ಸಾರಾಂಶ
ಕನ್ನಡಪ್ರಭ ವಾರ್ತೆ ಹಳೇಬೀಡು
2023-24ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು 100% ಫಲಿತಾಂಶ ದೊರಕಿದೆ ಎಂದು ಬೇಲೂರು ಕ್ಷೇತ್ರ ಶಿಕ್ಷಣಾಧಿಕಾರಿ ಮುಳ್ಳಯ್ಯ ತಿಳಿಸಿದರು.ಹಳೇಬೀಡು ಸಮೀಪ ರಾಜನಸಿರಿಯೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘ, ಶಾಲಾ ಅಭಿವೃದ್ಧಿ ಸಂಘ, ಡ್ರಮ್ ಸೆಟ್ ಮತ್ತು ನಾಮಫಲಕಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಬಾರಿ ಎಸ್‌ಎಸ್ಎಲ್‌ಸಿಯಲ್ಲಿ ಬೇಲೂರು ತಾಲೂಕಿನ 15 ಸರ್ಕಾರಿ ಶಾಲೆಗಳಲ್ಲಿ 100% ಫಲಿತಾಂಶ ನೀಡಿ ಖಾಸಗಿ ಶಾಲೆಗಿಂತ ಹೆಚ್ಚು ಸರ್ಕಾರಿ ಶಾಲೆ ಫಲಿತಾಂಶ ಬಂದಿದೆ. ಆದರೆ ಪೋಷಕರು ಸರ್ಕಾರಿ ಶಾಲೆಗಳನ್ನು ಬಿಟ್ಟು ಖಾಸಗಿ ಶಾಲೆಗೆ ವ್ಯಾಮೋಹಕ್ಕೆ ಯಾಕೆ ಹೋಗುತ್ತಾರೆ ಎಂಬುದು ತಿಳಿಯುತ್ತಿಲ್ಲ. ಕೆಲವೊಂದು ಶಿಕ್ಷಣ ಇಲಾಖೆಯಲ್ಲಿ ಸಣ್ಣಪುಟ್ಟ ಲೋಪವಿದ್ದರೂ ಒಳ್ಳೆಯ ಬೋಧನಾ ಕ್ರಮದಲ್ಲಿ ಶಿಕ್ಷಣ ನೀಡುತ್ತಿರುವುದು ಸರ್ಕಾರಿ ಶಾಲೆ, ಈ ಖಾಸಗಿ ಶಾಲೆಗಳಲ್ಲಿ ಬಣ್ಣದ ಲೋಕದ ಶಾಲೆಗಳು, ಸಮವಸ್ತ್ರ, ಅಲ್ಪ ಇಂಗ್ಲಿಷ್ ಮಾತು ಇದಕ್ಕೆ ಜನರು ಬೆಲೆ ನೀಡುತ್ತಾರೆ.
ಸರ್ಕಾರಿ ಶಾಲೆಯಲ್ಲಿ ಮಕ್ಕಳ ಮೌಲ್ಯ ಆಧಾರಿತ ಬೆಳವಣಿಗೆ ಹಾಗೂ ಶಿಕ್ಷಣ ಪದ್ಧತಿ ಹಾಗೂ ತರಬೇತಿ ನೀಡಿದ ಬೋಧನಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಖಾಸಗಿ ಶಾಲೆಗಳಲ್ಲಿ ಬೋಧನಾ ಕ್ರಮಕ್ಕಿಂತ ಹೆಚ್ಚು ಸಮವಸ್ತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಸರ್ಕಾರಿ ಶಾಲೆ ಉಳಿಸಿ-ಬೆಳೆಸಿ ಎಂದು ತಿಳಿಸಿದರು.ಚಿಕ್ಕಮಗಳೂರು ಶಿಕ್ಷಣಾ ಇಲಾಖೆ ಉಪನಿರ್ದೇಶಕರ ಕಚೇರಿಯ ದೈಹಿಕ ಶಿಕ್ಷಣ ಅಧಿಕಾರಿ ಪಾಲಾಕ್ಷಮೂರ್ತಿ ಮಾತನಾಡಿ, ಪ್ರತಿಯೊಂದು ಶಾಲೆಯಲ್ಲಿ ಕ್ರೀಡಾಕೂಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕ್ರೀಡೆಯಿಂದ ಸಾಧನೆ ಹಾಗೂ ಶಾಲೆಯು ಮುಂದುವರಿಯುತ್ತದೆ. ಊರಿಗೆ ಹೆಸರು ಬರುತ್ತದೆ ಎಂದು ತಿಳಿಸಿದರು.ಪತ್ರಕರ್ತ ರಘುನಾಥ್, ಶಿಕ್ಷಣ ಇಲಾಖೆಯ ಬಿಆರ್‌ಪಿ ಮೋಹನ್ ರಾಜ್, ಹಾಸನದ ನಿವೃತ್ತ ಖಜಾನಾಧಿಕಾರಿ ರಾಮ್ ಗಿರಿ ನಾಯಕ್, ಮುಖ್ಯ ಶಿಕ್ಷಕಿ ವಿನೋದಮ್ಮ, ಚಿದಾನಂದ, ಸುಮಿತ್ರ, ಶಿವಕುಮಾರಿ ಹಾಗೂ ಎಸ್.ಡಿ.ಎಮ್ ಅಧ್ಯಕ್ಷ ಗಂಗಾದರ್, ಶಾಲೆಗೆ ಡ್ರಮ್ ಸೆಟ್ ನೀಡಿದ ಶಿವಪ್ರಸಾದ್, ಗ್ರಾಮಸ್ಥರು, ಮಕ್ಕಳು ಹಾಜರಿದ್ದರು.