ಕಳೆದೆರಡು ವರ್ಷಗಳಿಂದ ಮೈಷುಗರ್‌ಅನ್ನು ಸ್ವಾವಲಂಬಿಯಾಗಿಸಲು ಸ್ವಂತ ಸಾಮರ್ಥ್ಯದಿಂದ ₹೧೬ ಕೋಟಿ ಮೌಲ್ಯದ ವಿದ್ಯುತ್ ಉತ್ಪಾದಿಸಲಾಗಿದೆ. ನೆನೆಗುದಿಗೆ ಬಿದ್ದಿದ್ದ ₹೨೭೦ ಕೋಟಿಗಳನ್ನು ಮೈಷುಗರ್‌ಗೆ ನೀಡಿ ಆರ್ಥಿಕ ಶಕ್ತಿಯನ್ನು ತುಂಬಲಾಗಿದೆ. ಆದಾಯ ತೆರಿಗೆ ಮನ್ನಾ, ₹೧೨೭ ಕೋಟಿ ಮೌಲ್ಯದ ನಾಗರಾಜಪ್ಪನವರ ಆಸ್ತಿ ವಸೂಲಿ ಕ್ರಮಕ್ಕೆ ಮುಂದಾಗಿರುವುದು ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಮುನ್ನಡೆಸುವುದರ ಸಂಕೇತವಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಪ್ರಸ್ತಾವನೆಯಾಗಲೀ, ಆಲೋಚನೆಯಾಗಲೀ ಸರ್ಕಾರದ ಮುಂದಿಲ್ಲ. ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿಯೇ ಯಶಸ್ವಿಯಾಗಿ ಮುನ್ನಡೆಯಲಿದೆ ಎಂದು ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಸ್ಪಷ್ಟಪಡಿಸಿದರು.೨೦೨೬- ೨೭ನೇ ಹಂಗಾಮಿಗೆ ಈಗಾಗಲೇ ಬಾಯ್ಲಿಂಗ್ ಹೌಸ್, ಬಾಯ್ಲಿಂಗ್ ದುರಸ್ತಿ, ಕಾಕಂಬಿ ಟ್ಯಾಂಕ್ ನಿರ್ಮಾಣಕ್ಕೆ ₹೭೪ ಕೋಟಿ ಸಾಲದ ಪ್ರಸ್ತಾವನೆಯು ಸರ್ಕಾರದಲ್ಲಿ ಅನುಮೋದನೆ ಹಂತದಲ್ಲಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಕ್ಕರೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಖಾನೆಯನ್ನು ಸಮರ್ಥವಾಗಿ ಮುನ್ನಡೆಸಲು ಸಹಕರಿಸುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದೆರಡು ವರ್ಷಗಳಿಂದ ಮೈಷುಗರ್‌ಅನ್ನು ಸ್ವಾವಲಂಬಿಯಾಗಿಸಲು ಸ್ವಂತ ಸಾಮರ್ಥ್ಯದಿಂದ ₹೧೬ ಕೋಟಿ ಮೌಲ್ಯದ ವಿದ್ಯುತ್ ಉತ್ಪಾದಿಸಲಾಗಿದೆ. ನೆನೆಗುದಿಗೆ ಬಿದ್ದಿದ್ದ ₹೨೭೦ ಕೋಟಿಗಳನ್ನು ಮೈಷುಗರ್‌ಗೆ ನೀಡಿ ಆರ್ಥಿಕ ಶಕ್ತಿಯನ್ನು ತುಂಬಲಾಗಿದೆ. ಆದಾಯ ತೆರಿಗೆ ಮನ್ನಾ, ₹೧೨೭ ಕೋಟಿ ಮೌಲ್ಯದ ನಾಗರಾಜಪ್ಪನವರ ಆಸ್ತಿ ವಸೂಲಿ ಕ್ರಮಕ್ಕೆ ಮುಂದಾಗಿರುವುದು ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಮುನ್ನಡೆಸುವುದರ ಸಂಕೇತವಾಗಿದೆ ಎಂದು ಹೇಳಿದರು.ಸಾರ್ವಜನಿಕರಿಂದ ಬಂದಿರುವ ದೂರುಗಳ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಮೈಷುಗರ್‌ನಲ್ಲಿ ನಡೆದಿರುವ ಕೆಲವೊಂದು ಕಾನೂನುಬಾಹೀರ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ನೇಮಕ ಮಾಡಿರುವುದು ಸತ್ಯ. ಅದನ್ನು ಖಾಸಗೀಕರಣ ಉದ್ದೇಶಕ್ಕಾಗಿಯೇ ರಚನೆ ಮಾಡಲಾಗಿದೆ ಎನ್ನುವುದು ಊಹಾಪೋಹವಷ್ಟೇ. ಸರ್ಕಾರಿ ಸ್ವಾಮ್ಯದಲ್ಲಿಯೇ ಕಾರ್ಖಾನೆಯನ್ನು ನಿರ್ವಹಣೆ ಮಾಡುವ ಮೂಲಕ ಉತ್ತಮ ಪ್ರಗತಿಯನ್ನು ತೋರಿಸುತ್ತೇವೆ ಎಂದು ಭರವಸೆ ನೀಡಿದರು.
