ತಾಲೂಕಿನ ಹೊಸ ಕನಕಾಪುರ ಗ್ರಾಮದಲ್ಲಿ ಮುಕ್ಕುಂದ ಸುಮಿ ಕಾರ್ಖಾನೆಯ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಳ ಮಾಡುವುದಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆದ ಸಭೆಯಲ್ಲಿ ಸಾರ್ವಜನಿಕರಿಂದ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾದವು.

ಜನರ ಅಭಿಪ್ರಾಯ ಸರ್ಕಾರಕ್ಕೆ ವರದಿ: ಜಿಲ್ಲಾಧಿಕಾರಿ ಸುರೇಶ ಇಟ್ನಾಳ

ಕನ್ನಡಪ್ರಭ ವಾರ್ತೆ ಕೊಪ್ಪಳ

ತಾಲೂಕಿನ ಹೊಸ ಕನಕಾಪುರ ಗ್ರಾಮದಲ್ಲಿ ಮುಕ್ಕುಂದ ಸುಮಿ ಕಾರ್ಖಾನೆಯ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಳ ಮಾಡುವುದಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆದ ಸಭೆಯಲ್ಲಿ ಸಾರ್ವಜನಿಕರಿಂದ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾದವು. ಕಾರ್ಖಾನೆ ವಿಸ್ತರಣೆಯಿಂದ ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ಹೋರಾಟಗಾರರು ವಿರೋಧ ಆಕ್ರೋಶ ವ್ಯಕ್ತಪಡಿಸಿದರೆ, ಉದ್ಯೋಗ ಸಿಗಲಿದ್ದು, ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಗ್ರಾಮಸ್ಥರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಕನಕಾಪುರ, ಅಲ್ಲಾನಗರ, ಹಿರೇಬಗನಾಳ, ಹಟ್ಟಿ, ಗಿಣಗೇರಿ, ತಾಂಡಾ ಸೇರಿದಂತೆ ವಿವಿಧ ಗ್ರಾಮಗಳ ಸಾರ್ವಜನಿಕರು, ಮಹಿಳೆಯರು, ರೈತರು ಹಾಗೂ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಸದಸ್ಯರು ಭಾಗವಹಿಸಿ ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಖಾನೆ ಬೇಡ:

ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮುಖಂಡರು ಮಾತನಾಡಿ, ಈಗಾಗಲೇ ಇರುವ ಕಾರ್ಖಾನೆಗಳ ಧೂಳು ಹಾಗೂ ಮಾಲಿನ್ಯದಿಂದ ಕೊಪ್ಪಳ, ಭಾಗ್ಯನಗರ ಸೇರಿದಂತೆ ಸುತ್ತಮುತ್ತಲಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹೊಸ ಕಾರ್ಖಾನೆ ಹಾಗೂ ವಿಸ್ತರಣೆಗಳಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಉದ್ಯೋಗಕ್ಕಾಗಿ ಬೇಕು:

ಸ್ಥಳೀಯ ಯುವಕರು ಹಾಗೂ ಕೆಲ ಮುಖಂಡರು ಮಾತನಾಡಿ, ಉದ್ಯೋಗಕ್ಕಾಗಿ ಬೆಂಗಳೂರು, ಮಂಗಳೂರು ಸೇರಿದಂತೆ ದೂರದ ನಗರಗಳಿಗೆ ತೆರಳಬೇಕಾದ ಪರಿಸ್ಥಿತಿ ಇತ್ತು. ಸ್ಥಳೀಯವಾಗಿ ಕಾರ್ಖಾನೆಗಳು ಸ್ಥಾಪನೆಯಾದರೆ ಉದ್ಯೋಗ ದೊರೆತು ಗುಳೆ ಹೋಗುವುದು ತಪ್ಪಲಿದೆ. ಆದರೆ, ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಕಾರ್ಖಾನೆಗಳಿಂದ ತುಂಗಭದ್ರಾ ನದಿ ಮಲಿನಗೊಂಡಿದೆ. ಜನರ ಜೀವನಕ್ಕೆ ಮಾರಕವಾಗುವ ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ನೀಡಬಾರದು ಎಂದರು.

ಹಾಲವರ್ತಿ ಗ್ರಾಮದ ಆನಂದ ಕಿನ್ನಾಳ ಮಾತನಾಡಿ, ಮಾಲಿನ್ಯ ನಿಯಂತ್ರಿಸುವ ಕಾರ್ಖಾನೆಗಳು ಬಂದರೆ ಸ್ಥಳೀಯ ಯುವಕರಿಗೆ ಉದ್ಯೋಗ ಹಾಗೂ ಪ್ರದೇಶದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.

ಜನಾಭಿಪ್ರಾಯ ಸರ್ಕಾರಕ್ಕೆ:

ಡಿಸಿ ಡಾ. ಸುರೇಶ ಇಟ್ನಾಳ ಮಾತನಾಡಿ, ಮುಕ್ಕುಂದ ಕಾರ್ಖಾನೆ ವಿಸ್ತರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯ ಆಲಿಸಲಾಗಿದೆ. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.

ಹೊಸ ಕನಕಾಪುರದ ಮಹೇಶ ಪೂಜಾರ ಮಾತನಾಡಿ, ಕಾರ್ಖಾನೆಯ ಧೂಳಿನಿಂದ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ವಿಸ್ತರಣೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.