ಅರಕಲಗೂಡು ದಸರಾದಲ್ಲಿ ದೇವತೆಗಳ ಮೆರವಣಿಗೆ

| Published : Oct 14 2024, 01:21 AM IST

ಸಾರಾಂಶ

ಕೋಟೆ ದೊಡ್ಡಮ್ಮ ದೇವಸ್ಥಾನದಿಂದ ಹೊರಟ ದಸರಾ ಮೆರವಣಿಗೆಯು ಅ.ನ.ಕೃ. ವೃತ್ತದ ಮಾರ್ಗವಾಗಿ ಪೇಟೆ ಬೀದಿ ಮೂಲಕ ಸಾಗಿ ಹಳ್ಳಿಮೈಸೂರು ವೃತ್ತದ ಬಳಿಯಿರುವ ಬನ್ನಿ ಮಂಟಪ ತಲುಪಿತು. ಬಳಿಕ ಪೂಜೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಪಟ್ಟಣದಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ಶನಿವಾರ ರಾತ್ರಿ ನಡೆದ ಅರಕಲಗೂಡು ದಸರಾ ಮಹೋತ್ಸವದಲ್ಲಿ ದೇವತೆಗಳ ಸಾಲು ಮೆರವಣಿಗೆ, ವಿವಿಧ ಸ್ತಬ್ಧಚಿತ್ರಗಳ ಆಕರ್ಷಕ ಪ್ರದರ್ಶನ ಜನರ ಮನಸೂರೆಗೊಳಿಸಿತು.

ಕೋಟೆ ಕೊತ್ತಲು ಗಣಪತಿ, ಲಕ್ಷ್ಮೀನರಸಿಂಹಸ್ವಾಮಿ, ಅಮೃತೇಶ್ವರಸ್ವಾಮಿ ಹಾಗೂ ಗ್ರಾಮದೇವತೆ ದೊಡ್ಡಮ್ಮ ದೇವಸ್ಥಾನಗಳಲ್ಲಿ ವಿವಿಧ ಮಠಾಧೀಶರು ಪೂಜೆ ಸಲ್ಲಿಸಿದ ಬಳಿಕ ರಾತ್ರಿ 8 ಗಂಟೆಗೆ ಅರಕಲಗೂಡು ದಸರಾ ಪರಂಪರೆಯನ್ನು ಬಿಂಬಿಸುವ ಸ್ತಬ್ಧಚಿತ್ರಗಳ ವೈಭವದ

ಮೆರವಣಿಗೆಗೆ ಚಾಲನೆ ನೀಡಲಾಯಿತು.

ಪಟ್ಟಣದ ಗ್ರಾಮದೇವತೆ ಸೇರಿ ವಿವಿಧ ದೇವತೆಗಳ ಉತ್ಸವ ಮೂರ್ತಿಗಳನ್ನು ಬಣ್ಣ ಬಣ್ಣದ ವಿದ್ಯುತ್ ಬೆಳಕಿನಿಂದ ಅಲಂಕರಿಸಿದ್ದ ವಾಹನದಲ್ಲಿ ಇರಿಸಿ, ಉತ್ಸವ ಮೆರವಣಿಗೆ ನಡೆಸಲಾಯಿತು. ಈ ವೇಳೆ ವಿವಿಧ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.

ಯುವಕ ಮತ್ತು ಯುವತಿಯರಿಗೆ ಪ್ರತ್ಯೇಕವಾಗಿ ಡಿಜೆ ಸೌಂಡ್ ವ್ಯವಸ್ಥೆ ಕಲ್ಪಿಸಿದ್ದು, ಸಾಂಗ್ ಗೆ ಕುಣಿದು ಕುಪ್ಪಳಿಸಿದರು. ದಾರಿಯುದ್ದಕ್ಕೂ ಕೀಲುಕುದುರೆ, ಚೆಂಡೆ ವಾದ್ಯ ಕುಣಿತ, ವೀರಗಾಸೆ ಕಂಸಾಳೆ ನೃತ್ಯ ಪ್ರದರ್ಶನ ಮೆರವಣಿಗೆಗೆ ಕಳೆಗಟ್ಟುವಂತೆ ಮಾಡಿತು. ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಸಂಖ್ಯೆಯ ಜನರು ಉತ್ಸಾಹಭರಿತರಾಗಿ ಸಂಜೆ 6 ಗಂಟೆ ವೇಳೆಗೆ ತಂಡೋಡಪತಂಡವಾಗಿ ಆಗಮಿಸಿ, ದಸರಾ ಉತ್ಸವದ ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಕೋಟೆ ದೊಡ್ಡಮ್ಮ ದೇವಸ್ಥಾನದಿಂದ ಹೊರಟ ದಸರಾ ಮೆರವಣಿಗೆಯು ಅ.ನ.ಕೃ. ವೃತ್ತದ ಮಾರ್ಗವಾಗಿ ಪೇಟೆ ಬೀದಿ ಮೂಲಕ ಸಾಗಿ ಹಳ್ಳಿಮೈಸೂರು ವೃತ್ತದ ಬಳಿಯಿರುವ ಬನ್ನಿ ಮಂಟಪ ತಲುಪಿತು. ಬಳಿಕ ಪೂಜೆ ಮಾಡಲಾಯಿತು. ಈ ವೇಳೆ ಗ್ರೇಡ್ 2 ತಹಸೀಲ್ದಾರ್ ಮಲ್ಲಿಕಾರ್ಜುನ್ ಅವರು ಕದಳಿ ಛೇದನ ನಡೆಸಿ ತಾಲೂಕಿಗೆ ಉತ್ತಮ ಮಳೆ, ಬೆಳೆಯಾಗಿ ಸಮೃದ್ಧಿ ನೆಲೆಸಲಿ ಎಂದು ಹರಸಿದರು.

ವಿವಿಧ ಮಠಾಧೀಶರು, ಶಾಸಕ ಎ.ಮಂಜು, ಪಪಂ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.