ಸುಮಲತಾ ಬೆಂಬಲಿಗರ ಪರ-ವಿರೋಧ ಅಭಿಮತ

| Published : Mar 31 2024, 02:05 AM IST

ಸಾರಾಂಶ

ಸಭೆಯಲ್ಲಿ ಹಾಜರಿದ್ದ ಕೆಲವರು, ಮುಂದಿನ ದಿನಗಳಲ್ಲಿ ರಾಜಕೀಯ ಸ್ಥಾನ-ಮಾನಗಳು ಸಿಗಬೇಕಾದರೆ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವುದು ಅನಿವಾರ್ಯವಾಗಿದೆ. ದುಡುಕಿನ ನಿರ್ಧಾರ ಮಾಡದೆ ಭವಿಷ್ಯದ ರಾಜಕೀಯ ದೃಷ್ಟಿಯಿಂದ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸುವ ವಿಚಾರವಾಗಿ ಸಂಸದೆ ಸುಮಲತಾ ಬೆಂಬಲಿಗರು ಪರ-ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ನಿವಾಸದಲ್ಲಿ ಸಂಸದೆ ಸುಮಲತಾ ಕರೆದಿದ್ದ ಆಪ್ತರು, ಬೆಂಬಲಿಗರು, ಹಿತೈಷಿಗಳ ಸಭೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಜೆಡಿಎಸ್‌ ಬೆಂಬಲಿಸುವ ವಿಚಾರವಾಗಿ ಬೆಂಬಲಿಗರಿಂದ ವಿರೋಧಾಭಿಪ್ರಾಯಗಳು ಹೆಚ್ಚು ವ್ಯಕ್ತವಾದವು.

ಕಳೆದ ಚುನಾವಣೆಯನ್ನು ಸ್ವಾಭಿಮಾನದ ಹೆಸರಿನಲ್ಲಿ ಮಾಡಿದೆವು. ಅದಕ್ಕೆ ಜಿಲ್ಲೆಯ ಜನರು ನಿರೀಕ್ಷೆಗೂ ಮೀರಿ ನಮಗೆ ಸ್ಪಂದಿಸಿದರು. ಅಂದು ಜೆಡಿಎಸ್‌ನವರು ನಿಮಗೆ ಮಾಡಿದ ಅವಮಾನಕ್ಕೆ ಪ್ರತ್ಯುತ್ತರವೆಂಬಂತೆ ಜನರು ನಿಮ್ಮ ಪರವಾಗಿ ಫಲಿತಾಂಶ ನೀಡಿದರು. ಈಗ ನಿಮ್ಮನ್ನು ಅವಮಾನಿಸಿದವರನ್ನೇ ಚುನಾವಣೆಯಲ್ಲಿ ಬೆಂಬಲಿಸುವುದಾದರೂ ಹೇಗೆ? ಅದನ್ನು ಜನರು ಹೇಗೆ ಒಪ್ಪುತ್ತಾರೆ? ಅವರನ್ನು ವಿರೋಧ ಮಾಡಿಕೊಂಡು ಬಂದ ನಾವು ಅವರ ಪರವಾಗಿ ಪ್ರಚಾರ ಮಾಡುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಈ ಚುನಾವಣೆಯಲ್ಲಿ ನೀವು ತಟಸ್ಥರಾಗಿ ಉಳಿಯಿರಿ. ಯಾರನ್ನೂ ಬೆಂಬಲಿಸುವುದು ಬೇಡ. ಪಕ್ಷೇತರರಾಗಿ ಸ್ಪರ್ಧಿಸಿದರೆ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ. ಈಗ ನಾವು ಜೆಡಿಎಸ್‌ ಬೆಂಬಲಿಸುವ ನಿರ್ಧಾರ ಕೈಗೊಂಡರೆ ಜನರೆದುರು ನಮಗಿರುವ ಗೌರವ ಮಣ್ಣುಪಾಲಾಗುತ್ತದೆ. ನೀವೇನಾದರೂ ಜೆಡಿಎಸ್‌ ಬೆಂಬಲಿಸುವ ತೀರ್ಮಾನಕ್ಕೆ ಬದ್ಧರಾದರೆ ನಾವು ಕಾಂಗ್ರೆಸ್‌ ಪರ ನಿಲ್ಲಬೇಕಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ನಾವೆಲ್ಲರೂ ನಿಮಗೇ ಟಿಕೆಟ್‌ ಸಿಗಬಹುದೆಂಬ ಆತ್ಮವಿಶ್ವಾಸದಲ್ಲಿದ್ದೆವು. ಬಿಜೆಪಿಯಿಂದ ಸ್ಪರ್ಧಿಸಿದ್ದರೆ ಗೆಲುವು ನಮ್ಮದಾಗುತ್ತಿತ್ತು. ಈಗ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟಿರುವುದರಿಂದ ನಮ್ಮನ್ನು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಸಿದೆ. ಜೆಡಿಎಸ್‌ ಬೆಂಬಲಿಸುವ ಮನಸ್ಥಿತಿಯಲ್ಲಂತೂ ನಾವಿಲ್ಲ ಎಂದು ಬಹುತೇಕ ಬೆಂಬಲಿಗರು ನೇರವಾಗಿಯೇ ಹೇಳಿದ್ದಾರೆ.

ಸಂಸದರಾಗಿದ್ದ ಐದು ವರ್ಷವೂ ನಿಮ್ಮನ್ನು ವಿರೋಧಿಸಿಕೊಂಡು ಬಂದಿದ್ದಾರೆ. ನಿಮ್ಮ ಅಭಿವೃದ್ಧಿ ಕಾರ್ಯಗಳಿಗೆ ಅವರು ಕೈಜೋಡಿಸಲೇ ಇಲ್ಲ. ಅಂತಹವರೊಂದಿಗೆ ಈಗ ಎಂತಹ ಸ್ನೇಹ. ಅವರು ಚುನಾವಣಾ ಕಾರಣಕ್ಕಾಗಿ ನಿಮ್ಮನ್ನು ಅಕ್ಕ ಎನ್ನುತ್ತಿದ್ದಾರೆ. ನಿಮ್ಮ ಮೇಲಿನ ಹಗೆತನ ದೂರವಾಗಿಲ್ಲ. ಜೆಡಿಎಸ್ ಬೆಂಬಲಿಸುವುದರಿಂದ ಸ್ವಾಭಿಮಾನದ ಹೆಸರೇಳಿಕೊಂಡು ಜನರ ಮುಂದೆ ಹೋಗಲಾಗದು ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

ನೀವು ತಟಸ್ಥರಾಗಿ ಉಳಿಯುವ ನಿರ್ಧಾರ ಮಾಡಿದರೆ ಜೆಡಿಎಸ್‌ ಮತ್ತು ಬಿಜೆಪಿ ನಾಯಕರು ಅಸಮಾಧಾನಗೊಳ್ಳುವ ಸಾಧ್ಯತೆಗಳೂ ಹೆಚ್ಚಿವೆ. ಇಲ್ಲಿ ಸಿಗುತ್ತಿರುವ ಮಾನ್ಯತೆ ಕಾಂಗ್ರೆಸ್‌ನಲ್ಲಿ ಸಿಗದೇ ಹೋಗಬಹುದು. ಹಾಗಾಗಿ ಆತುರದ, ದುಡುಕಿನ ನಿರ್ಧಾರ ಮಾಡದಿರುವಂತೆ ತಿಳಿಸಿದ್ದಾರೆ.

ಎಲ್ಲ ಬೆಂಬಲಿಗರ ಸಲಹೆ-ಅಭಿಪ್ರಾಯಗಳನ್ನು ಆಲಿಸಿದ ಸುಮಲತಾ ಅವರು, ಏ.3ರಂದು ಮಂಡ್ಯದಲ್ಲೇ ಸಭೆ ಆಯೋಜಿಸಿ ನನ್ನ ತೀರ್ಮಾನವನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ಪುತ್ರ ಅಭಿಷೇಕ್ ಅಂಬರೀಶ್. ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್. ಬೇಲೂರು ಸೋಮಶೇಖರ್. ಹನಕೆರೆ ಶಶಿಕುಮಾರ್. ಅಂಬರೀಶ್ ಅಭಿಮಾನಿಗಳ ಸಂಘದ ತಾಲೂಕ ಘಟಕದ ಅಧ್ಯಕ್ಷ ಮುಟ್ಟನಹಳ್ಳಿ ಮಹೇಂದ್ರ. ಮುಖಂಡರಾದ ಕೆ.ಶೆಟ್ಟಹಳ್ಳಿ ಲಿಂಗರಾಜು. ಹಾಗಲಹಳ್ಳಿ ಬಸವರಾಜು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ವಿವೇಕಾನಂದ. ಪಾಂಡವಪುರ ತಿಮ್ಮೇಗೌಡ. ಶೀಳನರೆ ಅಂಬರೀಶ್ ಮತ್ತಿತರರು ಇದ್ದರು.

