ಶರಣೆಯರಿಂದ ೬ಸಾವಿರ ವಚನ ಗ್ರಂಥಗಳ ಮೆರವಣಿಗೆ

| Published : Nov 11 2024, 01:13 AM IST

ಸಾರಾಂಶ

ರಬಕವಿ ರಸ್ತೆಯಲ್ಲಿರುವ ಶ್ರೀನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ವಚನೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ಬಾಗಲಕೋಟೆ ಜಿಲ್ಲೆಯ ತೇರದಾಳ ನಗರದ ಆರಾಧ್ಯ ದೈವ, ಬೆಡಗಿನ ವಚನಕಾರ ಅಲ್ಲಮಪ್ರಭು ದೇವರ ನೂತನ ದೇವಸ್ಥಾನದ ಲೋಕಾರ್ಪಣೆ ಅಂಗವಾಗಿ ಶನಿವಾರ ೬ಸಾವಿರ ವಚನ ಗ್ರಂಥಗಳನ್ನು ತಲೆ ಮೇಲೆ ಹೊತ್ತು ಭಕ್ತರು ಮೆರವಣಿಗೆ ಮಾಡುವ ಮೂಲಕ ವಚನೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಪಟ್ಟಣದ ರಬಕವಿ ರಸ್ತೆಯಲ್ಲಿರುವ ಶ್ರೀನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ವಚನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಈ ಮೊದಲೇ ದೇವಸ್ಥಾನ ಸಮಿತಿಯವರಲ್ಲಿ ಹೆಸರು ನೋಂದಾಯಿಸಿದ್ದ ಮಾತೆಯರು ಜಮಾಯಿಸಿದ್ದರು. ಚಿಮ್ಮಡ ಪ್ರಭು ಶ್ರೀ, ಶೇಗುಣಸಿ ಮಹಾಂತ ಪ್ರಭು ಶ್ರೀ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತೇರದಾಳ ಶಾಸಕ ಸಿದ್ದು ಸವದಿ ಸಮೇತರಾಗಿ ನೂರಾರು ಯುವಕರು ೬ ಸಾವಿರದಷ್ಟು ಮಾತೆಯರು ವಚನ ಗ್ರಂಥಗಳನ್ನು ತಲೆ ಮೇಲೆ ಹೊತ್ತು ಶ್ರೀ ಗುರು ಬಸವ ಲಿಂಗಾಯ ನಮಃ ಎಂಬ ಮಂತ್ರವನ್ನು ಉಚ್ಛರಿಸುತ್ತಾ ಸಾಗಿದರು. ಮೆರವಣಿಗೆಯಲ್ಲಿ ಆನೆ ಮೇಲೆ ಅಂಬಾರಿ ಅದರಲ್ಲಿ ವಚನ ಗ್ರಂಥ ಹಾಗೂ ಶ್ರೀಅಲ್ಲಮಪ್ರಭು ಭಾವಚಿತ್ರ ಇಡಲಾಗಿತ್ತು. ಕುದುರೆ ಒಂಟೆ ಹಾಗೂ ಬೊಂಬೆ ವೇಷಧಾರಿಗಳು ಭಾಗಿಯಾಗಿದ್ದವು. ನೀಲಕಂಠೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ಕೆಎಚ್‌ಡಿಸಿ ಕಾಲೋನಿ, ಪೊಲೀಸ್ ಠಾಣೆ, ಪದ್ಮಾ ಆಸ್ಪತ್ರೆ, ಮಹಾವೀರ ವೃತ್ತ, ಬಸ್ ನಿಲ್ದಾಣ, ಜಾಮೀಯಾ ಮಸ್ಜೀದ್, ನಾಡಕಚೇರಿ, ಚಾವಡಿ ಸರ್ಕಲ್, ಕನ್ನಡ ಶಾಲೆ, ಗಣಪತಿ ಗುಡಿ, ದ್ವಾರ ಬಾಗಿಲು, ವಿಠ್ಠಲ ಮಂದಿರ ಮೂಲಕ ಸಾಗಿ ಅಲ್ಲಮಪ್ರಭು ದೇವಸ್ಥಾನ ತಲುಪಿ, ಗ್ರಂಥಗಳನ್ನು ಸಮರ್ಪಿಸಿದರು.

ಕಾರ್ಯಕ್ರಮಕ್ಕೆ ೬ ಸಾವಿರ ವಚನ ಗ್ರಂಥಗಳನ್ನು ಮುದ್ರಿಸಲು ಪಟ್ಟಣದ ಸಿದ್ದೇಶ್ವರ ವಿದ್ಯಾವರ್ಧಕ ಸಂಘದವರು ₹೫ ಲಕ್ಷ ದೇಣಿಗೆಯನ್ನಾಗಿ ನೀಡಿದ್ದರು. ೬ ಸಾವಿರ ಮಾತೆಯರು ಗ್ರಂಥ ಹೊತ್ತು ಸಾಗಿದ್ದರ ಜೊತೆ ಸಾಕಷ್ಟು ಸಂಖ್ಯೆಯ ಭಕ್ತರು ಭಾಗಿಯಾಗುವ ಮೂಲಕ ಆ ಸಂಖ್ಯೆಯನ್ನು ಇಮ್ಮಡಿಗೊಳಿಸುವ ಮೂಲಕ ಒಟ್ಟು ೧೨ಕ್ಕೂ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗಿಯಾಗಿದ್ದರು.

ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಎರಡು ಗಂಟೆಗಳ ಕಾಲ ವಾಹನಗಳ ಸಂಚಾರ ತಡೆಹಿಡಿಯಲಾಗಿತ್ತು. ರಸ್ತೆ ಬಳಿ ನಿಂತಿದ್ದ ಸಾರಿಗೆ ಬಸ್ ಗಳಲ್ಲಿದ್ದ ಭಕ್ತರು ಕೂಡ ಅಲ್ಲಿಯೇ ಕುಳಿತು ಸಾಗುವ ವಚನೋತ್ಸವಕ್ಕೆ ಕೈ ಮುಗಿದು ಭಕ್ತಿ ಸಲ್ಲಿಸಿದರು. ಮೆರವಣಿಗೆಯಲ್ಲಿ ಭಾಗಿಯಾದ ಮಾತೆಯರಿಗೆ ದಾರಿಯುದ್ದಕ್ಕೂ ನೀರು, ಪಾನಕ, ಚಾಕೋಲೆಟ್‌ಗಳನ್ನು ಭಕ್ತರು ನೀಡಿದರು. ನೆರೆಯ ಆಸಂಗಿಯ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಒಂದು ಟ್ಯಾಂಕರ್ ಪಾನಕ ವಿತರಣೆ ಸೇವೆ ಕೈಗೊಂಡಿದ್ದರು. ಸ್ಥಳೀಯ ಠಾಣಾಧಿಕಾರಿ ಅಪ್ಪಣ್ಣ ಐಗಳಿ ನೇತ್ರತ್ವದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಆಂಬ್ಯಲೆನ್ಸ್‌ ನೊಂದಿಗೆ ಮೆರವಣಿಗೆಯುದ್ದಕ್ಕೂ ಇದ್ದರು.