ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ನಾಗದೇವತೆಗಳ ಪ್ರತಿಷ್ಠಾಪನೆ, 5ನೇ ವರ್ಷದ ವಾರ್ಷಿಕೋತ್ಸವ ಮತ್ತು ಶಿವರಾತ್ರಿ ಹಬ್ಬದ ಪ್ರಯುಕ್ತ ಎರಡು ಆನೆಗಳ ಮೇಲೆ ಅಂಬಾರಿಯಲ್ಲಿ ದೇವರುಗಳ ಮೆರವಣಿಗೆ ನಡೆಸಲು ಅನುಮತಿ ನೀಡುವಂತೆ ಸಮಾಜ ಸೇವಕ ಭೋಜರಾಜು ಜಿಲ್ಲಾಧಿಕಾರಿಗಳು ಮತ್ತು ಪೋಲೀಸ್ ವರಿಷ್ಠಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿದ ನಂತರ ಸಮಾಜ ಸೇವಕ ಭೋಜರಾಜು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಸಹ ಮಾ.8ರಂದು ನಾಗದೇವತೆಯ 5ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮತ್ತು ಶಿವರಾತ್ರಿ ಹಬ್ಬದ ಪ್ರಯುಕ್ತ ಛತ್ರದ ಬೀದಿ ಮುಖ್ಯ ರಸ್ತೆಯ ಬಲಮುರಿ ಗಣಪತಿ ದೇವಾಲಯದ ಬಳಿ ಸಂಜೆ ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಮಾ.9ರಂದು ಅರ್ಕೇಶ್ವರ ದೇವಾಲಯದ ಆವರಣದಲ್ಲಿ ಮಧ್ಯಾಹ್ನ ಅನ್ನಸಂತರ್ಪಣೆ ಮತ್ತು ಸಂಜೆ ಕಲಾತಂಡಗಳೊಂದಿಗೆ ಎರಡು ಆನೆಗಳ ಮೇಲೆ ಶ್ರೀ ಅರ್ಕೇಶ್ವರಸ್ವಾಮಿ ಮತ್ತು ಶ್ರೀ ವೇಣುಗೋಪಾಲ ಸ್ವಾಮಿಯವರ ಅದ್ಧೂರಿ ಮೆರವಣಿಗೆ ನಡೆಯಲಿದೆ.ನಗರದ ಕೆಂಪೇಗೌಡ ವೃತ್ತದಲ್ಲಿರುವ ಶ್ರೀ ವೆಂಕಟರಮಣಸ್ವಾಮಿ ದೇವಾಲಯ ಬಳಿಯಿಂದ ಮೆರವಣಿಗೆ ಹೊರಟು ಮಾಗಡಿ ರಸ್ತೆ ಮೂಲಕ ಐಜೂರು ವೃತ್ತ, ಮುಖ್ಯ ರಸ್ತೆ, ಎಂ.ಜಿ.ರಸ್ತೆ, ಕಾಮನಗುಡಿ ವೃತ್ತ, ಅಗ್ರಹಾರ, ಆಂಜನೇಯ ದೇವಾಲಯ ಮುಖಾಂತರ ಛತ್ರದ ಬೀದಿಯಲ್ಲಿರುವ ಶ್ರೀರಾಮ ದೇವಾಲಯಲ್ಲಿ ಪೂಜೆ ಸಲ್ಲಿಸಿ, ಶ್ರೀ ಅರ್ಕೇಶ್ವರ ದೇವಾಲಯ ತಲುಪಿ ರಾತ್ರಿ 10 ಘಂಟೆಗೆ ಮಹಾ ಮಂಗಳಾರತಿಯೊಂದಿಗೆ ಮುಕ್ತಾಯವಾಗಲಿದೆ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.ಉತ್ಸವವು ನಡೆಯುವ ಮಾರ್ಗದುದ್ದಕ್ಕೂ ನಗರಸಭೆ ಪೌರಾಯುಕ್ತ ಎಲ್.ನಾಗೇಶ್ ಅವರು ರಸ್ತೆ ಸ್ವಚ್ಛತೆ ಹಾಗೂ ಸೌಕರ್ಯಗಳನ್ನು ಸರಿಪಡಿಸಿಕೊಡುವುದಾಗಿ ಸ್ಪಂದಿಸಿದ್ದಾರೆ ಎಂದು ಭೋಜರಾಜು ತಿಳಿಸಿದರು. ಈ ವೇಳೆ ಜೆಡಿಎಸ್ ಹಿಂದುಳಿದ ಘಟಕದ ಅಧ್ಯಕ್ಷ ರೈಡ್ ನಾಗರಾಜು, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೆಂಕಟೇಶ್, ಪ್ರಮುಖರಾದ ಹರೀಶ್, ಶ್ರೀನಿವಾಸ್, ರಾಘವೇಂದ್ರ, ಮಂಜು, ರವಿ ಮತ್ತಿತರರು ಹಾಜರಿದ್ದರು.-