ಕೃಷಿಕರ ಮನೆ ಬಾಗಿಲಿಗೆ ಸವಲತ್ತು ತಪುಪಿಸುವೆ: ರೇವಲಿಂಗಯ್ಯ

| Published : Jul 14 2024, 01:40 AM IST

ಸಾರಾಂಶ

ರಾಮನಗರದಲ್ಲಿ ಕೃಷಿಕ ಸಮಾಜದ ತಾಲೂಕು ಅಧ್ಯಕ್ಷರಾಗಿ ರೇವಲಿಂಗಯ್ಯ(ಅಪ್ಪಾಜಯ್ಯ), ಉಪಾಧ್ಯಕ್ಷರಾಗಿ ಎಂ.ಉದಯಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ.

ರಾಮನಗರ: ಕೃಷಿಕ ಸಮಾಜದ ತಾಲೂಕು ಅಧ್ಯಕ್ಷರಾಗಿ ರೇವಲಿಂಗಯ್ಯ(ಅಪ್ಪಾಜಯ್ಯ), ಉಪಾಧ್ಯಕ್ಷರಾಗಿ ಎಂ.ಉದಯಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ.

ಹಿಂದಿನ ಅಧ್ಯಕ್ಷರಾಗಿದ್ದ ಪ್ರೇಮ್ ಕುಮಾರ್ ಮತ್ತು ಉಪಾಧ್ಯಕ್ಷರಾಗಿದ್ದ ಪುಟ್ಟರಾಜು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಚನ್ನಮಾನಹಳ್ಳಿ ಕ್ಷೇತ್ರದ ನಿರ್ದೇಶಕ ರೇವಲಿಂಗಯ್ಯ (ಅಪ್ಪಾಜಯ್ಯ) ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಟ್ಟಮಡು ಕ್ಷೇತ್ರದ ನಿರ್ದೇಶಕ ಉದಯಕುಮಾರ್ ನಾಮಪತ್ರ ಸಲ್ಲಿಸಿದ್ದರು.

ಎರಡೂ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಯಿತು.

ಕೃಷಿಕ ಸಮಾಜದ ನೂತನ ಅಧ್ಯಕ್ಷ ರೇವಲಿಂಗಯ್ಯ ಮಾತನಾಡಿ, ತಮ್ಮ ಅವಧಿಯಲ್ಲಿ ಸರ್ಕಾರ ಹಾಗೂ ಕೃಷಿ ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಕೃಷಿಕರ ಮನೆ ಬಾಗಿಲಿಗೆ ತಲುಪಿಸುತ್ತೇನೆ. ಎಲ್ಲಾ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೈತರಿಗೆ ಉಪಯುಕ್ತ ಕೆಲಸಗಳನ್ನು ಮಾಡಲು ಶ್ರಮಿಸಲಾಗುವುದು. ತಮ್ಮ ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲಾ ನಿರ್ದೇಶಕರು, ಸದಸ್ಯರು ಹಾಗೂ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಎ.ಸಿ.ಲಕ್ಷ್ಮೀನಾರಾಯಣ ಅವರನ್ನು ನೂತನ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು. ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಜಿಲ್ಲಾ ಪ್ರತಿನಿಧಿ ಬಿ.ಗೋಪಾಲ್, ಗೌರವ ಕಾರ್ಯದರ್ಶಿ ಎನ್.ಶ್ರೀಧರ್, ನಿರ್ದೇಶಕರಾದ ಎಸ್.ಟಿ.ಪ್ರೇಮ್ ಕುಮಾರ್, ಟಿ.ಕೆ.ಶಾಂತಪ್ಪ, ಇಟ್ಟಮಡು ಶ್ರೀನಿವಾಸ್, ಕೆ.ಶಿವಲಿಂಗಯ್ಯ, ಪುಟ್ಟಗೌರಮ್ಮ, ಸಿ.ಎನ್.ನಾಗರಾಜು, ಮಲ್ಲಿಕಾರ್ಜುನ, ಪ್ರಕಾಶ್ ಅಭಿನಂದಿಸಿದರು.