ಒಳಾಂಗಣ ಕ್ರೀಡಾಂಗಣಕ್ಕೆ ಡಾ.ರಾಜಕುಮಾರ್ ಹೆಸರಿಡಿ ಕನ್ನಡಪರ ಸಂಘಟನೆಗಳ ಒತ್ತಾಯ

| Published : Aug 18 2025, 12:00 AM IST

ಒಳಾಂಗಣ ಕ್ರೀಡಾಂಗಣಕ್ಕೆ ಡಾ.ರಾಜಕುಮಾರ್ ಹೆಸರಿಡಿ ಕನ್ನಡಪರ ಸಂಘಟನೆಗಳ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ರಾಜಕುಮಾರ್ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಲು ಜೂನಿಯರ್ ಕಾಲೇಜಿನ ಪಕ್ಕದಲ್ಲಿ ನಿರ್ಮಾಣ ಮಾಡಲಿರುವ ಜಿಲ್ಲಾ ಒಳಾಂಗಣ ಕ್ರೀಡಾಂಗಣಕ್ಕೆ ಡಾ.ರಾಜಕುಮಾರ್ ರವರ ಹೆಸರನ್ನು ನಾಮಕರಣ ಮಾಡುವುದಾಗಿ ಭರವಸೆ ನೀಡುವ ಮೂಲಕ ಮನವೊಲಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣಕ್ಕೆ ಡಾ.ರಾಜಕುಮಾರ್ ಹೆಸರಿಡುವಂತೆ ಡಾ.ರಾಜಕುಮಾರ್ ನಾಮಕರಣ ಹೋರಾಟ ಸಮಿತಿ ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಗೀತಾರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರತ್ನ, ವರನಟ ಡಾ.ರಾಜಕುಮಾರ್ ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಚಿತ್ರರಂಗದ ಅಭಿವೃದ್ಧಿಗಾಗಿ ಹೋರಾಡಿದ ಮೇರು ವ್ಯಕ್ತಿತ್ವ. ಜಿಲ್ಲಾ ಹೊರಾಂಗಣ ಕ್ರೀಡಾಂಗಣದ ಅಭಿವೃದ್ಧಿಗಾಗಿ ಹಾಗೂ ಗಲ್‌ಪೇಟೆ ಪೊಲೀಸ್ ಠಾಣೆ ಹಿಂಭಾಗದ ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಮೂರು ಬಾರಿ ಡಾ.ರಾಜಕುಮಾರ್ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಸಿಕೊಟ್ಟಿದ್ದು, ಸಹಾಯಾರ್ಥವಾಗಿ ಬಂದ ಲಕ್ಷಾಂತರ ರು. ಹಣದಲ್ಲಿ ನಿಂತು ಹೋಗಿದ್ದ ಕಾಮಗಾರಿಗಳ ಅಭಿವೃದ್ಧಿಗೆ ಸದುಪಯೋಗಪಡಿಸಿದ್ದರು. ಕನ್ನಡಪರ ಸಂಘಟನೆಗಳು ಕ್ರೀಡಾಂಗಣಕ್ಕೆ ಡಾ.ರಾಜಕುಮಾರ್ ಕೊಡುಗೆ ಇರುವುದರಿಂದ ಅವರ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸಿದ್ದವು, ಆದರೆ ಜಿಲ್ಲಾಡಳಿತ ಹಾಗೂ ಕ್ರೀಡಾ ಇಲಾಖೆಯು ಭಾರತರತ್ನ ಸರ್.ಎಂ.ವಿ ಹೆಸರು ನಾಮಕರಣ ಮಾಡಲು ತೀರ್ಮಾನಿಸಿದರು.

