ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಚಲನಚಿತ್ರ ಪ್ರಚಾರದ ವೇಳೆ ಮತ್ತು ಬರಿಸುವ ಮದ್ದು ಕೊಟ್ಟು ಅರೆಪ್ರಜ್ಞಳಾದ ಬಳಿಕ ಅಸಭ್ಯ ವಿಡಿಯೋ ಮಾಡಿ ನಟಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ನಿರ್ಮಾಪಕನೊಬ್ಬನನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ನಾಗರಬಾವಿ 2ನೇ ಹಂತದ ಹೇಲ್ತ್ ಲೇಔಟ್ ನಿವಾಸಿ ಬಿ.ಆ.ಹೇಮಂತ್ ಕುಮಾರ್ ಬಂಧಿತನಾಗಿದ್ದು, ಸಿನಿಮಾ ಪ್ರಚಾರಕ್ಕೆ ಮುಂಬೈಗೆ ಕರೆದೊಯ್ದು ತಂಪು ಪಾನೀಯದಲ್ಲಿ ಮತ್ತು ಬರಿಸುವ ಮದ್ದು ಬೆರೆಸಿ ಕುಡಿಸಿ ನಟಿಗೆ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿ ಬಂಧನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಸಂತ್ರಸ್ತೆ ನಟಿಸಿದ್ದಾರೆ. ಮೂರು ವರ್ಷಗಳ ಹಿಂದೆ ಅವರಿಗೆ ನಿರ್ಮಾಪಕ ಹಾಗೂ ಸಹ ನಿರ್ದೇಶಕ ಹೇಮಂತ್ ಕುಮಾರ್ ಪರಿಚಯವಾಗಿದೆ. ತಮ್ಮ ನಿರ್ಮಾಣದ ''''''''ರಿಚ್ಚಿ'''''''' ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ನಟಿಸುವಂತೆ ಆತನ ಕೋರಿಕೆಗೆ ಸಂತ್ರಸ್ತೆ ಒಪ್ಪಿದ್ದರು. ಕೊನೆಗೆ ₹2 ಲಕ್ಷ ಸಂಭಾವನೆ ಸಹ ನಿಗದಿಯಾಗಿತ್ತು. ಆದರೆ, ಕೆಲ ಕಾರಣಗಳಿಂದ ಸಿನಿಮಾ ಚಿತ್ರೀಕರಣವು ದೀರ್ಘಕಾಲದವರೆಗೆ ಮುಂದೂಡಿದ್ದರು. ಆ ಸಿನಿಮಾವನ್ನು ಪೂರ್ಣಗೊಳಿಸದೆ ಸಂತ್ರಸ್ತೆಗೆ ಅಸಭ್ಯ ರೀತಿಯಲ್ಲಿ ಉಡುಗೆ ತೊಡುವಂತೆ ಪದೇ ಪದೇ ಕಿರುಕುಳ ನೀಡಿದ್ದ. ಶೂಟಿಂಗ್ ಸಮಯದಲ್ಲಿ ಆಕೆಗೆ ನಿಂದನೆ ಹಾಗೂ ಅನುಚಿತ ರೀತಿಯಲ್ಲಿ ಸ್ಪರ್ತಿಸುತ್ತಿದ್ದ ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾರೆ.ಎರಡು ವರ್ಷಗಳ ಹಿಂದೆ ಚಲನಚಿತ್ರದ ಪ್ರಚಾರಕ್ಕಾಗಿ ಮುಂಬೈನಲ್ಲಿ ಪತ್ರಿಕಾಗೋಷ್ಠಿಯನ್ನು ಆರೋಪಿ ಏರ್ಪಡಿಸಿದ್ದ. ಆ ಪತ್ರಿಕಾಗೋಷ್ಠಿ ಮುಗಿದ ನಂತರ ರಾತ್ರಿ ಊಟದ ವೇಳೆ ಮದ್ಯ ಸೇವನೆಗೆ ನಟಿಗೆ ಆರೋಪಿ ಒತ್ತಾಯಿಸಿದ್ದಾನೆ. ಇದನ್ನು ನಿರಾಕರಿಸಿ ತಂಪು ಪಾನೀಯವನ್ನು ಮಾತ್ರ ನಟಿ ಕೇಳಿದ್ದರು. ಆಗ ಸಂತ್ರಸ್ತೆ ಶೌಚಾಲಯಕ್ಕೆ ತೆರಳಿದಾಗ ತಂಪು ಪಾನೀಯಕ್ಕೆ ಮತ್ತು ಬರಿಸುವ ಔಷಧವನ್ನು ಆತ ಮಿಶ್ರಣ ಮಾಡಿದ್ದಾನೆ. ಈ ಜ್ಯೂಸ್ ಕುಡಿದು ನಟಿ ಅಸ್ವಸ್ಥಳಾದಾಗ ಅಸಭ್ಯ ವಿಡಿಯೋಗಳನ್ನು ಆರೋಪಿ ಚಿತ್ರೀಕರಿಸಿಕೊಂಡಿದ್ದ. ಬಳಿಕ ಆ ವಿಡಿಯೋವನ್ನು ಮುಂದಿಟ್ಟು ಬ್ಲಾಕ್‌ಮೇಲ್ ಮಾಡಿ ಆರೋಪಿ ಕಿರುಕುಳ ಕೊಡುತ್ತಿದ್ದ ಎಂದು ದೂರಿನಲ್ಲಿ ಹೇಳಿದ್ದಾರೆ.