ಈಕ್ವೆಟಾಸ್ ಸಂಸ್ಥೆಯಿಂದ ಸಾಲ ಪಡೆದಿದ್ದ ರೈತ ಕುಟುಂಬದ ವಾಸದ ಮನೆಗೆ ಸೀಝರ್ ಆದೇಶದ ಹಿನ್ನೆಲೆಯಲ್ಲಿ ಬೀಗ ಹಾಕಲಾಗಿದ್ದು, ಸುಮಾರು ೧೨ ದಿನಗಳ ಕಾಲ ಕುಟುಂಬಸ್ಥರು ಮನೆಯ ಹೊರಗಡೆ ಉಳಿಯುವಂತಾಗಿದೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ರೈತ ಸಂಘದ ಮುಖಂಡರು ಬೀಗ ಒಡೆದು ಕುಟುಂಬಕ್ಕೆ ಮನೆ ಪ್ರವೇಶಿಸಲು ಅವಕಾಶ ಕಲ್ಪಿಸಿರುವ ಘಟನೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಉಗನೆ ಕೊಪ್ಪಲು ಗ್ರಾಮದ ಸುಮಾ ಎಂಬವರು ೨೦೨೩ರಲ್ಲಿ ಈಕ್ವೆಟಾಸ್ ಸ್ಮಾಲ್ ಫೈನಾನ್ಸ್ ಸಂಸ್ಥೆಯಿಂದ ಸುಮಾರು ₹ ೧೨ ಲಕ್ಷ ಸಾಲ ಪಡೆದಿದ್ದರು. ಸಾಲ ಪಡೆಯುವ ಸಂದರ್ಭದಲ್ಲಿ ಕುಟುಂಬ ವಾಸವಿದ್ದ ಮನೆಯನ್ನು ಅಡಮಾನವನ್ನಾಗಿ ಮಾಡಲಾಗಿತ್ತು.
ಕನ್ನಡಪ್ರಭ ವಾರ್ತೆ ಹಾಸನ
ಬರಗಾಲ ಹಾಗೂ ಆರ್ಥಿಕ ಸಂಕಷ್ಟದಿಂದ ರೈತ ಕುಟುಂಬಗಳು ತತ್ತರಿಸಿರುವ ನಡುವೆಯೇ, ಸಾಲ ಮರುಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಖಾಸಗಿ ಸ್ಮಾಲ್ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿ ಬಡ ರೈತ ಕುಟುಂಬದ ವಾಸದ ಮನೆಗೆ ಬೀಗ ಹಾಕಿ, ಕುಟುಂಬಸ್ಥರನ್ನು ಹೊರಗೆ ಕಳುಹಿಸಿದ್ದಾರೆ ಎಂಬ ಆರೋಪ ಹಾಸನ ತಾಲೂಕಿನ ಉಗನೆ ಕೊಪ್ಪಲು ಗ್ರಾಮದಲ್ಲಿ ಕೇಳಿಬಂದಿದೆ.ಈಕ್ವೆಟಾಸ್ ಸಂಸ್ಥೆಯಿಂದ ಸಾಲ ಪಡೆದಿದ್ದ ರೈತ ಕುಟುಂಬದ ವಾಸದ ಮನೆಗೆ ಸೀಝರ್ ಆದೇಶದ ಹಿನ್ನೆಲೆಯಲ್ಲಿ ಬೀಗ ಹಾಕಲಾಗಿದ್ದು, ಸುಮಾರು ೧೨ ದಿನಗಳ ಕಾಲ ಕುಟುಂಬಸ್ಥರು ಮನೆಯ ಹೊರಗಡೆ ಉಳಿಯುವಂತಾಗಿದೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ರೈತ ಸಂಘದ ಮುಖಂಡರು ಬೀಗ ಒಡೆದು ಕುಟುಂಬಕ್ಕೆ ಮನೆ ಪ್ರವೇಶಿಸಲು ಅವಕಾಶ ಕಲ್ಪಿಸಿರುವ ಘಟನೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಉಗನೆ ಕೊಪ್ಪಲು ಗ್ರಾಮದ ಸುಮಾ ಎಂಬವರು ೨೦೨೩ರಲ್ಲಿ ಈಕ್ವೆಟಾಸ್ ಸ್ಮಾಲ್ ಫೈನಾನ್ಸ್ ಸಂಸ್ಥೆಯಿಂದ ಸುಮಾರು ₹ ೧೨ ಲಕ್ಷ ಸಾಲ ಪಡೆದಿದ್ದರು. ಸಾಲ ಪಡೆಯುವ ಸಂದರ್ಭದಲ್ಲಿ ಕುಟುಂಬ ವಾಸವಿದ್ದ ಮನೆಯನ್ನು ಅಡಮಾನವನ್ನಾಗಿ ಮಾಡಲಾಗಿತ್ತು.