ಪ್ರೊ. ಎಂಡಿಎನ್‌ ಆಶಯದಂತೆ ರೈತರು ಸ್ವಾವಲಂಬಿಗಳಾಗಿ

| Published : Feb 24 2024, 02:35 AM IST

ಪ್ರೊ. ಎಂಡಿಎನ್‌ ಆಶಯದಂತೆ ರೈತರು ಸ್ವಾವಲಂಬಿಗಳಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ಆಶಯದಂತೆ ಅವರು ಹಾಕಿ ಕೊಟ್ಟ ಹಾದಿಯಲ್ಲಿ ಸಾಗುವ ಮೂಲಕ ರೈತರು ಸ್ವಾವಲಂಬಿಗಳಾಗಬೇಕು ಎಂದು ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ ವಿಶ್ವ ರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ಆಶಯದಂತೆ ಅವರು ಹಾಕಿ ಕೊಟ್ಟ ಹಾದಿಯಲ್ಲಿ ಸಾಗುವ ಮೂಲಕ ರೈತರು ಸ್ವಾವಲಂಬಿಗಳಾಗಬೇಕು ಎಂದು ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ತಿಳಿಸಿದರು.

ಪ್ರೊ.ಎಂ.ಡಿ. ನಂಜುಂಡಸ್ವಾಮಿ ಸಂಶೋಧನಾ ಪೀಠ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ವಿಶ್ವ ರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿ ರವರ 88ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಬಾಳೆ ಮತ್ತು ಅರಿಶಿಣ ಬೆಳೆಗಳಲ್ಲಿನ ಉತ್ಕೃಷ್ಟ ಬೇಸಾಯ ಪದ್ಧತಿಗಳ ಬಗ್ಗೆ ರೈತ ಮತ್ತು ವಿಜ್ಞಾನಿಗಳ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾವು ಬಾಲ್ಯದಿಂದಲೇ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಕಾರ್ಯ ಪ್ರವೃತ್ತಿಗಳನ್ನು ಅನುಸರಿಸುತ್ತಾ ಪ್ರಸ್ತುತ ಅಳವಡಿಸಿಕೊಂಡು ರೈತ ಸಂಘಟನೆಯಲ್ಲಿ ಪಾಲ್ಗೊಂಡು ಮುಂಚೂಣಿಯಲ್ಲಿ ನಿಂತು ರೈತರ ಬೇಡಿಕೆಗಳನ್ನು ಈಡೇರಿಸಲು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವಾಗಿ ತಿಳಿಸಿದರು. ಇದಲ್ಲದೆ ರೈತರು ಸ್ವಾವಲಂಬಿಗಳಾಗಿ ಸುಸ್ಥಿರತೆಯನ್ನು ಕಾಯ್ದುಕೊಳ್ಳಲು ಸ್ವತಃ ಬೀಜ ಬ್ಯಾಂಕ್ ಗಳನ್ನು ಸ್ಥಾಪಿಸಿ ಉತ್ಕೃಷ್ಟವಾದ ಬಿತ್ತನೆ ಬೀಜಗಳು ರೈತ ಸಮುದಾಯಕ್ಕೆ ಸರಿಯಾದ ಕಾಲಕ್ಕೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಮತ್ತು ಬೀಜ ಸ್ವಾಮ್ಯತೆ ಸ್ಥಾಪಿಸಿಕೊಳ್ಳಬೇಕಾಗಿ ಸಲಹೆ ನೀಡಿದರು. ಕೃಷಿಯಲ್ಲಿ ಹೆಚ್ಚಿನ ಆದಾಯ ಮತ್ತು ಲಾಭ ಗಳಿಸಲು ಮೌಲ್ಯವರ್ಧನೆಗೆ ಆದ್ಯತೆ ನೀಡಿ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡಲು ಕರೆ ನೀಡಿದರು. ನಮ್ಮ ಜಿಲ್ಲೆಯಲ್ಲಿ ಪ್ರಮುಖವಾಗಿ ಬಾಳೆ, ಅರಿಶಿಣ ಮತ್ತು ನಿರ್ದಿಷ್ಟ ವಿಸ್ತೀರ್ಣದಲ್ಲಿ ಸಿರಿಧಾನ್ಯಗಳು ಉತ್ಪಾದನೆ ಆಗುತ್ತಿದ್ದು, ಈ ಕ್ಷೇತ್ರಗಳಲ್ಲಿ ಹೆಚ್ಚಿನ ಮೌಲ್ಯವರ್ಧನೆ ಚಟುವಟಿಕೆಗಳನ್ನು ಕೈಗೊಂಡು ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಜೋಡಣೆ ಮಾಡಿಕೊಂಡು ಆದಾಯ ಗಳಿಸಿಕೊಳ್ಳಬೇಕಾಗಿ ತಿಳಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಯೋಗೇಶ್, ಜಿ.