ಡಾ.ರಾಜಕುಮಾರ್ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಲು ಜೂನಿಯರ್ ಕಾಲೇಜಿನ ಪಕ್ಕದಲ್ಲಿ ನಿರ್ಮಾಣ ಮಾಡಲಿರುವ ಜಿಲ್ಲಾ ಒಳಾಂಗಣ ಕ್ರೀಡಾಂಗಣಕ್ಕೆ ಡಾ.ರಾಜಕುಮಾರ್ ರವರ ಹೆಸರನ್ನು ನಾಮಕರಣ ಮಾಡುವುದಾಗಿ ಭರವಸೆ ನೀಡುವ ಮೂಲಕ ಮನವೊಲಿಸಿದರು. ಅವರ ಮಾತಿಗೆ ಕಟ್ಟುಬಿದ್ದು ಒಪ್ಪಿಗೆ ಸೂಚಿಸಿದೆವು. ಇದೀಗ ಕ್ರೀಡಾಂಗಣ ನಿರ್ಮಾಣವಾಗಿದ್ದು, ೧೫ ವರ್ಷದಿಂದ ಕನ್ನಡಪರ ಸಂಘಟನೆಗಳು ಹಾಗೂ ಕರ್ನಾಟಕ ರತ್ನ ಡಾ.ರಾಜಕುಮಾರ್ ನಾಮಕರಣ ಹೋರಾಟ ಸಮಿತಿ ಮೂಲಕ ಜಿಲ್ಲಾಧಿಕಾರಿ, ಕ್ರೀಡಾ ಇಲಾಖೆಯ ಅಧಿಕಾರಿಗಳು ಹಾಗೂ ರಾಜ್ಯ ಕ್ರೀಡಾ ಇಲಾಖೆಯ ಆಯುಕ್ತರಿಗೆ ಮನವಿ ನೀಡುತ್ತಾ ಬಂದಿದ್ದೇವೆ, ನಮ್ಮ ಮನವಿ ಪುರಸ್ಕರಿಸಿ ಕ್ರೀಡಾಂಗಣಕ್ಕೆ ಡಾ.ರಾಜಕುಮಾರ್ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸಿದರು.

ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಅ.ಕೃ. ಸೋಮಶೇಖರ್, ಕನ್ನಡ ಸೇನೆ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಕಲಾವಿದ ವಿಷ್ಣು, ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕೋನಾ ಪ್ರಭಾಕರ್, ಉಪಾಧ್ಯಕ್ಷ ಐ.ಸುನಿಲ್ ರಾಜ್, ವಿಜಯಲಕ್ಷ್ಮೀ, ಪ್ರಮೀಳಮ್ಮ, ಪ್ರಧಾನ ಕಾರ್ಯದರ್ಶಿ ನಾ. ಮಂಜುನಾಥ್, ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್, ಶ್ರೀ ಭುವನೇಶ್ವರಿ ಕನ್ನಡ ಸಂಘ ಹಾಗೂ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಆರ್. ತ್ಯಾಗರಾಜ್ ,ಕನ್ನಡ ಸೇನೆ ಕೋಲಾರ ತಾಲೂಕು ಅಧ್ಯಕ್ಷ ಎನ್.ಸಿ. ಶಿವಚಂದ್ರಯ್ಯ, ಬಂಗಾರಪೇಟೆ ತಾಲೂಕು ಉಪಾಧ್ಯಕ್ಷ ವಿಜಯಕುಮಾರ್, ನರಸಾಪುರ ಹೋಬಳಿ ಘಟಕದ ಅಧ್ಯಕ್ಷ ಚೆಲ್ಲಹಳ್ಳಿ ನಾಗರಾಜ್ ಖಜಾಂಚಿ ಜಿ.ಗಂಗಾಧರ್, ಮುಖಂಡರಾದ ಎಂ ಶೇಷಾದ್ರಿ (ಶಾಸ್ತ್ರಿ), ವಿ.ಲೋಕೇಶ್, ಬಾಬಿ ಶ್ರೀನಿವಾಸ್, ರಾಶಿರಾಪು ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಕೆಪಿ.ಶ್ರೀಕಾಂತ್ ಗೌಡ, ವಿನೋದ್ ಇದ್ದರು.