ಸಾಲ ಪಡೆದ ಬಳಿಕ ಸುಮಾರು ₹೩ ಲಕ್ಷದಷ್ಟು ಹಣವನ್ನು ಮರುಪಾವತಿ ಮಾಡಲಾಗಿದೆ. ಆದರೆ ಬಳಿಕ ಕುಟುಂಬಕ್ಕೆ ಅನಿರೀಕ್ಷಿತ ಸಂಕಷ್ಟ ಎದುರಾಗಿದೆ. ಅಡಮಾನವಿಟ್ಟಿದ್ದ ಮನೆಯೇ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಕುಟುಂಬ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಾಲದ ಕಂತುಗಳನ್ನು ನಿಯಮಿತವಾಗಿ ಪಾವತಿಸಲು ಸಾಧ್ಯವಾಗಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. ಸಾಲದ ಬಾಕಿ ಹಣ ಪಾವತಿಯಾಗಿಲ್ಲ ಎಂದು ಆರೋಪಿಸಿ ಫೈನಾನ್ಸ್ ಸಂಸ್ಥೆಯವರು ನ್ಯಾಯಾಲಯದ ಮೊರೆ ಹೋಗಿದ್ದರು. ಬಳಿಕ ನ್ಯಾಯಾಲಯದಿಂದ ಮನೆ ಸೀಜ್ ಮಾಡಲು ಆದೇಶ ಪಡೆದುಕೊಂಡು, ಅದರ ಪ್ರತಿಯನ್ನು ಮನೆಯ ಬಾಗಿಲಿಗೆ ಅಂಟಿಸಿ ಮನೆಗೆ ಬೀಗ ಹಾಕಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ವಾಸದ ಮನೆಗೆ ಬೀಗ ಹಾಕುವ ಸಂದರ್ಭದಲ್ಲಿ ಕುಟುಂಬಸ್ಥರು ಮನವಿ ಮಾಡಿಕೊಂಡರೂ ಸಿಬ್ಬಂದಿ ಯಾವುದೇ ವಿನಾಯಿತಿ ನೀಡದೇ ಮನೆ ಖಾಲಿ ಮಾಡಿಸಿದ್ದಾರೆ. ಇದರಿಂದ ಕುಟುಂಬ ಸದಸ್ಯರು ತಾತ್ಕಾಲಿಕವಾಗಿ ಸಂಬಂಧಿಕರ ಮನೆ ಹಾಗೂ ಇತರೆಡೆ ಆಶ್ರಯ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಮನೆ ಕಳೆದುಕೊಂಡು ಈಗಾಗಲೇ ಸಂಕಷ್ಟದಲ್ಲಿದ್ದೇವೆ. ಸಾಲದ ಹಣವನ್ನು ಪಾವತಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರೂ ನಮ್ಮ ಅಳಲನ್ನು ಕೇಳಲಿಲ್ಲ. ಕೈಮುಗಿದು ಕೇಳಿಕೊಂಡರೂ ಮನೆಗೆ ಬೀಗ ಹಾಕಲಾಯಿತು " ಎಂದು ಕುಟುಂಬದ ಸದಸ್ಯರು ಕಣ್ಣೀರಿಟ್ಟರು.12 ದಿನಗಳ ಬಳಿಕ ರೈತ ಸಂಘದಿಂದ ಬೀಗ ತೆರವು
