ಸಾರಾಂಶ
ಬೀದರ್: ರಾಜ್ಯ ಸರ್ಕಾರದ ನೀತಿಯಿಂದ ರಾಜ್ಯಾದ್ಯಂತ ಸುಮಾರು 300 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿದ್ದರೆ, ರಾಜ್ಯದ ಗಡಿ ಜಿಲ್ಲೆ ಬೀದರ್‌ನಲ್ಲಿ 13 ಕನ್ನಡ ಶಾಲೆಗಳು ಸೇರಿದಂತೆ ಒಟ್ಟು 31 ಶಾಲೆಗಳನ್ನು ಮುಚ್ಚಲಾಗಿದೆ ಎಂದು ಜನರ ಧ್ವನಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಂಕುಶ ಗೋಖಲೆ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಜಿಲ್ಲೆಯ 31 ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದ್ದು, ರಾಜ್ಯದಲ್ಲಿ 287 ಶಾಲೆಗಳು ಮುಚ್ಚಿವೆ ಎಂದು ಇಲಾಖೆಯ ಅಂಕಿ-ಅಂಶಗಳೆ ಹೇಳಿವೆ. ಅದರಲ್ಲಿ ಜಿಲ್ಲೆಯ ಔರಾದ್ ತಾಲೂಕಿನಲ್ಲಿ 11, ಬಸವಕಲ್ಯಾಣ 3, ಭಾಲ್ಕಿಯಲ್ಲಿ 13, ಬೀದರ್‌ನಲ್ಲಿ 1 ಹಾಗೂ ಹುಮನಾಬಾದ್‌ನಲ್ಲಿ 3 ಶಾಲೆಗಳು ಮುಚ್ಚಲಾಗಿದೆ ಎಂದರು.ರಾಜ್ಯದಲ್ಲಿ ಶಿಕ್ಷಣ ಖಾಸಗೀಕರಣವಾಗಿದೆ. ಸದ್ಯದ ಕಾಂಗ್ರೆಸ್, ಹಿಂದಿನ ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರಗಳು ಸರ್ಕಾರಿ ಶಾಲೆಗಳನ್ನು ಅಧೋಗತಿ ಹಾಗೂ ಅವನತಿಯತ್ತ ತಂದು ನಿಲ್ಲಿಸಿವೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಕಳೆದ 25 ವರ್ಷಗಳಿಂದ ಸುಮಾರು 3500 ಶಾಲೆಗಳು ಮುಚ್ಚಿದ್ದು, ಇಲ್ಲಿ ಮಕ್ಕಳ ಶೂನ್ಯ ದಾಖಲಾತಿ ಇದೆ. ಒಬ್ಬರೇ ಶಿಕ್ಷಕರಿರುವ ಶಾಲೆಗಳ ಸಂಖ್ಯೆ 169 ಇವೆ. ರಾಜ್ಯದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಶಾಲೆಗಳಿವೆ ಎಂದು ಗೋಖಲೆ ಅಂಕಿ ಅಂಶಗಳನ್ನು ತೆರೆದಿಟ್ಟರು.
ಉನ್ನತ ಶಿಕ್ಷಣ ಪಡೆದು ಸಿಇಟಿ, ಟಿಇಟಿ ಉತ್ತೀರ್ಣನಾಗಿ ಶಿಕ್ಷಕನೆಂದು ಸರ್ಕಾರಿ ನೇಮಕಾತಿ ಆಗುತ್ತಿದ್ದರೂ ಅಂತಹ ಶಾಲೆ ಫಲಿತಾಂಶ ಕಡಿಮೆ ಬರುತ್ತಿದೆ. ಅದೇ ಪರೀಕ್ಷೆಯಲ್ಲಿ ಅನುತ್ತೀರ್ಣನಾದವರು ಖಾಸಗಿ ಶಾಲೆಯಲ್ಲಿ ಎಲ್ಲಾ ವಿಷಯಗಳನ್ನು ಬೋಧಿಸಿದರೆ ಅಲ್ಲಿನ ಮಕ್ಕಳು ರ್‍ಯಾಂಕ್‌ನಲ್ಲಿ ಬರುತ್ತಾರೆ. ಇದೇ ವ್ಯವಸ್ಥೆ ಇದ್ದರೆ ಮುಂದಿನ 10 ವರ್ಷಗಳಲ್ಲಿ ಸರ್ಕಾರಿ ಶಾಲೆಗಳೆ ಇಲ್ಲದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಕೊಡುವ ಶಿಕ್ಷಕರನ್ನೇ ಶಾಲಾ ಕೋಣೆ ಕಟ್ಟುವಲ್ಲಿ, ಬಿಸಿ ಊಟ ನೀಡಲು, ತರಕಾರಿ ತರಲು ಹೀಗೆ ಬೋಧನೆ ಬಿಟ್ಟು ಬೇರೆ ಕೆಲಸಕ್ಕೆ ಮಾಡಿಸುವುದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಜನರು ಹಿಂಜರಿಯುತ್ತಿದ್ದಾರೆ ಎಂದರು.ಸರ್ಕಾರಿ ಶಾಲೆಗಳನ್ನು ಉಳಿಸಬೇಕಾದರೆ ಸರ್ಕಾರಿ ಶಿಕ್ಷಕರು ಹಾಗೂ ಸರ್ಕಾರಿ ನೌಕರರ ಮಕ್ಕಳು ಕನಿಷ್ಟ 1ರಿಂದ 5ನೇ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ಓದುವ ಬಗ್ಗೆ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
1ರಿಂದ 10ನೇ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ಮಕ್ಕಳಿಗೆ ಸಿಇಟಿ, ನೀಟ್ ಹಾಗೂ ಸರ್ಕಾರಿ ಹುದ್ದೆಗಳಲ್ಲಿ ಶೇ.10ರಷ್ಟು ಮಿಸಲಾತಿ ಕಲ್ಪಿಸಬೇಕು ಇಲ್ಲದಿದ್ದಲ್ಲಿ ಸರ್ಕಾರವೇ ನೇರವಾಗಿ ಶಾಲೆಗಳನ್ನು ಮುಚ್ಚಿದಂತಾಗುತ್ತದೆ. ಇದಕ್ಕೆ ಸಚಿವರು ಹಾಗೂ ನೌಕರರು ಕಾನೂನು ತರಲು ಮುಂದಾಗಬೇಕೆಂದು ತಿಳಿಸಿದರು. ಸಂಸ್ಥೆಯ ಜಿಲ್ಲಾಧ್ಯಕ್ಷ ರಾಜಕುಮಾರ ಶಿಂಧೆ, ತಿಪ್ಪಣ್ಣ ವಾಲಿಕರ, ಪರಮೇಶ್ವರ ಪಾಟೀಲ್, ರವಿ ಕೋಟೇರ್, ಮಾರುತಿ ಕಾಂಬಳೆ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))