ಎಸ್. ಮಾತನಾಡಿ ಪ್ರೊ.ಎಂ. ಡಿ. ನಂಜುಂಡಸ್ವಾಮಿ ವಿಶ್ವ ರೈತ ಚೇತನರಾಗಿದ್ದು ಕರ್ನಾಟಕ ರಾಜ್ಯ ರೈತ ಸಂಘ ಸ್ಥಾಪಿಸಿ ಹಲವಾರು ರೈತ ನೀತಿಗಳನ್ನು ಸರ್ಕಾರಕ್ಕೆ ನಿರ್ದೇಶಿಸಿ ರೈತಪರ ಯೋಜನೆಗಳನ್ನು ತರಲು ಶ್ರಮಿಸಿದರು ಹಾಗೂ ರೈತ ಸಮುದಾಯವನ್ನು ಒಗ್ಗೂಡಿಸಿ ಬಲಗೊಳಿಸಿದ್ದರು. ಹೀಗಾಗಿ ರೈತರು ಇಂದು ಕೃಷಿಯಲ್ಲಿ ತಕ್ಕಮಟ್ಟಿಗೆ ಸಾರ್ಥಕತೆಯನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಮುಂದುವರೆದು, ಇದನ್ನು ಸಾರ್ಥಕಗೊಳಿಸಲು ರೈತರು ಕೃಷಿ ಹವಾಮಾನವನ್ನು ಪುನಶ್ಚೇತನಗೊಳಿಸಿ ಪೂರಕವಾದ ಬೆಳೆ ಪರಿಸರವನ್ನು ಕಾಯ್ದುಕೊಂಡು ಸುಸ್ಥಿರ ಉತ್ಪಾದನೆ, ದ್ವಿತೀಯ ಕೃಷಿಗೆ ಆದ್ಯತೆ ನೀಡಿ ಮಾರುಕಟ್ಟೆ ಸ್ಥಿರತೆ ಸ್ಥಾಪಿಸಿ ತಮ್ಮ ಜೀವನೋಪಾಯದ ಬಲವರ್ಧನೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ಮಹಾವಿದ್ಯಾಲಯದ ವಿಶೇಷಾಧಿಕಾರಿ ಡಾ.ಸಿ. ದೊರೆಸ್ವಾಮಿ ಪ್ರೊ. ಎಂ.ಡಿ ನಂಜುಂಡಸ್ವಾಮಿ ರೈತರಿಗೆ ಸಮರ್ಥ ನಾಯಕರಾಗಿ ದಾರಿದೀಪವಾಗಿದ್ದ ಧೀಮಂತ ನಾಯಕರು. ಅವರ ಒಂದು ಧೋರಣೆಗೆ ರೈತರು ಮಾರುಕಟ್ಟೆ ಎಂಬ ಸರಪಳಿಯನ್ನು ಉತ್ತಮವಾಗಿ ನಿರ್ಮಿಸಿ ಕಾಯ್ದುಕೊಂಡು ನಿರ್ವಹಣೆ ಮಾಡುವುದಾಗಿತ್ತು. ಅದಕ್ಕಾಗಿ ಅವರು ರೈತರ ಮಾರುಕಟ್ಟೆ ಏಕಸ್ವಾಮ್ಯತೆಯನ್ನು ಸ್ಥಾಪಿಸಲು ಬಹು ರಾಷ್ಟ್ರೀಯ ಕಂಪನಿಗಳನ್ನು ನಮ್ಮ ದೇಶದಿಂದ ಹೊರದೂಡಲು ಶ್ರಮಿಸಿ ರೈತರಿಗೆ ಮಾರುಕಟ್ಟೆ ಅನುಕೂಲಗಳನ್ನು ಕೊಡಿಸಲು ಶ್ರಮಿಸಿ ಒಬ್ಬ ಉತ್ತಮ ರೈತ ಪ್ರತಿನಿಧಿಯಾಗಿದ್ದರು. ಈ ರೀತಿಯ ವಿಶೇಷ ದಿನಗಳಂದು ರೈತರು ಅವರ ಆದರ್ಶಗಳನ್ನು ಮನನ ಮಾಡಿ ಅವುಗಳನ್ನು ಅಳವಡಿಸಿ ಕಾರ್ಯರೂಪಕ್ಕೆ ತಂದು ಜಿಲ್ಲೆಗೆ ಮಾದರಿಯಾಗಬೇಕೆಂದು ಕರೆ ನೀಡಿದರು. ತೋಟಗಾರಿಕೆ ವಿಜ್ಞಾನಿ ಡಾ.ಎ.ಬಿ. ಮೋಹನ್ ಕುಮಾರ್ ಬಾಳೆ ಮತ್ತು ಅರಿಶಿಣ ಕೃಷಿಯಲ್ಲಿ ನೂತನ ತಾಂತ್ರಿಕತೆ ಕುರಿತಂತೆ ಮಾಹಿತಿ ನೀಡಿದರು. ಕೀಟ ವಿಜ್ಞಾನಿ ಡಾ. ಶಿವರಾಯ ನಾವಿ ಬಾಳೆ ಮತ್ತು ಅರಿಶಿಣ ಕೃಷಿಯಲ್ಲಿ ರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ಸಂವಾದ ನಡೆಸಿದರು. ಸಂವಾದ ಕಾರ್ಯಕ್ರಮವನ್ನು ಪ್ರೊ. ನಂಜುಂಡಸ್ವಾಮಿ ಸಂಶೋಧನಾ ಪೀಠದ ಸಂಶೋಧನಾ ಸಿಬ್ಬಂದಿ ನಡೆಸಿಕೊಟ್ಟರು. ಚಾಮರಾಜನಗರದ ರೈತರು, ರೈತ ಮಹಿಳೆಯರು ಭಾಗವಹಿಸಿ ಅಗತ್ಯ ಮಾಹಿತಿ ಪಡೆದುಕೊಂಡರು.