ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!

| N/A | Published : Aug 17 2025, 11:47 AM IST

Mysuru Dasara Bheema elephant

ಸಾರಾಂಶ

ದಸರಾದಲ್ಲಿ ಅಂಬಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿರುವ ಆನೆಗಳಿಗೆ ಒಟ್ಟು 630ಕ್ಕೂ ಹೆಚ್ಚು ಟನ್‌ ಆಹಾರ ನೀಡಲಾಗುತ್ತದೆ!

 ಮೈಸೂರು :  ದಸರಾದಲ್ಲಿ ಅಂಬಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿರುವ ಆನೆಗಳಿಗೆ ಒಟ್ಟು 630ಕ್ಕೂ ಹೆಚ್ಚು ಟನ್‌ ಆಹಾರ ನೀಡಲಾಗುತ್ತದೆ!

ಹೌದು ಪ್ರತಿ ಆನೆಗೂ ಅದರ ತೂಕದ ಆಧಾರದಲ್ಲಿ ಸೊಪ್ಪು, ಹಸಿ ಹುಲ್ಲು, ಒಣ ಹುಲ್ಲು ಸೇರಿದಂತೆ ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ. ಒಟ್ಟು 14 ಆನೆಗಳು ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದು ಅವುಗಳ ಪೋಷಣೆಗೆ ಟನ್‌ ಗಟ್ಟಲೇ ಆಹಾರ ನೀಡಲಾಗುತ್ತಿದೆ. ಪ್ರತಿ ಆನೆಗೂ ನೂರಾರು ಕೆ.ಜಿ. ಹಸಿ ಸೊಪ್ಪು, ಹಸಿ ಹುಲ್ಲು, ಭತ್ತ, ಭತ್ತದ ಒಣ ಹುಲ್ಲನ್ನು ನೀಡಲಾಗುತ್ತಿದೆ.

ಪ್ರತಿನಿತ್ಯ ಒಂದು ಆನೆಗೆ 450 ರಿಂದ 500 ಕೆ.ಜಿ. ಹಸಿ ಸೊಪ್ಪು, 175ರಿಂದ 200 ಕೆ.ಜಿ ಹಸಿ ಹುಲ್ಲು, 20ರಿಂದ 25 ಕೆ.ಜಿ ಭತ್ತದ ಹುಲ್ಲು, ಭತ್ತವನ್ನು ನೀಡಲಾಗುತ್ತಿದೆ. ವಿಶೇಷ ಆಹಾರವನ್ನು ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ತಲಾ 10 ರಿಂದ 12 ಕೆ.ಜಿ. ಆನೆಗಳ ಸಾಮರ್ಥ್ಯಕ್ಕೆ ತಕ್ಕಂತೆ ನೀಡಲಾಗುತ್ತಿದೆ.

ವಿವಿಧ ಕಾಳುಗಳನ್ನು 6 ಗಂಟೆಗಳ ಕಾಲ ಬೇಯಿಸಿ, ಅಕ್ಕಿಯೊಂದಿಗೆ ಮಿಶ್ರಣ ಮಾಡಿ ತಿನ್ನಿಸಲಾಗುತ್ತಿದೆ. ಜೊತೆಗೆ ಕೊಬ್ಬರಿ, ಬೆಲ್ಲ ಹಾಗೂ ಕಬ್ಬನ್ನು ನೀಡಲಾಗುತ್ತಿದೆ. ಈ ಬಾರಿ ಆನೆಗಳಿಗೆ ಬೆಣ್ಣೆಯನ್ನು ಕೊಡುತ್ತಿಲ್ಲ. ವೈದ್ಯರ ಸಲಹೆ ಮೇರೆಗೆ ಬೆಣ್ಣೆ ಕೈಬಿಟ್ಟು ರಾಗಿ ಮತ್ತು ಹುರುಳಿಯನ್ನು ನೀಡಲಾಗುತ್ತಿದೆ. ಹುರುಳಿ ಆನೆಯ ಜೀರ್ಣಕ್ರಿಯೆಗೆ ಸಹಕಾರಿ ಆಗಿರುವುದರಿಂದ ರಾಗಿ ಮತ್ತು ಹುರುಳಿಯನ್ನು ಸೇರಿಸಲಾಗಿದೆ ಎಂದು ಡಿಸಿಎಫ್ ಡಾ। ಐ.ಬಿ. ಪ್ರಭುಗೌಡ ತಿಳಿಸಿದರು.

ಯಾವುದು ಎಷ್ಟೆಷ್ಟು?:

ದಸರಾ ಗಜಪಡೆ ಈ ಬಾರಿ 56 ದಿನ ಇರಲಿದೆ. ಮೊದಲ ತಂಡದ 9 ಹಾಗೂ ಎರಡನೇ ತಂಡದ 5 ಆನೆಗಳಿಗೆ ಬೇಕಾದ ಆಹಾರ ಪದಾರ್ಥ ದಾಸ್ತಾನಿಗೆ ಕ್ರಮ ವಹಿಸಲಾಗಿದೆ. ಎಲ್ಲಾ ಆನೆಗಳಿಗೆ ನೀಡಲು ಈ ಬಾರಿ 340 ಟನ್ ಆಲದ ಸೊಪ್ಪು, 170 ಟನ್ ಹಸಿರು ಹುಲ್ಲು, 52 ಟನ್ ಭತ್ತದ ಹುಲ್ಲು, 25 ಟನ್ ಕಬ್ಬು ಅಗತ್ಯವಿದೆ.

