ಸಾರಾಂಶ
ತೀರ್ಥಹಳ್ಳಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದಲ್ಲಿ ಹಿಂದುಳಿದ ವರ್ಗ ಮತ್ತು ಬಡ ಜನತೆಗೆ ಪೂರಕವಾದ ಯಾವುದೇ ಅಭಿವೃದ್ಧಿ ಕಾರ್ಯಗಳೂ ಜಾರಿಗೆ ಬಂದಿಲ್ಲಾ. ಮುಳುಗಡೆ ಮತ್ತು ಅರಣ್ಯಭೂಮಿ ಸಂತ್ರಸ್ತರ ಸಮಸ್ಯೆಗಳು ಇಂದಿಗೂ ಜೀವಂತವಾಗಿರುವುದು ಬಿಜೆಪಿ ಆಡಳಿತದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಾಂಗ್ರೆಸ್ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಇಕ್ಕೇರಿ ರಮೇಶ್ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಹಿಂದುಳಿದ ವರ್ಗದ ಆಶಾಕಿರಣವಾಗಿದ್ದು, ಅಧಿಕಾರವಧಿಯಲ್ಲಿ ಬಡವರ ಮತ್ತು ರೈತರ ಪರವಾದ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳು ಇಂದಿಗೂ ಜಾರಿಯಲ್ಲಿವೆ. ಮುಂಬರುವ ಚುನಾವಣೆಯಲ್ಲಿ ಹಿಂದುಳಿದ ವರ್ಗದ ಬಂಧುಗಳೆಲ್ಲರೂ ಒಂದಾಗಿ ಗೀತಾ ಅವರನ್ನು ಬೆಂಬಲಿಸುವ ಮೂಲಕ ಅತ್ಯಧಿಕ ಬಹುಮತದಿಂದ ಗೆಲ್ಲಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಹಿಂದುಳಿದ ವರ್ಗದ ಆಶಾಕಿರಣವಾಗಿದ್ದು, ದೇವರಾಜ ಅರಸು ನಂತರದಲ್ಲಿ ದೀನದಲಿತರ ಧ್ವನಿಯಾಗಿ ಕಾರ್ಯನಿರ್ವಹಿಸಿದ್ದರು. ಬಂಗಾರಪ್ಪನವರ ಅಧಿಕಾರವಧಿಯಲ್ಲಿ ಬಡವರ ಮತ್ತು ರೈತರ ಪರವಾದ ಹಲವು ಯೋಜನೆಗಳು ಜಾರಿಗೆ ಬಂದಿದ್ದು, ಇಂದಿಗೂ ಬಡವರಿಗೆ ಅದರ ಸೌಲಭ್ಯ ದೊರೆಯುತ್ತಿದೆ ಎಂದರು.ಕೇಂದ್ರದಲ್ಲಿ ಸತತ ಹತ್ತು ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಿದ ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲೂ ಅಧಿಕಾರವನ್ನು ಹೊಂದಿದ್ದರೂ ಶ್ರೀ ಸಾಮಾನ್ಯರ ಯಾವುದೇ ಸಮಸ್ಯೆಗಳು ಬಗೆಹರಿದಿಲ್ಲಾ. ಹಿಂದಿನ ಚುನಾವಣೆಯಲ್ಲಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಪರಿಹಾರದ ಬಗ್ಗೆ ನೀಡಿದ ಭರವಸೆ ಸುಳ್ಳಾಗಿದೆ. ಅರಣ್ಯಭೂಮಿ ಸಮಸ್ಯೆಗೆ ಪರಿಹಾರವೇ ಇಲ್ಲವೇ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.
ದೇಶದಲ್ಲೇ ಶ್ರೇಷ್ಠ ಮುಖ್ಯಮಂತ್ರಿ ಎನಿಸಿಕೊಂಡಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಜನಪರವಾಗಿ ಕಾರ್ಯ ನಿರ್ವಹಿಸುತ್ತಿದ್ದು ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳಾದ ಮಹಿಳೆಯರು ಕಾಂಗ್ರೆಸ್ ಪರವಾಗಿದ್ದು 20 ಕ್ಕೂ ಹೆಚ್ಚು ಸ್ಥಾನಗಳಿಸುವುದು ಖಚಿತ. ಕೆ.ಎಸ್.ಈಶ್ವರಪ್ಪನವರ ಸ್ಪರ್ಧೆಯಿಂದ ಕಾಂಗ್ರೆಸ್ಸಿಗೆ ನಷ್ಟವಾಗುವ ಸಾಧ್ಯತೆ ಕಡಿಮೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.ಜಿಲ್ಲಾ ಹಿಂದುಳಿದ ವರ್ಗದ ಕಾರ್ಯದರ್ಶಿ ರಾಘವೇಂದ್ರ, ತಾಲೂಕು ಅಧ್ಯಕ್ಷೆ ಗೀತಾ ರಮೇಶ್, ಪ್ರಮುಖರಾದ ಬಿ.ಕೆ.ಉದಯಕುಮಾರ್, ಮಹೇಂದ್ರ, ನಾಗೇಂದ್ರ, ಸಿದ್ದೇಶ್ ಹಾಗೂ ರಾಮು ಇದ್ದರು.