತ ವರದಿಯಲ್ಲಿ ಆದ್ಯತೆ ಮೀಸಲಿನಲ್ಲಿ ಕಾಲ ಕಳೆಯುತ್ತಿದೆ. ಈಗ ಸಿ ಮತ್ತು ಡಿ ಉದ್ಯೋಗಗಳಲ್ಲಿ ಶೇ.೧೦೦ರಷ್ಟು ಉದ್ಯೋಗ ನೀಡಬೇಕು ಎಂದು ಕಾಯಿದೆ ತರಲು ಹೊರಟಿದ್ದ ಸರ್ಕಾರಕ್ಕೆ ಉದ್ಯಮಿಗಳು ಬೆದರಿಕೆ ಹಾಕಿರುವುದಕ್ಕೆ ಮುಖ್ಯಮಂತ್ರಿಗಳು ತಡೆ ಹಿಡಿದಿದ್ದಾರೆ ಎಂದು ದೂರಿದರು.
ಬೇರೆ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯರಿಗೆ ಶೇ. ೬೦ರಷ್ಟು ಉದ್ಯೋಗ ನೀಡಬೇಕೆಂಬ ಕಾಯಿದೆ ಮಾಡಿರುವುದಕ್ಕೆ ಉದ್ಯಮಿಗಳ ತಕರಾರು ಇಲ್ಲ. ಕನ್ನಡಿಗರ ಮೇಲೆ ಇವರಿಗೇಕೆ ಆಕ್ರೋಶ ಎಂದು ಪ್ರಶ್ನಿಸಿದ ಅವರು, ಕನ್ನಡಿಗರಿಗೆ ಸಿ ಮತ್ತು ಡಿ ಉದ್ಯೋಗ ಮೀಸಲಾತಿಯಲ್ಲಿ ಉದ್ಯೋಗ ಖಾತರಿಪಡಿಸುವ ಯಾವುದೇ ನೀತಿ ನಿಯಮಗಳನ್ನು ರೂಪಿಸಿಲ್ಲ ಎಂದು ಆರೋಪಿಸಿದರು.ಸರ್ಕಾರ ತೋರಿಕೆಗೆ ಅಥವಾ ಭಾವನಾತ್ಮಕವಾಗಿ ಏನನ್ನೋ ಸಾಧಿಸಲು ವಿಧಾಯಕ್ಕೆ ಪ್ರಯತ್ನ ಮಾಡದೇ ಕನ್ನಡಿಗರಿಗೆ ಉದ್ಯೋಗಕ್ಕೆ ಬೇಕಿರುವುದು ಕಾನೂನು ಬಲ. ವಿಧಾನ ಸಭೆ, ಪರಿಷತ್ತಿನಲ್ಲಿ ವಿಧೇಯಕ ಅಸ್ತುಕಂಡ ರಾಜ್ಯಪಾಲರ ಅಂಕಿತ ಪಡೆಯುವಲ್ಲಿ ಆಡಳಿತ ಯಂತ್ರ ದಿಟ್ಟ ಹೆಜ್ಜೆಗಳನ್ನಿಡಬೇಕು. ಸರ್ವಪಕ್ಷಗಳು ಒಂದಾಗಲೇಬೇಕು. ಈ ನೆಲದ ಮಕ್ಕಳಿಗೆ ಉದ್ಯೋಗ ಸಿಗಲೇಬೇಕು ಎಂದು ಆಗ್ರಹಿಸಿದರು.
ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರು ಎಲ್ಲರನ್ನೂ ಒಗ್ಗೂಡಿಸಿ ರಾಜ್ಯಾದ್ಯಂತ ಹೋರಾಟ ರೂಪಿಸಲು ಮುಂದಾಗಬೇಕು. ಬರೀ ಸಮ್ಮೇಳನಗಳ ರಾಜ ಆಗುವುದು ಬೇಡ, ಮುಖ್ಯಮಂತ್ರಿಗಳು ಉದ್ಯಮಿಗಳ ಬೆದರಿಕೆಗೆ ಮಣಿಯದೆ ಪರಿಷ್ಕೃತ ವರದಿಯನ್ನು ಜಾರಿ ಮಾಡಲೇಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಡಿ.ಕೆ.ಅಂಕಯ್ಯ, ತಗ್ಗಹಳ್ಳಿ ಬಸವರಾಜು, ಉಮ್ಮಡಹಳ್ಳಿ ನಾಗೇಶ, ಗುಡಿನಹಳ್ಳಿ ಆರಾಧ್ಯ, ಉಮೇಶ್, ಮೋಹನ್ ಚಿಕ್ಕಮಂಡ್ಯ, ಕೆಂಪಯ್ಯ ಇತರರಿದ್ದರು.