ಸಾರಾಂಶ
ಮೈಸೂರು : ಇಡೀ ನಾಗರೀಕತೆಗೆ ತಾತ್ವಿಕತೆಯ ಅರಾಜಕತೆ ಬಂದಿದೆ. ಜಗತ್ತಿನಲ್ಲಿ ಹಿಂದೆಂದೂ ಕಾಣದಷ್ಟು ಹಿಂಸೆ ತಾಂಡವಾಡುತ್ತಿದೆ ಎಂದು ವಿಮರ್ಶಕಿ ಡಾ.ಎಂ.ಎಸ್. ಆಶಾದೇವಿ ಕಳವಳ ವ್ಯಕ್ತಪಡಿಸಿದರು.
ಮೈಸೂರು ವಿವಿ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಮಾಲಗತ್ತಿ ದಶಬಲ ಟ್ರಸ್ಟ್, ರೈಟರ್ಸ್ ಅಕಾಡೆಮಿಯು ಶನಿವಾರ ಆಯೋಜಿಸಿದ್ದ ಕಾವ್ಯ ಢಮರುಗ- 2025 ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಪ್ರೊ. ಅರವಿಂದ ಮಾಲಗತ್ತಿ ಅವರ ಯವ್ವ ತಾಯವ್ವ ಮಾತೆಯ ಮಹಾಗೀತೆ- ಖಂಡ ಕಾವ್ಯ ಕೃತಿಯನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ಹಿಂಸೆಯಿಂದ ಮಾನವ ಕುಲ ಪಾರು ಪಾಡುವ ಸ್ಥಿತಿಯ ಹುಡುಕಾಟದಲ್ಲಿ ಲೋಕ ನಿರತವಾಗಿದೆ. ಮನುಕುಲ ಪಾರು ಮಾಡುವ ಕರಾರು ಇಲ್ಲದೇ ಪ್ರೀತಿಸುವ ತಾಯ್ತನವನ್ನು ಮುನ್ನೆಲೆಗೆ ತರಬೇಕಿದೆ ಎಂದು ಅವರು ಹೇಳಿದರು.
ಈ ಹೊತ್ತು ಸಾಹಿತ್ಯ ಸೇರಿ ಎಲ್ಲಾ ಕಲಾ ಪ್ರಕಾರಗಳು ಸಮುದಾಯದಲ್ಲಿ ನಿರ್ವಹಿಸಬೇಕಾದ ಪಾತ್ರ ಯಾವುದು? ಆ ಪಾತ್ರವನ್ನು ನಿರ್ವಹಿಸುತ್ತಿವೆಯೇ ಅನಿಸುತ್ತದೆ. ಆದರೆ, ಕಲೆಯ ಕಡೆಗೆ ನೋಡಬೇಕಾದ ಅನಿವಾರ್ಯತೆ ಎದುರಿಗಿದೆ. ಕಲೆಗಳನ್ನು ವೈದ್ಯರ ಪಾತ್ರದಲ್ಲಿ ಕಾಣಬೇಕಿದೆ. ಅನೇಕ ಬಗೆಯ ಬಿಕ್ಕಟ್ಟು ಹಾಗೂ ಮನಸ್ಥಿತಿ ಶುದ್ಧ ಮಾಡುವ ಮಾಂತ್ರಿಕ ಶಕ್ತಿ ಕಲೆಗಳಿಗಿದೆ ಎಂದು ಅವರು ತಿಳಿಸಿದರು.
ಪ್ರೊ. ಅರವಿಂದ ಮಾಲಗತ್ತಿ ಅವರ ಕಾವ್ಯ ಈ ಹೊತ್ತಿನ ಅಗತ್ಯವನ್ನು ಎತ್ತಿ ಹಿಡಿಯುತ್ತದೆ. ತಾಯಿ ವಿಶ್ವಪ್ರಜ್ಞೆಯಾಗಿ ಭಾವಪೂರ್ಣ ನಿರೂಪಣೆ ಇದೆ. ಸ್ವಾತಂತ್ರ್ಯೋತ್ತರ ಭಾರತದ ಹೆಣ್ಣು ಮಕ್ಕಳ ಝಲಕ್ ಇದೆ. ತಾಯ್ತನ ಅನ್ನೋದು ಅಮರ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕವಯತ್ರಿ, ಐಪಿಎಸ್ ಅಧಿಕಾರಿ ಡಾ. ಧರಣಿದೇವಿ ಮಾಲಗತ್ತಿ ಮಾತನಾಡಿ, ಶಿವ ಢಮರುಗ ನುಡಿಸಿದಾಗ ದನಿ ಉತ್ಪತ್ತಿಯಾಯಿತು. ದನಿಯಿಂದ ಭಾಷೆ ಸೃಷ್ಟಿಯಾಯಿತು. ಅದನ್ನು ಪಾಣಿನಿ 14 ಶಿವ ಸ್ತೋತ್ರಗಳಾಗಿ ಸೃಷ್ಟಿಸಿದೆ. ಭಾಷೆ ಉತ್ಪತ್ತಿಯ ಪ್ರತಿಮೆಯಾಗಿ ನಾವಿದನ್ನು ಬಳಸುತ್ತಿದ್ದೇವೆ ಎಂದು ಹೇಳಿದರು.
ಕಾವ್ಯ ಢಮರುಗ ಕವನ ಸಂಕಲನದ ಕವಿತೆಗಳಲ್ಲಿ ಅಂತರಂಗದ ಢಮರುಗ ನುಡಿಯುತ್ತಿದೆ. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿವೆ. ಜಾತಿ ತಾರತಮ್ಯ ಖಂಡಿಸುತ್ತಿವೆ. ಒಳ್ಳೆಯದನ್ನು ಉದ್ದೀಪನಗೊಳಿಸಿ ಸಮಾನತೆ ತರುವ ಆಶಯಗಳಿವೆ ಎಂದು ಅವರು ಶ್ಲಾಘಿಸಿದರು.
ಕಾವ್ಯ ಢಮರುಗ ಕೃತಿಯನ್ನು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಡಾ.ಎನ್.ಕೆ. ಲೋಲಾಕ್ಷಿ ಬಿಡುಗಡೆಗೊಳಿಸಿದರು. ದಶಬಲ ಟ್ರಸ್ಟ್ ಉಪಾಧ್ಯಕ್ಷ ಡಾ.ಡಿ.ಕೆ. ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಕರ್ತೃ ಪ್ರೊ. ಅರವಿಂದ ಮಾಲಗತ್ತಿ ಇದ್ದರು. ಡಾ.ನೀ.ಗೂ. ರಮೇಶ್ ಸ್ವಾಗತಿಸಿದರು.
ಭಾಷೆ ಕೇಳುಗರ ಮತ್ತು ಅನುಕರಣೆಯಿಂದ ಬೆಳೆಯಿತು. ಲಿಖಿತ ಪರಂಪರೆ ನಂತರ ಬಂದದ್ದು. ಕಾವ್ಯ ಹೇಗಿರಬೇಕು, ಒಳ್ಳೆಯ ಭಾಷೆ, ಒಂದು ಪದ ಹೆಚ್ಚಾಗದಂತೆ ಹದವಾಗಿರಬೇಕು. ಪ್ರಾಸ, ಛಂದಸ್ಸು, ಲಯ ಮುಖ್ಯ. ಇವುಗಳನ್ನು ಹೊರತುಪಡಿಸಿ ಕಾವ್ಯ ಸೃಷ್ಟಿಯಾಗಿವೆ.
- ಡಾ. ಧರಣಿದೇವಿ ಮಾಲಗತ್ತಿ, ಸಾಹಿತಿ