ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬೆಂಗಳೂರಲ್ಲಿ 19ಕ್ಕೆ ಪ್ರತಿಭಟನೆ

| Published : Aug 13 2025, 12:30 AM IST

ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬೆಂಗಳೂರಲ್ಲಿ 19ಕ್ಕೆ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಶಾಲೆಗಳ ರಕ್ಷಣೆಗೆ ಹಾಗೂ ಶಾಲೆಗಳಿಗೆ ವಿಧಿಸಿದ ಷರತ್ತುಗಳನ್ನು ಸಡಿಲಗೊಳಿಸಲು ಹಾಗೂ ಕನ್ನಡ ಶಾಲೆಗಳ ಸಬಲೀಕರಣ ಕಾಯ್ದೆ ಜಾರಿಗೆ ಆಗ್ರಹಿಸಿ ಆಗಸ್ಟ್‌ 19ರಂದು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ, ಸರ್ಕಾರ ಬೇಡಿಕೆ ಒಪ್ಪದಿದ್ದಲ್ಲಿ ಸೆ.17ರಂದು ಸರ್ಕಾರದ ವಿರುದ್ಧ ಉಗ್ರ ಹೋರಾಟಕ್ಕೂ ಕಲುಬರಗಿಯಲ್ಲಿ ಸಿದ್ದತೆ ನಡೆಸಲಿದ್ದೇವೆ ಎಂದು ಅಖಿಲ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ರಾಜ್ಯಾಧ್ಯಕ್ಷ ರೇವಣಸಿದ್ಧಪ್ಪ ಜಲಾದೆ ಹೇಳಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ಕನ್ನಡ ಶಾಲೆಗಳ ರಕ್ಷಣೆಗೆ ಹಾಗೂ ಶಾಲೆಗಳಿಗೆ ವಿಧಿಸಿದ ಷರತ್ತುಗಳನ್ನು ಸಡಿಲಗೊಳಿಸಲು ಹಾಗೂ ಕನ್ನಡ ಶಾಲೆಗಳ ಸಬಲೀಕರಣ ಕಾಯ್ದೆ ಜಾರಿಗೆ ಆಗ್ರಹಿಸಿ ಆಗಸ್ಟ್‌ 19ರಂದು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ, ಸರ್ಕಾರ ಬೇಡಿಕೆ ಒಪ್ಪದಿದ್ದಲ್ಲಿ ಸೆ.17ರಂದು ಸರ್ಕಾರದ ವಿರುದ್ಧ ಉಗ್ರ ಹೋರಾಟಕ್ಕೂ ಕಲುಬರಗಿಯಲ್ಲಿ ಸಿದ್ದತೆ ನಡೆಸಲಿದ್ದೇವೆ ಎಂದು ಅಖಿಲ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ರಾಜ್ಯಾಧ್ಯಕ್ಷ ರೇವಣಸಿದ್ಧಪ್ಪ ಜಲಾದೆ ಹೇಳಿದರು.

ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕಳೆದ 9-10 ವರ್ಷಗಳಿಂದ ಕರ್ನಾಟಕದಲ್ಲಿ ಸಾವಿರಾರು ಕನ್ನಡ ಶಾಲೆಗಳು ಮುಚ್ಚಿರು ವುದಕ್ಕೆ, ಕಾರಣ, ಸರ್ಕಾರದ ವಿಪರೀತ ಕಠಿಣ ನಿಯಮಗಳು, ಇವುಗಳಿಂದ ಕನ್ನಡ ಶಾಲೆಗಳು ಸೋತು ಸೊರಗುತ್ತಿವೆ. ಇವತ್ತು ನಮ್ಮ ಮಾತೃಭಾಷೆ ಉಳಿಯಬೇಕು, ಕನ್ನಡ ಉಳಿಯಬೇಕು ಅಂದರೆ ಕನ್ನಡ ಶಾಲೆಗಳ ಸಮಗ್ರ ವಿಕಾಸವಾಗಬೇಕು ಇದು ಸರ್ಕಾರದ ಮುಖ್ಯ ಧೈಯವಾಗಿರಬೇಕು. ಆದರೆ ದುರದೃಷ್ಟವಶಾತ್‌ ಇದು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರದ ನಿರ್ಲಕ್ಷ್ಯದಿಂದ ಪ್ರತಿ ವರ್ಷ ಸಾವಿರಾರು ಕನ್ನಡ ಶಾಲೆಗಳು ಮುಚ್ಚುತ್ತಿರುವುದು, ಕರ್ನಾಟಕದ ಮಟ್ಟಿಗೆ ಬಹಳ ಚಿಂತಾಜನಕ ಸಂಗತಿ. ಹಲವಾರು ಖಾಸಗಿ ಕನ್ನಡ ಮಾಧ್ಯಮ ಶಾಲೆಗಳು ಸರ್ಕಾರದ ನೂರಾರು ನಿಯಮಗಳಿಂದ ಸೋತು ಸುಣ್ಣವಾಗಿವೆ. ಶಾಲೆಗಳನ್ನು ನಡೆಸಲು ಆಗದ ಪರಿಸ್ಥಿತಿ ಇದೆ, ಈ ಪರಿಸ್ಥಿತಿಯಲ್ಲಿ ಕನ್ನಡ ಶಾಲೆಗಳ ಮಾರಣ ಹೋಮ ಆಗುತ್ತಿದೆ ಎಂದರು.