ಬಡ ರೈತ ಕುಟುಂಬಕ್ಕೆ ಎದುರಾಗಿರುವ ಸಂಕಷ್ಟದ ಬಗ್ಗೆ ಮಾಹಿತಿ ಪಡೆದ ರೈತ ಸಂಘದ ಮುಖಂಡರು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಸುಮಾರು ೧೨ ದಿನಗಳಿಂದ ಬೀಗ ಹಾಕಲಾಗಿದ್ದ ಮನೆಗೆ ಹಾಕಿದ್ದ ಬೀಗವನ್ನು ಒಡೆದು ಕುಟುಂಬಸ್ಥರಿಗೆ ಮನೆಯೊಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು, ಸಾಲ ವಸೂಲಾತಿಯ ಹೆಸರಿನಲ್ಲಿ ಬಡ ರೈತ ಕುಟುಂಬಗಳನ್ನು ಮನೆಗಳಿಂದ ಹೊರಹಾಕುವುದು ಅಮಾನವೀಯ. ಸಾಲ ಪಡೆದಿರುವುದು ಸತ್ಯವಾದರೂ, ಸಂಕಷ್ಟದಲ್ಲಿರುವ ಕುಟುಂಬದ ಪರಿಸ್ಥಿತಿಯನ್ನು ಪರಿಗಣಿಸಿ ಮಾನವೀಯವಾಗಿ ವ್ಯವಹರಿಸಬೇಕು ಎಂದು ಆಗ್ರಹಿಸಿದರು. ಖಾಸಗಿ ಸ್ಮಾಲ್ ಫೈನಾನ್ಸ್ ಸಂಸ್ಥೆಗಳು ಸಾಲ ನೀಡುವಾಗ ಹಲವು ಷರತ್ತುಗಳನ್ನು ವಿಧಿಸುತ್ತವೆ. ಆದರೆ ರೈತರು ಬೆಳೆ ನಷ್ಟ, ಪ್ರಕೃತಿ ವಿಕೋಪ ಅಥವಾ ಇತರ ಕಾರಣಗಳಿಂದ ಸಾಲ ಮರುಪಾವತಿಸಲು ವಿಫಲರಾದ ಸಂದರ್ಭದಲ್ಲಿ ವಸೂಲಾತಿ ಕ್ರಮಗಳು ಮಾನವೀಯವಾಗಿರಬೇಕು. ಬಡ ಕುಟುಂಬದ ವಾಸದ ಮನೆಗೆ ಬೀಗ ಹಾಕಿ ಕುಟುಂಬಸ್ಥರನ್ನು ಹೊರಗೆ ಕಳುಹಿಸಿರುವುದು ಖಂಡನೀಯ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮನೆ ಸೀಝ್ ಮಾಡಲಾಗಿದೆಯೇ ಅಥವಾ ವಸೂಲಾತಿ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು. ಕುಟುಂಬದ ಪರಿಸ್ಥಿತಿಯನ್ನು ಪರಿಗಣಿಸಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಕೃಷಿ ಕ್ಷೇತ್ರದಲ್ಲಿ ಅನಿಶ್ಚಿತತೆ, ಬೆಳೆ ನಷ್ಟ ಹಾಗೂ ಆದಾಯದ ಕೊರತೆಯಿಂದ ರೈತರು ಸಾಲದ ಸುಳಿಯಲ್ಲಿ ಸಿಲುಕುತ್ತಿರುವ ಸಂದರ್ಭದಲ್ಲಿ, ಸಾಲ ವಸೂಲಾತಿ ಪ್ರಕ್ರಿಯೆ ಮತ್ತಷ್ಟು ಸಂಕಷ್ಟಕ್ಕೆ ತಳ್ಳಬಾರದು. ವಿಶೇಷವಾಗಿ ಕುಟುಂಬದ ವಾಸದ ಮನೆಗೆ ಸಂಬಂಧಿಸಿದ ಕ್ರಮ ಕೈಗೊಳ್ಳುವಾಗ ಮಾನವೀಯ ದೃಷ್ಟಿಕೋನ ಅಗತ್ಯವಾಗಿದೆ ಎಂದು ರೈತ ಮುಖಂಡರು ಹೇಳಿದರು. ಉಗನೆ ಕೊಪ್ಪಲು ಗ್ರಾಮದಲ್ಲಿ ನಡೆದಿರುವ ಘಟನೆ ಕುರಿತು ಸಂಬಂಧಪಟ್ಟ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ, ಫೈನಾನ್ಸ್ ಸಂಸ್ಥೆಯ ಸಾಲ ವಸೂಲಾತಿ ಕ್ರಮಗಳ ಕಾನೂನುಬದ್ಧತೆಯನ್ನು ಪರಿಶೀಲಿಸಬೇಕು. ಸಂಕಷ್ಟದಲ್ಲಿರುವ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.