ಹವಾಮಾನ ಬದಲಾವಣೆಯಿಂದ ಉತ್ಪಾದನೆ ಕುಂಠಿತ: ಕೃಷಿ ಸಚಿವ ಸಿಆರ್‌ಎಸ್

| Published : Jul 15 2024, 01:54 AM IST

ಸಾರಾಂಶ

ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘವು ರೈತರ ಬವಣೆಗಳನ್ನು ತಗ್ಗಿಸಲು ಅನೇಕ ರೀತಿಯಲ್ಲಿ ಪ್ರಯತ್ನ ಪಡುತ್ತಿದೆ. ಜಾಗತಿಕವಾಗಿ ಪ್ರಚಲಿತವಾಗಿರುವ ಕಾರ್ಬನ್ ಕ್ರೆಡಿಟ್ ಯೋಜನೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದರೆ ನಾಡಿನ ಸಮಸ್ತ ರೈತರಿಗೂ ಪ್ರಯೋಜನ ದೊರೆತಂತಾಗುತ್ತದೆ. ಕಾರ್ಬನ್ ಕ್ರೆಡಿಟ್ ಯೋಜನೆಯನ್ನು ಮಂಡ್ಯ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಜಾರಿಗೊಳಿಸುತ್ತಿರುವುದು ಸಂತಸದ ವಿಚಾರವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಾಗತಿಕ ತಾಪಮಾನ ಏರಿಕೆ, ಅನಿಲಗಳ ಹೊರಸೂಸುವಿಕೆ ಹವಾಮಾನ ಬದಲಾವಣೆಗೆ ಕಾರಣವಾಗುತ್ತಿದೆ. ಇದು ನೈಸರ್ಗಿಕ ಅಸಮತೋಲನಕ್ಕೆ ಕಾರಣವಾಗಿ ಕೃಷಿ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ. ಇದು ಕಳವಳಕಾರಿ ವಿಷಯವಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆತಂಕ ವ್ಯಕ್ತಪಡಿಸಿದರು.

ನಗರದ ಪಿಇಎಸ್ ವಿದ್ಯಾಸಂಸ್ಥೆಯ ವಿವೇಕಾನಂದ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳೆಗಾರರ ಸಂಘ, ಸಂಪೂರ್ಣ ಸಾವಯವ ಕೃಷಿಕರ ಸಂಘ ಹಾಗೂ ಆರಿಗ್ರಾಫ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಕೃಷಿ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕಾರ್ಬನ್ ಕ್ರೆಡಿಟ್ ಯೋಜನೆಯು ಪರಿಸರದಲ್ಲಿನ ಮಾಲಿನ್ಯವನ್ನು ಸರಿದೂಗಿಸಲು ಇಂಗಾಲದ ಹೊರಸೂಸುವಿಕೆಯನ್ನು ತಡೆದು, ಪರಿಸರದಲ್ಲಿನ ಇಂಗಾಲದ ಡೈಯಾಕ್ಸೈಡ್‌ನ್ನು ಹಿಡಿದಿಡುವ ಪ್ರಮುಖ ತಂತ್ರವಾಗಿದೆ. ಈ ಮೂಲಕ ನೈಸರ್ಗಿಕ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘವು ರೈತರ ಬವಣೆಗಳನ್ನು ತಗ್ಗಿಸಲು ಅನೇಕ ರೀತಿಯಲ್ಲಿ ಪ್ರಯತ್ನ ಪಡುತ್ತಿದೆ. ಜಾಗತಿಕವಾಗಿ ಪ್ರಚಲಿತವಾಗಿರುವ ಕಾರ್ಬನ್ ಕ್ರೆಡಿಟ್ ಯೋಜನೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದರೆ ನಾಡಿನ ಸಮಸ್ತ ರೈತರಿಗೂ ಪ್ರಯೋಜನ ದೊರೆತಂತಾಗುತ್ತದೆ. ಕಾರ್ಬನ್ ಕ್ರೆಡಿಟ್ ಯೋಜನೆಯನ್ನು ಮಂಡ್ಯ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಜಾರಿಗೊಳಿಸುತ್ತಿರುವುದು ಸಂತಸದ ವಿಚಾರವಾಗಿದೆ. ಇಡೀ ರಾಜ್ಯಾದ್ಯಂತ ಈ ಯೋಜನೆ ಜಾರಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ. ನೊಂದು ಬೆಂದ ರೈತರಿಗೆ ಈ ಯೋಜನೆಯು ವರವಾಗಲಿದೆ ಎಂದರು.

ಸಿರಿಧಾನ್ಯ ಆಹಾರದಲ್ಲಿ ಉಪಯೋಗಿಸುವುದರಿಂದ ಆರೋಗ್ಯಕರ ಜೀವನ ನಡೆಸಬಹುದು. ಸಾವಯವ ಕೃಷಿಯಾದ ಸಿರಿಧಾನ್ಯವನ್ನು ಬೆಳೆಯುವಂತಹ ಪದ್ಧತಿಯನ್ನು ಕಾರ್ಯಕ್ರಮದಲ್ಲಿ ತಿಳಿಸಲಾಗುತ್ತದೆ. ಬೆಳೆದಂತಹ ಸಿರಿಧಾನ್ಯವನ್ನು ಮಾರಾಟ ಮಾಡಲು ಮಾರ್ಕೆಟ್ ವ್ಯವಸ್ಥೆ ಕಲ್ಪಿಸಲಾಗುವುದು. ಸಿರಿಧಾನ್ಯವನ್ನು ಹೆಚ್ಚಿನ ಖರ್ಚಿಲ್ಲದೆ ಬೆಳೆಯಬಹುದಾಗಿದೆ ಎಂದರು.

ಕೃಷಿಯಲ್ಲಿ ಬೆಳೆದ ಇನ್ನಿತರೆ ಬೆಳೆಗಳಿಗೆ ಮಾರುಕಟ್ಟೆ ಬೆಲೆಯಲ್ಲಿ ಏರುಪೇರು ಸಾಮಾನ್ಯವಾಗಿದ್ದು, ಸಿರಿಧಾನ್ಯ ಬೆಳೆಗಾರರಿಗೆ ಅದರ ಸಮಸ್ಯೆ ಇರುವುದಿಲ್ಲ. ಸಿರಿಧಾನ್ಯವನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದು ಆದ್ದರಿಂದ ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮಂಡ್ಯ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಅಶೋಕ್, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಕೆ.ಅಮರನಾರಾಯಣ, ವನಕೃಷಿ ಸಂಘದ ಜಿಲ್ಲಾಧ್ಯಕ್ಷ ನಾಗರಾಜು, ರೈತ ಮುಖಂಡರಾದ ಸುನಂದಾ ಸೇರಿದಂತೆ ಇನ್ನಿತರ ರೈತರು ಉಪಸ್ಥಿತರಿದ್ದರು.