ಸರ್ಕಾರ 1995ರ ನಂತರ ಪ್ರಾರಂಭವಾದ ಖಾಸಗಿ ಶಾಲಾ-ಕಾಲೇಜುಗಳಿಗೆ ಅನುದಾನಕ್ಕೊಳಪಡಿಸಬೇಕು, ಕನ್ನಡ ಶಾಲೆಗಳು ಪ್ರಾರಂಭಿಸಲು ಷರತ್ತುಗಳು ಸರಳೀಕರಣ ಗೊಳಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನವೀಕರಣ ಪ್ರಕ್ರಿಯೇ ಸರಳಗೊಳಿಸಬೇಕು, ಬಡ ಮಕ್ಕಳಿಗೆ ದಾರಿ ದೀಪವಾದ RTE ಖಾಸಗಿ ಶಾಲೆಗಳಿಗೆ ಮರು ಜಾರಿ ಮಾಡಿ, ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ, ರಾಜ್ಯಾದ್ಯಾದಂತ ಅನಧಿಕೃತ ಕೋಚಿಂಗ್‌ ಸೆಂಟರ್‌ಗಳನ್ನು ಬಂದ್‌ ಮಾಡಿ, ಕನ್ನಡ ಶಾಲೆಗಳನ್ನು ಬಂದ್ ಮಾಡಿ ಕರ್ನಾಟಕ ಪಬ್ಲಿಕ್ ಶಾಲೆ (ಇಂಗ್ಲೀಷ್ ಮಾಧ್ಯಮ) ಪ್ರಾರಂಭಿಸುತ್ತಿರುವುದು ಕೈಬೀಡಬೇಕು ಎಂದು ಪ್ರತಿಭಟನೆ ಮೂಲಕ ಒತ್ತಾಯಿಸಲಾಗುವುದು.

ಬೇಡಿಕೆಗಳನ್ನು ಈಡೇರಿಸಲು ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳನ್ನು, ಶಿಕ್ಷಣ ಸಚಿವರನ್ನು ಮನವಿ ಪತ್ರ ಸಲ್ಲಿಸಲಾಗಿದೆ ಆದರೆ ಸರ್ಕಾರ ಈ ನಿಟ್ಟಿನಲ್ಲಿ ನಿರುತ್ಸಾಹ ತೋರು ತ್ತಿದೆ. ಅಧಿವೇಶನದ ಒಳಗಾಗಿ ಈ ಬೇಡಿಕೆಗಳು ಈಡೇರದೆ ಹೋದರೆ ವಿಧಾನಸಭೆಗೆ ಮುತ್ತಿಗೆಯಂತಹ ಬೃಹತ್‌ ರಾಜ್ಯ ಮಟ್ಟದ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಅಖಿಲ ಕರ್ನಾಟಕ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಮಣಿಗೇರಿ ಮಾತನಾಡಿ, ಆ.19ರಂದು ನಡೆಯಲಿರುವ ಹೋರಾಟದಲ್ಲಿ ರಾಜ್ಯದ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಕರು ಭಾಗವಹಿಸಲಿದ್ದಾರೆ. ಒಂದು ಶಿಕ್ಷಣ ಸಂಸ್ಥೆಯಿಂದ ಕನಿಷ್ಠ ಐದು ಜನ ಭಾಗವಹಿಸುವಂತೆ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘದ ಪ್ರಧಾನ‌ ಕಾರ್ಯದರ್ಶಿ ಗುರುನಾಥ ರೆಡ್ಡಿ, ಮಾಣಿಕಪ್ಪ, ಸೈಯದ್‌ ಅಹ್ಮದ್‌ ಮುದ್ದೆ ಹಾಗೂ ಇತರರು ಉಪಸ್ಥಿತರಿದ್ದರು.