ಸಾರಾಂಶ
ಹೊಳೆನರಸೀಪುರ ವಿಭಾಗದ ಡಿವೈಎಸ್ಪಿಯಾಗಿ ನಿಯೋಜನೆಗೊಂಡಿದ್ದ ಹರ್ಷಬರ್ದನ್ ಮೈಸೂರಿನಲ್ಲಿ ದಕ್ಷಿಣ ವಲಯದ ಐಜಿ ಬೋರಲಿಂಗಯ್ಯ ಅವರನ್ನು ಭೇಟಿ ಮಾಡಿ ಹಾಸನದಲ್ಲಿ ಎಸ್ಪಿ ಸುಜೀತಾ ಅವರ ಬಳಿ ಕೆಲಸಕ್ಕೆ ವರದಿ ಮಾಡಿಕೊಳ್ಳಲು ಬರುತ್ತಿದ್ದರು. ಈ ಸಂದರ್ಭದಲ್ಲಿ ಅವರು ಬರುತ್ತಿದ್ದ ಇಲಾಖೆಯ ಬೊಲೇರೋ ಜೀಪಿನ ಟಯರ್ ಸಿಡಿದು ಅಪಘಾತ ಸಂಭವಿಸಿತ್ತು. ಈ ವೇಳೆ ಹರ್ಷಬರ್ದನ್ ತಲೆಗೆ ಗಂಭೀರ ಸ್ವರೂಪದ ಪೆಟ್ಟಾಗಿತ್ತು. ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಹಾಸನ ಐಎಎಸ್ ಎನ್ನುವುದು ಹಲವರ ಕನಸಿನ ಕೂಸು. ಅದಕ್ಕಾಗಿ ತಮ್ಮ ಶೈಕ್ಷಣಿಕ ಜೀವನದ ಒಂದೊಂದು ಕ್ಷಣ ಕೂಡ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಿ ಹಗಲುರಾತ್ರಿ ಎನ್ನದೆ ನಿದ್ದೆಗೆಟ್ಟು ಓದಿ ಯುಪಿಎಸ್‌ಸಿಯಂತಹ ಮಹಾನ್ ಯುದ್ಧವನ್ನೇ ಗೆದ್ದು ಕೆಲಸಕ್ಕೆ ಹಾಜರಾಗುವ ಮೊದಲ ದಿನವೇ ತನ್ನ ಜೀವನದ ಕಡೆ ದಿನವಾಗಿದ್ದು ಇದೇ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ದನ್ ಪಾಲಿಗೆ. ತಾಲೂಕಿನ ಮೈಸೂರು ರಸ್ತೆಯ ಕಿತ್ತಾನೆ ಗಡಿಯಲ್ಲಿ ಭಾನುವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರು ರಾತ್ರಿ ಸುಮಾರು 8.30ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ.
ಹೊಳೆನರಸೀಪುರ ವಿಭಾಗದ ಡಿವೈಎಸ್ಪಿಯಾಗಿ ನಿಯೋಜನೆಗೊಂಡಿದ್ದ ಹರ್ಷಬರ್ದನ್ ಮೈಸೂರಿನಲ್ಲಿ ದಕ್ಷಿಣ ವಲಯದ ಐಜಿ ಬೋರಲಿಂಗಯ್ಯ ಅವರನ್ನು ಭೇಟಿ ಮಾಡಿ ಹಾಸನದಲ್ಲಿ ಎಸ್ಪಿ ಸುಜೀತಾ ಅವರ ಬಳಿ ಕೆಲಸಕ್ಕೆ ವರದಿ ಮಾಡಿಕೊಳ್ಳಲು ಬರುತ್ತಿದ್ದರು. ಈ ಸಂದರ್ಭದಲ್ಲಿ ಅವರು ಬರುತ್ತಿದ್ದ ಇಲಾಖೆಯ ಬೊಲೇರೋ ಜೀಪಿನ ಟಯರ್ ಸಿಡಿದು ಅಪಘಾತ ಸಂಭವಿಸಿತ್ತು. ಈ ವೇಳೆ ಹರ್ಷಬರ್ದನ್ ತಲೆಗೆ ಗಂಭೀರ ಸ್ವರೂಪದ ಪೆಟ್ಟಾಗಿತ್ತು. ಝೀರೋ ಟ್ರಾಫಿಕ್‌ನಲ್ಲಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತ್ತು. ಆದರೆ ಆ ವೇಳೆಗಾಗಲೇ ಅವರ ಹೃದಯ ಬಡಿತ ಕಡಿಮೆಯಾಗುತ್ತಾ ಬಂದಿತ್ತು. ಪರಿಸ್ಥಿತಿಯ ಗಂಭೀರತೆ ಅರಿತು ಅವರನ್ನು ಮತ್ತದೇ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಬೆಂಗಳೂರಿಗೆ ಕರೆದೊಯ್ಯಲು ಸಿದ್ಧತೆ ನಡೆಸಲಾಗಿತ್ತು. ಆದರೆ ಅವರ ಮೆದುಳು ಸ್ಥಗಿತಗೊಂಡಿತ್ತು. ಸ್ವಲ್ಪ ಸಮಯದ ನಂತರ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಮಧ್ಯಪ್ರದೇಶದವರು: ಜೀವನದ ಬಹುದೊಡ್ಡ ಕನಸು ಈಡೇರುವ ಕೊನೆ ಗಳಿಗೆಯಲ್ಲಿ ಇಹಲೋಕ ತ್ಯಜಿಸಿದ ಹರ್ಷಬರ್ದನ್ ಮೂಲತಃ ಮಧ್ಯಪ್ರದೇಶದ ಸಿಮ್ರೋಲಿ ಜಿಲ್ಲೆಯವರು. ತಂದೆ ಅಖಿಲೇಶ್ ಕುಮಾರ್ ಸಿಂಗ್, ತಾಯಿ ಡೋಲಿ ಸಿಂಗ್. 1998ರಲ್ಲಿ ಜನಿಸಿದ್ದ ಹರ್ಷಬರ್ದನ್ ತಮ್ಮ ಶಿಕ್ಷಣವನ್ನು ಮಧ್ಯಪ್ರದೇಶದಲ್ಲಿಯೇ ಮುಗಿಸಿದ್ದರು. ನಂತರ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಂಡು ಅಲ್ಪಾವಧಿಯಲ್ಲೇ ಐಪಿಎಸ್ ಪಾಸ್ ಮಾಡಿದ್ದರು.