ಕನ್ನಡಪ್ರಭ ವಾರ್ತೆ ಮೈಸೂರುಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಯಾಗಿ, ಮೈಸೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಎ.ಪಿ. ಜ್ಞಾನ ಪ್ರಕಾಶ್ ಅವರನ್ನು ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ಅವರು ಮೂರು ವರ್ಷಗಳ ಅವಧಿಗೆ ನೇಮಕ ಮಾಡಿದ್ದಾರೆ.ಈವರೆಗೆ ಕುಲಪತಿಯಾಗಿದ್ದ ಪ್ರೊ.ಶರಣಪ್ಪ ವಿ. ಹಲಸೆ ಅವರ ಅಧಿಕಾರವಧಿ ಕಳೆದ ವರ್ಷದ ನ.11ಕ್ಕೆ ಮುಕ್ತಾಯವಾಗಿತ್ತು. ಹೀಗಾಗಿ ಅವರ ಅವಧಿಯನ್ನು ಈ ವರ್ಷದ ಜೂ.30 ರವರೆಗೆ ರಾಜ್ಯಪಾಲರು ವಿಸ್ತರಿಸಿದ್ದರು.ಪ್ರೊ. ಎ.ಪಿ. ಜ್ಞಾನ ಪ್ರಕಾಶ್ ಅವರು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿ ಹಾಗೂ ವಿಭಾಗಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಗುಲ್ಬರ್ಗಾ ವಿಶ್ವವಿದ್ಯಾನಿಲಯದಿಂದ ಎಂ.ಎಸ್ಸಿ. ಹಾಗೂ ಎಂ.ಫಿಲ್. ಪದವಿಗಳನ್ನು ಪಡೆದು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ ಗಳಿಸಿದ್ದಾರೆ.ಅಮೆರಿಕದ ಜಾರ್ಜಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ತೈವಾನ್‌ನ ರಾಷ್ಟ್ರೀಯ ಡೊಂಗ್ ಹ್ವಾ ವಿಶ್ವವಿದ್ಯಾಲಯದಲ್ಲಿ ಪೋಸ್ಟ್-ಡಾಕ್ಟರಲ್ ಸಂಶೋಧಕರಾಗಿ ಕಾರ್ಯನಿರ್ವಹಿಸಿ ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಅನುಭವವನ್ನು ಸಂಪಾದಿಸಿದ್ದಾರೆ.2007 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗಕ್ಕೆ ಸಹಾಯಕ ಪ್ರಾಧ್ಯಾಪಕರಾಗಿ ಸೇರ್ಪಡೆಯಾದ ಅವರು, ತಮ್ಮ ಶೈಕ್ಷಣಿಕ ಸಾಧನೆ ಮತ್ತು ಆಡಳಿತ ದಕ್ಷತೆಯ ಮೂಲಕ ಪ್ರಾಧ್ಯಾಪಕರಾಗಿ ಹಾಗೂ ನಂತರ ಹಿರಿಯ ಪ್ರಾಧ್ಯಾಪಕರಾಗಿ ಪದೋನ್ನತಿ ಹೊಂದಿದ್ದಾರೆ. ಅವರು ಕುಲಸಚಿವರು (ಪರೀಕ್ಷಾಂಗ), ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಮತ್ತು ಔಟ್ರೀಚ್ ಕಾರ್ಯಕ್ರಮಗಳ ನಿರ್ದೇಶಕರು ಸೇರಿದಂತೆ ಹಲವು ಮಹತ್ವದ ಆಡಳಿತಾತ್ಮಕ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಶಿಕ್ಷಣತಜ್ಞ, ವಿಜ್ಞಾನಿ ಹಾಗೂ ಆಡಳಿತ ಪರಿಣಿತರಾದ ಪ್ರೊ.ಎ.ಪಿ. ಜ್ಞಾನ ಪ್ರಕಾಶ್ ಅವರನ್ನು ಗುರುವಾರ ನೇಮಕಗೊಳಿಸಿರುವುದು ಶೈಕ್ಷಣಿಕ ವಲಯದಲ್ಲಿ ಹರ್ಷವನ್ನುಂಟು ಮಾಡಿದೆ ಎಂದು ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಟಿ.ಆರ್. ಚಂದ್ರಶೇಖರ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಹೊಸ ಶೈಕ್ಷಣಿಕ ದೃಷ್ಟಿಕೋನ, ಸಂಶೋಧನಾ ಶ್ರೇಷ್ಠತೆ, ತಂತ್ರಜ್ಞಾನ ಆಧಾರಿತ ಮುಕ್ತ ಮತ್ತು ದೂರಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿ ಹಾಗೂ ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸಾಧನೆಗಳತ್ತ ಮತ್ತಷ್ಟು ವೇಗವಾಗಿ ಮುನ್ನಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಪ್ರೊ.ಎ.ಪಿ. ಜ್ಞಾನಪ್ರಕಾಶ್ ನೇಮಕ
2007 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗಕ್ಕೆ ಸಹಾಯಕ ಪ್ರಾಧ್ಯಾಪಕರಾಗಿ ಸೇರ್ಪಡೆ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.