ಸಾಲದ ಕಂತು ಬಾಕಿಗೆ ಸಂಬಂಧಿಸಿದಂತೆ ಖಾಸಗಿ ಮೈಕ್ರೋ ಫೈನಾನ್ಸ್‌ನವರು ಏಕಾಏಕಿ ಮನೆಗೆ ಬೀಗ ಹಾಕಿ ಜಪ್ತಿ ಮಾಡಿದ್ದರಿಂದ ತಾಲೂಕಿನ ಹೀಲದಹಳ್ಳಿ ಗ್ರಾಮದ ಸೋಮಲಿಂಗಪ್ಪ ಹೇಳವಜ್ಜಿ ಎಂಬ ಕುಟುಂಬ ಬೀದಿಯಲ್ಲಿ ಜೀವನ ಸಾಗಿಸುವಂತಾಗಿದೆ.
ರಾಣಿಬೆನ್ನೂರು: ಸಾಲದ ಕಂತು ಬಾಕಿಗೆ ಸಂಬಂಧಿಸಿದಂತೆ ಖಾಸಗಿ ಮೈಕ್ರೋ ಫೈನಾನ್ಸ್‌ನವರು ಏಕಾಏಕಿ ಮನೆಗೆ ಬೀಗ ಹಾಕಿ ಜಪ್ತಿ ಮಾಡಿದ್ದರಿಂದ ತಾಲೂಕಿನ ಹೀಲದಹಳ್ಳಿ ಗ್ರಾಮದ ಸೋಮಲಿಂಗಪ್ಪ ಹೇಳವಜ್ಜಿ ಎಂಬ ಕುಟುಂಬ ಬೀದಿಯಲ್ಲಿ ಜೀವನ ಸಾಗಿಸುವಂತಾಗಿದೆ.ಗ್ರಾಮದ ಸೋಮಲಿಂಗಪ್ಪ ಹೇಳವಜ್ಜಿ ರಾಣಿಬೆನ್ನೂರು ನಗರದ ಖಾಸಗಿ ಮೈಕ್ರೋ ಫೈನಾನ್ಸ್‌ನಲ್ಲಿ ಕೃಷಿಗೋಸ್ಕರ (ವೀಳ್ಯದ ಎಲೆ ತೋಟದ ಸಲುವಾಗಿ) ಜೂನ್ 22, 2023ರಂದು ₹7.60 ಲಕ್ಷ ಸಾಲ ಪಡೆದುಕೊಂಡಿದ್ದರು. ಎರಡು ವರ್ಷಗಳ ವರೆಗೆ ಸಾಲದ ಕಂತು ಕಟ್ಟಿದ್ದಾರೆ. ಆದರೆ, ಇತ್ತೀಚಿಗೆ ವೀಳ್ಯದ ಎಲೆ ಬೆಳೆ ಸರಿಯಾಗಿ ಬಾರದ ಕಾರಣ ಕಂತು ಪಾವತಿಸಿರಲಿಲ್ಲ. ಹೀಗಾಗಿ, ಫೈನಾನ್ಸ್‌ನವರು ಸಾಲ ವಸೂಲಾತಿಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಡಿಸೆಂಬರ್ 18, 2025ರಂದು ಸಾಲಗಾರನ ಮನೆ ಜಪ್ತ ಮಾಡಲು ಆದೇಶ ಹೊರಡಿಸಿತ್ತು. ಅದರ ಪ್ರಕಾರ ಫೈನಾನ್ಸ್‌ನವರು ಜ. 12ರಂದು ಕೋರ್ಟಿನಿಂದ ನೇಮಕವಾದ ಏಜಂಟರೊಂದಿಗೆ ಮನೆಗೆ ನೋಟಿಸ್ ಹಚ್ಚಿ ಬೀಗ ಹಾಕಿದ್ದರು. ಹೀಗಾಗಿ, ಮಂಗಳವಾರ ಸಾಲಗಾರ ಸೋಮಲಿಂಗಪ್ಪ ಹೇಳವಜ್ಜಿ ಕುಟುಂಬ ಮನೆಯ ವಸ್ತುಗಳು ಹಾಗೂ ದೇವರ ಮೂರ್ತಿ ಹೊರಗಡೆ ಇಟ್ಟು ಬೀದಿಯಲ್ಲಿ ಜೀವನ ನಡೆಸುತ್ತಿದ್ದಾರೆ. ನೊಂದ ರೈತ ಕುಟುಂಬ ಜಿಲ್ಲಾಡಳಿತ ತಮಗೆ ಸಹಾಯ ಮಾಡಬೇಕು ಎಂದು ಆಗ್ರಹಿಸಿದೆ.