225 ಕ್ವಿಂಟಲ್ ಭತ್ತ, 75 ಕ್ವಿಂಟಲ್ ಅಕ್ಕಿ, 525 ಕೆ.ಜಿ ಬೆಲ್ಲ, 28 ಕ್ವಿಂಟಲ್ ಕುಸುಬಲಕ್ಕಿ, 28 ಕ್ವಿಂಟಲ್ ಗೋಧಿ, 28 ಕ್ವಿಂಟಲ್ ಹೆಸರುಕಾಳು, 28 ಕ್ವಿಂಟಲ್ ಉದ್ದಿನಕಾಳು, 35 ಕ್ವಿಂಟಲ್ ಕಡಲೆಕಾಯಿ ಹಿಂಡಿ, 3 ಕ್ವಿಂಟಲ್ ಅವಲಕ್ಕಿ, 1 ಟನ್‌ ಈರುಳ್ಳಿ, 375 ಕೆ.ಜಿ ಉಪ್ಪು, 3250 ತೆಂಗಿನಕಾಯಿ ನೀಡಲಾಗುತ್ತದೆ.

ಆನೆಗಳಿಗೆ ದಿನಕ್ಕೆ 100 ಕೆ.ಜಿ ತರಕಾರಿ ನೀಡಲಾಗುತ್ತದೆ. ಅರಣ್ಯ ಇಲಾಖೆಯೇ ಹಾಪ್ ಕಾಮ್ಸ್‌ನಲ್ಲಿ ತರಕಾರಿಯನ್ನು ಖರೀದಿಸುತ್ತದೆ. ವಿಶೇಷ ಆಹಾರ ತಯಾರಿಕೆ ನಂತರ ಗೆಡ್ಡೆಕೋಸ್, ಬೀಟರೂಟ್, ಕ್ಯಾರೆಟ್, ಸೌತೆಕಾಯಿ, ಸೀಮೆಬದನೆಕಾಯಿ ತುಂಡನ್ನು ಬೆರೆಸಿ ಆನೆಗಳಿಗೆ ನೀಡಲಾಗುತ್ತದೆ.

14 ಆನೆಗಳಿಗೆ ಆಹಾರ:

ಈ ಬಾರಿ ದಸರಾ ಮಹೋತ್ಸವಕ್ಕೆ 10 ಗಂಡು, 4 ಹೆಣ್ಣು ಆನೆಗಳು ಆಯ್ಕೆಯಾಗಿವೆ. ಅಂಬಾರಿ ಆನೆ ಅಭಿಮನ್ಯು, ಪ್ರಶಾಂತ, ಭೀಮ, ಮಹೇಂದ್ರ, ಧನಂಜಯ, ಕಂಜನ್, ಏಕಲವ್ಯ, ಕಾವೇರಿ ಮತ್ತು ಲಕ್ಷ್ಮಿ ಆನೆಗಳು ಮೊದಲ ತಂಡದಲ್ಲಿ ಬಂದಿವೆ. ಇನ್ನು 2ನೇ ತಂಡದಲ್ಲಿ ಗೋಪಿ, ಸುಗ್ರೀವ, ಹೊಸ ಆನೆಗಳಾದ ಶ್ರೀಕಂಠ, ರೂಪಾ ಮತ್ತು ಹೇಮಾವತಿ ಈ ತಿಂಗಳ ಕೊನೆಯ ವಾರದಲ್ಲಿ ಆಗಮಿಸಿ ಮೊದಲ ತಂಡದೊಂದಿಗೆ ಸೇರಿಕೊಳ್ಳಲಿವೆ. ಈ ಎಲ್ಲಾ ಆನೆಗಳಿಗೂ ಸೇರಿದಂತೆ ಅರಣ್ಯ ಇಲಾಖೆಯು ಪೌಷ್ಟಿಕ ಆಹಾರ ನೀಡಲು ಕ್ರಮ ವಹಿಸಿದೆ.

ಗಜಪಡೆಯ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಪೌಷ್ಟಿಕವಾದ ವಿಶೇಷ ಆಹಾರ ಜೊತೆಗೆ ಗುಣಮಟ್ಟದ ಆಹಾರವನ್ನು ನೀಡಲಾಗುತ್ತಿದೆ. ಗಂಡಾನೆಗಳಿಗೆ ಹೋಲಿಸಿದರೆ ಹೆಣ್ಣಾನೆಗಳಿಗೆ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ವಿಶೇಷ ಆಹಾರ ನೀಡಲಾಗುತ್ತಿದೆ. ಆನೆಗಳ ಆರೋಗ್ಯವನ್ನು ಮತ್ತು ತೂಕವನ್ನು ಕಾಪಾಡಿಕೊಳ್ಳಲು, ಸಾಮರ್ಥ್ಯ ಹೆಚ್ಚಿಸಲು ಅಗತ್ಯ ಕ್ರಮ ವಹಿಸಲಾಗಿದೆ.

-ಡಾ। ಐ.ಬಿ.ಪ್ರಭುಗೌಡ, ಡಿಸಿಎಫ್, ಮೈಸೂರು ವನ್ಯಜೀವಿ ವಿಭಾಗ.

Read more Articles on