ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆಯ ಈದ್ ಮಿಲಾದ್ ಹಬ್ಬವನ್ನು ಬುಧವಾರ ಮುಸ್ಲಿಂ ಬಾಂಧವರು ಅದ್ಧೂರಿಯಾಗಿ ಆಚರಿಸಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆಯ ಈದ್ ಮಿಲಾದ್ ಹಬ್ಬವನ್ನು ಬುಧವಾರ ಮುಸ್ಲಿಂ ಬಾಂಧವರು ಅದ್ಧೂರಿಯಾಗಿ ಆಚರಿಸಿದರು.ನಗರದ ಮಹಿಬೂಬಿಯಾ ಕಾಲೋನಿಯ ನೂರಾನಿ ಮಸ್ಜಿದ್‌ನಲ್ಲಿ ಈದ್ ಆಚರಣಾ ಸಮಿತಿಯಿಂದ ಮೆರವಣಿಗೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಆರ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಮಾತನಾಡಿ, ಸಿಂಧನೂರು ಶಾಂತಿ ಮತ್ತು ಸೌಹಾರ್ದತೆ ಹೆಸರುವಾಸಿಯಾಗಿದೆ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಹಾಗೂ ಪ್ರವಾದಿಯವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಜೀವನ ನಡೆಸಬೇಕು ಎಂದರು.
ಜೆಡಿಎಸ್ ಯುವ ಮುಖಂಡ ಅಭಿಷೇಕ ನಾಡಗೌಡ ಮಾತನಾಡಿ, ನಾವೆಲ್ಲರೂ ಒಂದೇ ಎನ್ನುವ ಭಾವನೆ ಎಲ್ಲರಲ್ಲಿ ಮೂಡಿದಾಗ ಮಾತ್ರ ಹಬ್ಬಗಳಿಗೆ ನಿಜವಾದ ಅರ್ಥ ಬರುತ್ತದೆ. ಮಹನೀಯರ ಜೀವನದ ಸಂದೇಶಗಳನ್ನು ಪಾಲಿಸಿ, ಶಾಂತಿಯಿಂದ ಬದುಕು ಸಾಗಿಸಬೇಕು ಎಂದು ಹೇಳಿದರು.ಜಮಾಅತೆ ಇಸ್ಲಾಮಿ ಹಿಂದ್ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಹುಸೇನ್ ಸಾಬ್, ಹಿರಿಯ ಮುಖಂಡ ಹೆಚ್.ಎನ್.ಬಡಿಗೇರ, ಮೌಲಾನಾ ಆಫೀಜ್ ಮೆಹರಾಜ್ ಮೌಲಾನಾ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜುಗೌಡ ಬಾದರ್ಲಿ,ಸೈಯದ್ ಬಾಬರ್ ಪಾಷಾ ವಕೀಲ, ಮಹ್ಮದ್ ಅಲ್ತಾಪ್ ಸಾಹುಕಾರ್, ಖಾಜಿಮಲಿಕ್ ವಕೀಲ, ಸೈಯದ್ ಹಾರೂನ್ ಸಾಬ್, ಹಾಜಿಮಸ್ತಾನ್, ಮೆಹೆಬೂಬ್ ಖಾನ್ ಸಾಬ್, ಶಿವು ಪಾಟೀಲ್ ಗುಂಜಳ್ಳಿ ವಿವಿಧ ರಾಜಕೀಯ ಪಕ್ಷಗಳ ಹಾಗೂ ಸಮಾಜದ ಮುಖಂಡರು ಇದ್ದರು.ಭವ್ಯ ಮೆರವಣಿಗೆ: ನಗರದ ಮಹಿಬೂಬಿಯಾ ಕಾಲೋನಿಯ ನೂರಾನಿ ಮಸೀದಿಯಲ್ಲಿ ಹಸಿರು ಧ್ವಜಸ್ತಂಭಕ್ಕೆ ರಾಜಕೀಯ ಪಕ್ಷಗಳ ಮುಖಂಡರು ಪುಷ್ಪ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಸಂಚರಿಸಿ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮೂಲಕ ಕೋಟೆ ಪ್ರದೇಶದ ಕಿಲ್ಲಾ ಮಸೀದಿಯನ್ನು ತಲುಪಿತು. ಮಕ್ಕಾ–ಮದೀನಾ, ಅಲ್ಲಾಹು ಹೆಸರಿನ ಸ್ತಬ್ಧ ಚಿತ್ರಗಳ ಭವ್ಯ ಮೆರವಣಿಗೆ ನಡೆಸಲಾಯಿತು. ಮುಸ್ಲಿಂ ಧರ್ಮಗುರುಗಳು ಪೈಗಂಬರ್ ಅವರ ಸಂದೇಶಗಳನ್ನು ಮೆರವಣಿಗೆ ಯುದ್ಧಕ್ಕೂ ಸಾರಿದರು. ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.
ನಗರದ ಜನತಾ ಕಾಲೋನಿಯ ಯುವಕರು ತಯಾರಿಸಿದ್ದ ಕೇಸರಿ, ಬಿಳಿ ಹಾಗೂ ಹಸಿರು ರಾಷ್ಟ್ರ ಧ್ವಜದ ಬಣ್ಣದ ‘ಅಲ್ಲಾಹು’ ಪದದ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಗಮನ ಸೆಳೆಯಿತು. ದೇಶಪ್ರೇಮದ ಸಂದೇಶ ಸಾರುವ ಸ್ತಬ್ಧಚಿತ್ರ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು.