ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಆರ್‌ಎಸ್‌ಎಸ್ ನಿಷೇಧ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಎಲ್ಲಿಯೂ ಹೇಳಿಲ್ಲ. ಸರ್ಕಾರಿ ಜಾಗ, ಶಾಲಾ ಕಾಲೇಜುಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸಿಎಂಗೆ ಪತ್ರ ಬರೆದಿದ್ದಾರೆ ಎಂದು ಶಾಸಕ ಪಿ.ರವಿಕುಮಾರ್ ಎಂದು ಹೇಳಿದರು.ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೆರಗೋಡು ಗಣೇಶೋತ್ಸವ ವೇಳೆ ಆರ್‌ಎಸ್‌ಎಸ್ ಸ್ಕೂಲ್‌ನಿಂದ ಡಿಜೆ ಹೊರಬಂತು. ಸ್ಕೂಲ್‌ಗೂ ಡಿಜೆಗೂ ಏನು ಸಂಬಂಧ. ಸ್ಕೂಲ್ ಮಕ್ಕಳಿಗೆ ಶಿಕ್ಷಣ ಕೊಡಬೇಕು. ರಾಜಕಾರಣ ಅಲ್ಲ. ಆರ್‌ಎಸ್‌ಎಸ್ ಕೋಮು ವಿಷಬೀಜ ಬಿತ್ತುತ್ತಿದೆ. ಅದಕ್ಕಾಗಿ ಸರ್ಕಾರಿ ಜಾಗ, ಶಾಲೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗೆ ಕಡಿವಾಣ ಹಾಕಬೇಕು ಎಂದು ಕೇಳಿದ್ದಾರೆ ಎಂದರು.
ಆರ್‌ಎಸ್‌ಎಸ್ ಯಾವ ದೇವಸ್ಥಾನ ಅಭಿವೃದ್ಧಿ ಮಾಡಿದ್ದಾರೆ, ಯಾವ ಹಿಂದುತ್ವ ಉಳಿಸುತ್ತಿದ್ದಾರೆ. ನಾವು ಗಣೇಶನಿಗೆ ದುಡ್ಡು ಕೊಡುವುದಿಲ್ಲವೇ, ಪೂಜೆ ಮಾಡಲ್ಲವೇ, ನೀವು ಮಾತ್ರ ಭಕ್ತರಾ? ನಿಮ್ಮದು ಡ್ರಾಮ, ನಮ್ಮದು ನಿಜವಾದ ಹಿಂದುತ್ವ ಎಂದು ಹರಿಹಾಯ್ದರು.ನಮ್ಮ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಕೋಮುದ್ವೇಷ ಸೃಷ್ಟಿಸಿ ಮುಚ್ಚಿ ಹಾಕುತ್ತಿದ್ದಾರೆ. ಕರಾವಳಿ ರೀತಿ ಮಂಡ್ಯದ ಮೇಲೂ ಪ್ರಯೋಗ ಮಾಡುತ್ತಿದ್ದಾರೆ. ಯುವಕರು ಎಚ್ಚರಿಕೆಯಿಂದ ಇರಬೇಕು ಎಂದರು.
ನವೆಂಬರ್ ನಲ್ಲಿ ರಾಜಕೀಯ ಕ್ರಾಂತಿ ಆಗುವುದು ಬಿಜೆಪಿಯಲ್ಲೇ ಹೊರತು ಕಾಂಗ್ರೆಸ್‌ನಲ್ಲಿ ಅಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರಿಗೂ 140 ಶಾಸಕರ ಬೆಂಬಲವಿದೆ. ಯಾರು, ಯಾವಾಗ ಏನಾಗಬೇಕು ಅನ್ನುವುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಮುಖ್ಯಮಂತ್ರಿ ಬದಲಾವಣೆ ಕುರಿತು ಪ್ರತಿಕ್ರಿಯಿಸಿದರು.ಕಾಂಗ್ರೆಸ್ ನಲ್ಲಿ ಎಲ್ಲವೂ ಶಾಂತಿ, ಸಮನ್ವಯತೆ ಇದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಬ್ಬರೂ ರಾಮ- ಲಕ್ಷ್ಮಣರ ರೀತಿ ಸರ್ಕಾರವನ್ನು ನಡೆಸುತ್ತಿದ್ದಾರೆ. ಹೀಗಾಗಿ ನವೆಂಬರ್ ಕ್ರಾಂತಿ ಆಗುವುದು ಬಿಜೆಪಿಯಲ್ಲಿ ಮಾತ್ರ. ಈಗಾಗಲೇ ವಿಜಯೇಂದ್ರ, ಅಶೋಕ್ ಸ್ಥಾನಗಳು ಅಲುಗಾಡುತ್ತಿವೆ ಎಂದು ತಿರುಗೇಟು ನೀಡಿದರು.
ಜೆಡಿಎಸ್‌ಗೆ ಕೊನೆ ಮೊಳೆ ಹೊಡೆಯಲು ಪ್ಲಾನ್:ಜೆಡಿಎಸ್‌ಗೆ ಕೊನೆ ಮೊಳೆ ಹೊಡೆಯಲು ಬಿಜೆಪಿ ಪ್ಲಾನ್ ಮಾಡಿದೆ. ಇದು ಜೆಡಿಎಸ್ ಕಾರ್‍ಯಕರ್ತರಿಗೆ ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ಮೇಲಿನ ಕೋಪಕ್ಕೆ ಜೆಡಿಎಸ್‌ನವರು ಬಿಜೆಪಿಗೆ ಜೈ ಎನ್ನುತ್ತಿದ್ದಾರೆ. ಹೀಗೆ ಮಾಡುತ್ತಿದ್ದರೆ ಜೆಡಿಎಸ್ ನಾಶವಾಗುತ್ತದೆ ಎಂದು ವ್ಯಂಗ್ಯವಾಡಿದರು.
ಜಿಲ್ಲೆಯ 7 ಕ್ಷೇತ್ರದಲ್ಲಿ 3 ಕ್ಷೇತ್ರ ಬಿಜೆಪಿಯವರು ಕೇಳುತ್ತಾರೆ. ಜನತಾದಳ ಮುಗಿಸಲು ಬಿಜೆಪಿ ಪ್ಲಾನ್ ಮಾಡುತ್ತಿದೆ. ಕುಮಾರಣ್ಣನ 20 ತಿಂಗಳ ಸರ್ಕಾರ ತೆಗೆದವರು ಇದೇ ಬಿಜೆಪಿ ನಾಯಕರು. ಈಗ ಕೇಂದ್ರ ಮಂತ್ರಿ ಪದವಿ ಕೊಟ್ಟು ಆ ಪಕ್ಷವನ್ನು ನಿರ್ನಾಮ ಮಾಡುತ್ತಿದ್ದಾರೆ. ಜೆಡಿಎಸ್ ಕೇಡರ್ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ ಎಂದು ಟೀಕಿಸಿದರು.