ತನಿಖಾ ಸಮಿತಿಯಲ್ಲಿ ಮೈಷುಗರ್ ಕಾರ್ಖಾನೆ ವ್ಯಾಪ್ತಿಯ ರೈತ ಮುಖಂಡರಿಲ್ಲದಿರುವ ಬಗ್ಗೆ ಪ್ರಶ್ನಿಸಿದಾಗ, ಈ ಕುರಿತು ಸರ್ಕಾರಕ್ಕೆ ನಾನೇ ಖುದ್ದು ಪತ್ರ ಬರೆದು ಗಮನಸೆಳೆಯುತ್ತೇನೆ. ತನಿಖೆ ನಡೆಯುವ ಸಮಯದಲ್ಲಿ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಹಾಜರಿರದೆ ಪಾರದರ್ಶಕವಾಗಿ ತನಿಖೆ ನಡೆಸಲು ಸಹಕರಿಸುವುದಾಗಿ ಹೇಳಿದರು.೨೦೨೬- ೨೭ನೇ ಸಾಲಿನಿಂದ ಆರ್.ಬಿ.ಟೆಕ್ ಕಂಪನಿಗೆ ಕಾರ್ಖಾನೆ ಗುತ್ತಿಗೆ ನೀಡದಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕಳಪೆ ದರ್ಜೆಯ ಕಂಪನಿಗೆ ಗುತ್ತಿಗೆ ನೀಡದೆ ಗುಣಮಟ್ಟದಿಂದ ಕಬ್ಬು ಅರೆಯುವ ಕಂಪನಿಯವರಿಗೆ ಟೆಂಡರ್ ನೀಡುವಂತೆ ಮನವಿ ಮಾಡಲಾಗಿದೆ.
೧೧ ವರ್ಷಗಳ ಬಳಿಕ ಅತಿ ಶೀಘ್ರದಲ್ಲಿಯೇ ಮೈಷುಗರ್ ಸಾಮಾನ್ಯಸಭೆ ಕರೆಯಲಾಗುವುದು. ಕಾರ್ಖಾನೆ ಹಿತೈಷಿಗಳು, ರೈತರು ತಮ್ಮ ವಿಚಾರವನ್ನು ಸಾಮಾನ್ಯಸಭೆಯಲ್ಲಿ ಮಂಡಿಸಬಹುದು. ಸಭೆಯಲ್ಲಿ ಮುಕ್ತವಾಗಿ ಚರ್ಚಿಸಲು ಕಾರ್ಖಾನೆ ಆಡಳಿತ ಮಂಡಳಿ ಸಿದ್ಧವಿದೆ ಎಂದ ಅವರು, ನೆನೆಗುದಿಗೆ ಬಿದ್ದಿರುವ ಎಲ್ಲಾ ಆದಾಯ ತೆರಿಗೆ ಇಲಾಖೆ ಐಟಿ ರಿಟರ್ನ್ಸ್ ಫೈಲ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಶಿಸ್ತುಬದ್ಧ ಮತ್ತು ಪಾರದರ್ಶಕವಾಗಿ ಮೈಷುಗರ್ ಕಾರ್ಖಾನೆಯನ್ನು ಪ್ರಗತಿಯತ್ತ ಮುನ್ನಡೆಸುವುದಾಗಿ ಸ್ಪಷ್ಟಪಡಿಸಿದರು.ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಮಾತನಾಡಿ, ಮಾಜಿ ಶಾಸಕ ಕೆ.ಸುರೇಶ್‌ಗೌಡ ಅವರು ಸಚಿವರ ವಿರುದ್ಧ ಆಧಾರರಹಿತವಾಗಿ ಆರೋಪ ಮಾಡುತ್ತಿದ್ದಾರೆ. ತಾಲೂಕು ಕಚೇರಿಯಲ್ಲಿ ನಡೆದಿರುವ ಅಕ್ರಮಗಳಿಗೂ ಸಚಿವರಿಗೂ ಸಂಬಂಧವಿಲ್ಲದಿದ್ದರೂ ಸಚಿವರೇ ನೇರ ಹೊಣೆಗಾರರು ಎಂದು ಆರೋಪಿಸುತ್ತಿದ್ದಾರೆ. ಈ ಸಂಬಂಧ ಲೋಕಾಯುಕ್ತ ಅಧಿಕಾರಿಗಳು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರಲ್ಲಿ ಹಲವರನ್ನು ಈಗಾಗಲೇ ಬಂಧಿಸಲಾಗಿದೆ. ರಾಜಕೀಯ ಕಾರಣಕ್ಕಾಗಿ ಸಚಿವರ ಮೇಲೆ ಆರೋಪ ಹೊರಿಸುವುದರನ್ನು ಖಂಡಿಸುವುದಾಗಿ ಹೇಳಿದರು.
ಗೋಷ್ಠಿಯಲ್ಲಿ ಕೆ.ಎನ್.ನಾಗರಾಜು, ವಿಜಯಕುಮಾರ್, ಸಿ.ಎಂ.ದ್ಯಾವಪ್ಪ, ಸಂಪತ್, ಕಿರಣ್‌ಕುಮಾರ್, ಸುಂಡಹಳ್ಳಿ ಮಂಜುನಾಥ್ ಇದ್ದರು.೨೪ಕೆಎಂಎನ್‌ಡಿ-೧
ಮಂಡ್ಯದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿದರು.