ಇಂದಿನಿಂದ ಮೈಸೂರು ರಾಜವಂಶಸ್ಥರ ಖಾಸಗಿ ದರ್ಬಾರ್ ಆರಂಭ

| Published : Oct 03 2024, 01:22 AM IST / Updated: Oct 03 2024, 01:23 AM IST

ಸಾರಾಂಶ

ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆಯ ಸಂಪ್ರದಾಯದಂತೆ ಖಾಸಗಿ ದರ್ಬಾರ್ ಅನ್ನು ಗುರುವಾರ ಆರಂಭಿಸಲಿದ್ದು, 10ನೇ ಬಾರಿ ರತ್ನಖಚಿತ ಸಿಂಹಾಸನಾರೋಹಣ ಏರಲಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಗತಕಾಲದ ವೈಭವ ಸಾರುವ ಖಾಸಗಿ ದರ್ಬಾರ್ ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಅ.3 ರಿಂದ 12ರವರೆಗೆ ನಡೆಯಲಿದ್ದು, ಇದಕ್ಕಾಗಿ ಮೈಸೂರು ಅರಮನೆಯಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆಯ ಸಂಪ್ರದಾಯದಂತೆ ಖಾಸಗಿ ದರ್ಬಾರ್ ಅನ್ನು ಗುರುವಾರ ಆರಂಭಿಸಲಿದ್ದು, 10ನೇ ಬಾರಿ ರತ್ನಖಚಿತ ಸಿಂಹಾಸನಾರೋಹಣ ಏರಲಿದ್ದಾರೆ.

ಕಳೆದ ಒಂಬತ್ತು ವರ್ಷಗಳಿಂದ ರಾಜವಂಶಸ್ಥರಾಗಿ ಖಾಸಗಿ ದರ್ಬಾರ್ ನಡೆಸುತ್ತಿದ್ದ ಯದುವೀರ್ ಅವರು, ಈ ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದು, ಒಬ್ಬ ಜನಪ್ರತಿನಿಧಿಯಾಗಿ ಖಾಸಗಿ ದರ್ಬಾರ್ ನಡೆಸುತ್ತಿರುವುದು ಮೊದಲ ಬಾರಿ. ಈ ಹಿಂದೆ ರಾಜವಂಶಸ್ಥರಾದ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಜನಪ್ರತಿನಿಧಿಯಾಗಿ ಖಾಸಗಿ ದರ್ಬಾರ್ ನಡೆಸಿದ್ದರು.ಖಸಾಗಿ ದರ್ಬಾರ್ ನಡೆಸಲು ಯದುವೀರ್ ಅವರಿಗೆ ಪತ್ನಿ ತ್ರಿಷಿಕಾ ಕುಮಾರಿ, ಪುತ್ರ ಆದ್ಯವೀರ್, ತಾಯಿ ಪ್ರಮೋದಾದೇವಿ ಒಡೆಯರ್, ಕುಟುಂಬ ವರ್ಗದವರು ಹಾಗೂ ಅರಮನೆಯ ಸಿಬ್ಬಂದಿ ವರ್ಗ ಸಾಥ್ ನೀಡಲಿದ್ದಾರೆ.ಖಾಸಗಿ ದರ್ಬಾರ್ ವೈಭವ: ಗುರುವಾರ ನವರಾತ್ರಿಯ ಮೊದಲ ದಿನ ಎಣ್ಣೆ ಶಾಸ್ತ್ರ ಕಾರ್ಯ ನೆರವೇರಲಿದೆ. ಬೆಳಗ್ಗೆ 5.45 ರಿಂದ 6.10ರ ಒಳಗಿನ ಶುಭ ಮುಹೂರ್ತದಲ್ಲಿ ರತ್ನಖಚಿತ ಸಿಂಹಾಸನಕ್ಕೆ ಸಿಂಹದ ಮುಖ ಜೋಡಣೆ ಮಾಡಲಾಗುತ್ತದೆ. ಬೆಳಗ್ಗೆ 7.45 ರಿಂದ 8.45ರ ಒಳಗೆ ಚಾಮುಂಡಿ ತೊಟ್ಟಿಯಲ್ಲಿ ಯದುವಂಶದ ಯದುವೀರ್ ಅವರಿಗೆ ಕಂಕಣಧಾರಣೆ ಮಾಡಲಾಗುತ್ತದೆ. ಬೆಳಗ್ಗೆ 10.30ಕ್ಕೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಹಸುಗಳು ಆಗಮಿಸಲಿವೆ. ಬೆಳಗ್ಗೆ 11ಕ್ಕೆ ಕಳಸ ಪೂಜೆ ಮತ್ತು ಸಿಂಹಾಸನ ಪೂಜೆ ನೆರವೇರಲಿದೆ.

