ಸಾರಾಂಶ
ಉತ್ತಮ ಶಿಕ್ಷಣ ಕಾರ್ಯಕ್ರಮಗಳಲ್ಲಿ ಪೋಷಕರ ಭಾಗವಹಿಸುವಿಕೆ ಇಲ್ಲ ಕನ್ನಡಪ್ರಭ ವಾರ್ತೆ ಹಾಸನ
ಶುಲ್ಕ ಸಂಗ್ರಹಿಸುವ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ನೀಡಿದರೂ ಸಹ ಮಕ್ಕಳ ಕಾರ್ಯಕ್ರಮದಲ್ಲಿ ಪೋಷಕರು ಭಾಗವಹಿಸದೆ ಇರುವುದು ಬೇಸರದ ಸಂಗತಿ. ಆದ್ದರಿಂದ ಖಾಸಗಿ ಶಾಲೆಗಳು ಉಚಿತ ಶಿಕ್ಷಣ ನೀಡಬೇಕು ಎಂದು ಸಿಆರ್‌ಪಿ ಚಂದ್ರಕಾಂತ್ ಸಲಹೆ ನೀಡಿದರು.ನಗರದ ಚನ್ನಪಟ್ಟಣ ವೃತ್ತದ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಡಯಟ್ ಹಾಗೂ ಬಿಆರ್‌ಸಿ ವತಿಯಿಂದ ಜಂಟಿಯಾಗಿ ಹಮ್ಮಿಕೊಳ್ಳಲಾಗಿದ್ದ ಇಂಗ್ಲಿಷ್ ಫೆಸ್ಟಿವಲ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ನಗರದ ಡಯಟ್ ಹಾಗೂ ಬಿಆರ್‌ಸಿ ವತಿಯಿಂದ ಜಂಟಿಯಾಗಿ ಈ ಇಂಗ್ಲೀಷ್ ಫೆಸ್ಟಿವಲ್ ಕಾರ್ಯಕ್ರಮ ನಡೆಯುತ್ತಿದ್ದು, ಇದರ ಮೂಲ ಉದ್ದೇಶ ಎಂದರೆ ೨೦೨೩-೨೪ನೇ ಸಾಲಿನಲ್ಲಿ ನಾವು ಗುಣಾತ್ಮಕ ಶೈಕ್ಷಣಿಕ ವರ್ಷ ಎಂದು ಕರೆಯುತ್ತೇವೆ. ಈ ಹಿನ್ನೆಲೆಯಲ್ಲಿ ಉತ್ತಮ ಶಿಕ್ಷಣ ನೀಡಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಡಯಟ್ ವತಿಯಿಂದ ಅನೇಕ ವಿಭಿನ್ನವಾದ ಕಾರ್ಯಕ್ರಮವನ್ನು ಏರ್ಪಡಿಸುತ್ತ ಬರಲಾಗಿದೆ ಎಂದರು.
ಪ್ರತಿ ತಿಂಗಳು ಒಂದೊಂದು ವಿಶೇಷವಾದ ಕಾರ್ಯಕವನ್ನು ಆಯೋಜಿಸುತ್ತ ಬರಲಾಗಿದೆ. ಅದರಲ್ಲಿ ಕನ್ನಡ ಭಾಷೆ ಮಾಸಾಚರಣೆ, ಮೆಟ್ರಿಕ್ ಮೇಳವನ್ನು ಡಿಸೆಂಬರ್ ತಿಂಗಳು ನಡೆಸಲಾಗಿದ್ದು, ಈ ತಿಂಗಳಲ್ಲಿ ಇಂಗ್ಲಿಷ್ ಅರಿವು ಮೂಡಿಸಲು ಇಂಗ್ಲಿಷ್ ಫೆಸ್ಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ತಿಂಗಳಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಮಾಡಲಾಗುವುದು. ಇನ್ನೆರಡು ದಿನಗಳಲ್ಲಿ ವಿಜ್ಞಾನ ಶಿಕ್ಷಕರಿಗೆ ತರಬೇತಿ ಕೊಟ್ಟು ನಂತರ ಕಾರ್ಯಕ್ರಮ ನಡೆಸಲಾಗುವುದು ಎಂದು ಕಿವಿಮಾತು ಹೇಳಿದರು.ಕಳೆದ ತಿಂಗಳು ಇಂಗ್ಲಿಷ್ ಭಾಷೆಯ ಶಿಕ್ಷಕರಿಗೆ ಒಂದು ದಿನದ ತರಬೇತಿ ಕೊಡಲಾಗಿದ್ದು, ಪರಿಚಯ ಮಾಡಿಕೊಟ್ಟು ಚಟುವಟಿಕೆಗಳ ಬಗ್ಗೆ ಮೌಲ್ಯಮಾಪನ ಮಾಡುವ ದೃಷ್ಟಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಇಂತಹ ಮಕ್ಕಳ ಇಂಗ್ಲಿಷ್ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಮಕ್ಕಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿತ್ತು. ದುರಂತ ಎಂದರೆ ಪೋಷಕರು ಇಂತಹ ಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲ. ಇದೇ ಕಾರ್ಯಕ್ರವನ್ನು ಕಾನ್ವೆಂಟ್‌ಗಳಲ್ಲಿ ನಡೆದರೆ ಮಕ್ಕಳ ಡೈರಿಯಲ್ಲಿ ಶಿಕ್ಷಕರು ಬರೆದು ಕಳುಹಿಸಿದರೆ ಸಾಕು ಎಲ್ಲರೂ ತಪ್ಪದೆ ಭಾಗವಹಿಸುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಕಾರ್ಯಕ್ರಮವನ್ನು ವಿಭಿನ್ನವಾಗಿ ಮಾಡಲಾಗುತ್ತಿದ್ದರೂ ಪೋಷಕರು ಪಾಲ್ಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಇಂಗ್ಲಿಷ್ ಫೆಸ್ಟಿವಲ್ ದಿನದ ಅಂಗವಾಗಿ ಸರ್ಕಾರಿ ಶಾಲಾ ಮಕ್ಕಳು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟು ಗಮನಸೆಳೆದರು.
ಪ್ರಾಂಶುಪಾಲೆ ವಿನಯಕುಮಾರಿ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶೈಲಜಾ, ಬಿ.ವಿ. ಪುಷ್ಪಲತಾ, ದೈಹಿಕ ಶಿಕ್ಷಕರಾದ ಕೃಷ್ಣೇಗೌಡ, ಸಹ ಶಿಕ್ಷಕರಾದ ಎಚ್.ಎಂ. ಗೀತಾ, ಎಚ್.ಪಿ. ಮಂಜುನಾಥ್, ಕೆ.ಎಂ. ಹರೀಶ್, ಸಿ.ಡಿ. ಭಾರತಿ, ಕೆ.ಬಿ. ರಕ್ಷಾ, ಎಚ್.ಪಿ. ಅನುಪಮ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಲಕ್ಷ್ಮಿ ಇದ್ದರು.ಚನ್ನಪಟ್ಟಣ ವೃತ್ತದ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಡಯಟ್ ಹಾಗೂ ಬಿಆರ್‌ಸಿ ವತಿಯಿಂದ ಜಂಟಿಯಾಗಿ ಹಮ್ಮಿಕೊಳ್ಳಲಾಗಿದ್ದ ಇಂಗ್ಲಿಷ್ ಫೆಸ್ಟಿವಲ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಸಿ.ಆರ್.ಪಿ. ಚಂದ್ರಕಾಂತ್ ಮಾತನಾಡಿದರು.