ಭವಿಷ್ಯದ ರಾಜಕೀಯದ ದೃಷ್ಟಿಯಿಂದ ನಿರ್ಧಾರ ಪ್ರಕಟಿಸಿ’:

ಸಭೆಯಲ್ಲಿ ಹಾಜರಿದ್ದ ಇನ್ನೂ ಕೆಲವರು, ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸುವುದು ಬೇಡವೇ ಬೇಡ ಎನ್ನಲಾಗದು. ಅದು ಮುಂದಿನ ನಿಮ್ಮ ರಾಜಕೀಯ ಭವಿಷ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ. ಬಿಜೆಪಿ ಹೈಕಮಾಂಡ್‌ ನಾಯಕರೊಂದಿಗೆ ಉತ್ತಮ ವಿಶ್ವಾಸವನ್ನು ಹೊಂದಿದ್ದೀರಿ. ಆ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾದರೆ, ಮುಂದಿನ ದಿನಗಳಲ್ಲಿ ರಾಜಕೀಯ ಸ್ಥಾನ-ಮಾನಗಳು ಸಿಗಬೇಕಾದರೆ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವುದು ಅನಿವಾರ್ಯವಾಗಿದೆ. ದುಡುಕಿನ ನಿರ್ಧಾರ ಮಾಡದೆ ಭವಿಷ್ಯದ ರಾಜಕೀಯ ದೃಷ್ಟಿಯಿಂದ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ. ಜೆಡಿಎಸ್‌ನವರಿಗೂ ತಾವು ಮಾಡಿದ ತಪ್ಪಿನ ಅರಿವಾಗಿದೆ. ಅವರೆಲ್ಲರೂ ಈಗ ನಿಮ್ಮ ಬೆಂಬಲ ಸಿಗುತ್ತದೆಂಬ ನಿರೀಕ್ಷೆಯಲ್ಲಿದ್ದಾರೆ. ವೃಥಾ ದ್ವೇಷ ರಾಜಕಾರಣವನ್ನು ಮುಂದುವರೆಸುವುದರಿಂದ ಯಾರಿಗೂ ಪ್ರಯೋಜನವಿಲ್ಲ. ಹಳೆಯದನ್ನು ಮರೆತು ಪ್ರಸ್ತುತ ರಾಜಕಾರಣಕ್ಕೆ ಪೂರಕವಾದ ತೀರ್ಮಾನವನ್ನು ಕೈಗೊಳ್ಳಬೇಕಿದೆ. ಒಮ್ಮೆ ಮೈತ್ರಿ ಅಭ್ಯರ್ಥಿ ಗೆದ್ದರೆ ನಿಮಗೆ ಬಿಜೆಪಿ ಹೈಕಮಾಂಡ್‌ ಮಟ್ಟದಲ್ಲಿ ಗೌರವ ಹೆಚ್ಚಾಗಲಿದೆ. ನಿಮಗೂ ರಾಜಕೀಯವಾಗಿ ಒಳ್ಳೆಯ ಭವಿಷ್ಯ ಸೃಷ್ಟಿಸಿಕೊಡಬಹುದು. ಜೊತೆಗೆ ಪುತ್ರ ಅಭಿಷೇಕ್‌ ರಾಜಕೀಯ ಭವಿಷ್ಯಕ್ಕೂ ಅನುಕೂಲವಾಗಲಿದೆ. ಇದರೊಂದಿಗೆ ಜೆಡಿಎಸ್‌ನವರ ನಡುವಿನ ವಿರಸಕ್ಕೆ ಅಂತ್ಯವಾಡಬಹುದು ಎಂದು ತಿಳಿಸಿದ್ದಾರೆ.