ಬೆಳಗ್ಗೆ 11.35 ರಿಂದ 12.05ರ ಒಳಗೆ ಯದುವೀರ್ ಅವರು ಸಿಂಹಾಸನಾರೋಹಣದ ಮೂಲಕ ಖಾಸಗಿ ದರ್ಬಾರ್ ಆರಂಭವಾಗಲಿದೆ. ಯದುವೀರ್ ಅವರು ನವರಾತ್ರಿಯ ಪ್ರತಿದಿನ ಸಂಜೆ ರಾಜ ಪೋಷಾಕಿನಲ್ಲಿ ಸಿಂಹಾಸನರೂಢರಾಗಿ ಖಾಸಗಿ ದರ್ಬಾರ್ ನಡೆಸುತ್ತಾರೆ.

ಆಯುಧ ಪೂಜೆ: ಅ.11ರಂದು ದುರ್ಗಾಷ್ಟಮಿಯ ವಿಧಿಗಳು, ಮಹಾನವಮಿ ಆಚರಣೆಗಳೂ ನಡೆಯಲಿವೆ. ಅಂದು ಮಧ್ಯಾಹ್ನ 12.20 ರಿಂದ 12.45ರ ಒಳಗೆ ಅರಮನೆಯ ಕಲ್ಯಾಣ ಮಂಟಪದಲ್ಲಿ ರಾಜಮನೆತನದ ಸಂಪ್ರದಾಯದಂತೆ ಯದುವೀರ್ ಅವರಿಂದ ಆಯುಧ ಪೂಜೆಯ ವಿಧಿಗಳು ನೆರವೇರಲಿವೆ. ಸಂಜೆ ಖಾಸಗಿ ದರ್ಬಾರ್ ಮುಗಿದ ನಂತರ ಸಿಂಹಾಸನಕ್ಕೆ ಅಳವಡಿಸಿದ್ದ ಸಿಂಹದ ಮುಖ ಬೇರ್ಪಡಿಸಲಾಗುತ್ತದೆ.

ವಿಜಯದಶಮಿ ಪೂಜೆ: ಅ.12 ರಂದು ವಿಜಯದಶಮಿಯ ಪೂಜಾ ಕೈಂಕರ್ಯಗಳು ನೆರವೇರಲಿವೆ. 11.20 ರಿಂದ 11.45ರ ಒಳಗೆ ವಿಜಯಯಾತ್ರೆ ಹಾಗೂ ಶಮಿ ಪೂಜೆಯ ವಿಧಿಗಳು ನೆರವೇರಲಿವೆ.

ವಿಜಯದಶಮಿಯಂದು ವಿಜಯದ ಸಂಕೇತವಾಗಿ ಮರದ ಮಹಿಷನನ್ನು ಸಿದ್ಧಪಡಿಸಿ, ಕುಂಕುಮ ನೀರು ಬೆರೆಸಿದ ದ್ರವ ಬಳಿದು ದುರ್ಗಾ ಪೂಜೆ ಬಳಿಕ ಬಲಿ ಕೊಡಲಾಗುತ್ತದೆ. ಇದನ್ನು ಮಹಿಷಾಸುರನ ಸಂಹಾರ ಎಂದು ನಂಬಲಾಗುತ್ತದೆ. ಇದಾದ ನಂತರವಷ್ಟೇ ಅರಮನೆ ಆವರಣದಲ್ಲಿ ಸರ್ಕಾರಿ ದಸರಾ ಮಹೋತ್ಸವದ ಜಂಬೂಸವಾರಿಗೆ ಚಾಲನೆ ದೊರೆಯುತ್ತದೆ.ಅ.27ರ ಬೆಳಗ್ಗೆ 10.10 ರಿಂದ 10.45ರ ಒಳಗೆ ರತ್ನಖಚಿತ ಸಿಂಹಾಸನವನ್ನು ಬೇರ್ಪಡಿಸಿ ಭದ್ರತಾ ಖಜಾನೆಗೆ ಕೊಂಡೊಯ್ಯಲಾಗುತ್ತದೆ. ಆ ಮೂಲಕ ರಾಜಮನೆತನದಿಂದ ದಸರಾ ಹಿನ್ನೆಲೆಯಲ್ಲಿ ನಡೆಯುವ ಎಲ್ಲಾ ಧಾರ್ಮಿಕ ವಿಧಿಗಳಿಗೂ ಅಂತಿಮ ತೆರೆ ಬೀಳಲಿದೆ.