ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ 34ನೇ ನುಡಿಹಬ್ಬವು (ಘಟಿಕೋತ್ಸವ) ಫೆ.24ರಂದು ನಡೆಯಲಿದ್ದು, ಮೂವರು ಸಾಧಕರಿಗೆ ನಾಡೋಜ ಗೌರವ ಪದವಿ ಪ್ರದಾನ ಮಾಡಲಾಗುವುದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಸೋಮವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬೆಂಗಳೂರಿನ 104 ವರ್ಷದ ಶತಾಯುಷಿ, ಕನ್ನಡ ಪಂಡಿತ ಪ್ರೊ.ಸಿ.ಮಹಾದೇವಪ್ಪ, ಶಿಕ್ಷಣತಜ್ಞ ಡಾ.ಜಿ.ರಾಮಕೃಷ್ಣ, ದಕ್ಷ ಆಡಳಿತಗಾರ ಡಾ.ಎಚ್‌.ಸಿ. ಸತ್ಯನ್‌ ಅವರಿಗೆ ನುಡಿಹಬ್ಬದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ನಾಡೋಜ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.

ರಾಜ್ಯಪಾಲರು, ಕನ್ನಡ ವಿಶ್ವವಿದ್ಯಾಲಯದ ಕುಲಾಧಿಪತಿ ಆಗಿರುವ ಥಾವರಚಂದ್‌ ಗೆಹಲೋತ್‌ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ, ಸಮಕುಲಾಧಿಪತಿ ಡಾ. ಎಂ.ಸಿ. ಸುಧಾಕರ್‌ ನಾನಾ ವಿಭಾಗದ 107 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪ್ರದಾನ ಮಾಡಲಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಮರುಳಸಿದ್ದಪ್ಪ ಘಟಿಕೋತ್ಸವ ಭಾಷಣ ಮಾಡುವರು. ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ನುಡಿಹಬ್ಬದಲ್ಲಿ ಸ್ವಾಗತ ಭಾಷಣ ಮಾಡುವರು ಎಂದರು.

ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಹಣಕಾಸು ವಿಭಾಗದ ಅಧಿಕಾರಿ ಡಾ.ಎ.ಶ್ರೀಧರ, ಅಧ್ಯಯನಾಂಗ ನಿರ್ದೇಶಕ ಡಾ. ಅಮರೇಶ್‌ ಯತಗಲ್‌, ಡೀನ್‌ರಾದ ಡಾ.ಮಾಧವ ಪೆರಾಜೆ, ಡಾ.ಎಚ್‌.ಡಿ. ಪ್ರಶಾಂತ್‌, ಡಾ.ಶಿವಾನಂದ ಎಸ್‌. ವಿರಕ್ತಮಠ, ಡಾ.ಶೈಲಜ ಇಂ. ಹಿರೇಮಠ, ಪ್ರಾಧ್ಯಾಪಕ ಡಾ.ಅಶೋಕ್‌ಕುಮಾರ್ ರಂಜೇರೆ ಇದ್ದರು.


ಪ್ರೊ.ಸಿ.ಮಹಾದೇವಪ್ಪ: ನಾಡೋಜ ಗೌರವ ಪದವಿ ಪಡಯುತ್ತಿರುವ ಪ್ರೊ.ಸಿ.ಮಹಾದೇವಪ್ಪ ಶತಾಯುಷಿ. ಅವರಿಗೆ ಈಗ 104 ವರ್ಷ. ಇವರು 1922ರಲ್ಲಿ ಮೈಸೂರಿನ ಸೋಸಲೆ ಗ್ರಾಮದಲ್ಲಿ ಜನಿಸಿದರು. ಇವರ ಮೂಲ ಹೆಸರು ಎಸ್.ಬಿ. ಚನ್ನಬಸಪ್ಪ. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಸೋಸಲೆ ಗ್ರಾಮ, ಪ್ರೌಢಶಾಲೆಯನ್ನು ಮೈಸೂರಿನ ಸರ್ಕಾರಿ ಮರಿಮಲ್ಲಪ್ಪ ಹೈಸ್ಕೂಲಿನಲ್ಲಿ, ಇಂಟರ್ ಮೀಡಿಯಟ್‌ನ್ನು ಮೈಸೂರಿನ ಯುವರಾಜ ಕಾಲೇಜಿನಲ್ಲಿ, ನಂತರ ಮೈಸೂರಿನ ಓರಿಯಂಟಲ್ ಲೈಬ್ರರಿಯಲ್ಲಿ ಕನ್ನಡ ಓಲೆಗರಿಗಳಿಂದ ಪ್ರತಿ ಮಾಡುವ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ತುಮಕೂರಿನ ಇಂಟರ್‌ಮೀಡಿಯಟ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ಮೈಸೂರಿನ ಯುವರಾಜ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಮಾಡುತ್ತಾರೆ. ಅಧ್ಯಾಪನದೊಂದಿಗೆ ಮೈಸೂರು ವಿವಿಯಿಂದ ಎಂಎ ಪದವಿ ಪಡೆದುಕೊಳ್ಳುತ್ತಾರೆ. ಚಿಕ್ಕಮಗಳೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ, ಬೆಂಗಳೂರಿನ ಮಹಾರಾಣಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ನಂತರ ತುಮಕೂರು ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗುತ್ತಾರೆ. ಕನ್ನಡ, ತಮಿಳು, ಇಂಗ್ಲಿಷ್, ಸಂಸ್ಕೃತದಲ್ಲಿ ಪಾಂಡಿತ್ಯವುಳ್ಳವರು. ಹಳಗನ್ನಡ, ನಡುಗನ್ನಡ ಸಾಹಿತ್ಯ, ವಚನ ಸಾಹಿತ್ಯ, ಸ್ತೋತ್ರ ಸಾಹಿತ್ಯ, ಅಲಂಕಾರ ಸಾಹಿತ್ಯ, ಅನುವಾದ ಸಾಹಿತ್ಯ ಹೀಗೆ ಬಹುಕ್ಷೇತ್ರಗಳಲ್ಲಿ ಗಂಭೀರ ಅಧ್ಯಯನ ಮಾಡಿದ್ದಾರೆ. ಅನುಪಲಬ್ಧ ಹಾಗೂ ಅಪರೂಪದ ಹಲವು ಕೃತಿಗಳನ್ನು ಶೋಧಿಸಿ ಹಸ್ತಪ್ರತಿ, ಮುದ್ರಿತ ಗ್ರಂಥಗಳ ಸಹಾಯದಿಂದ ಪರಿಷ್ಕರಿಸಿ ಪ್ರಕಟಿಸಿದ್ದಾರೆ.

ಡಾ.ಜಿ.ರಾಮಕೃಷ್ಣ: ಡಾ.ಜಿ. ರಾಮಕೃಷ್ಣ ಅವರು ಕನ್ನಡದ ಪ್ರಮುಖ ವಿದ್ವಾಂಸರು. ಇವರು ಕನ್ನಡ ಸಾಹಿತ್ಯ, ವೈಚಾರಿಕ, ವೈಜ್ಞಾನಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಇಂಗ್ಲಿಷ್, ಸಂಸ್ಕೃತ, ಕನ್ನಡದಲ್ಲಿ ಪಾಂಡಿತ್ಯವುಳ್ಳವರು. 1939ರ ಜೂನ್ 17ರಂದು ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಹಾಲೇನಹಳ್ಳಿ ಜನಿಸುತ್ತಾರೆ. ಮೈಸೂರು ವಿವಿಯಿಂದ ಸಂಸ್ಕೃತದಲ್ಲಿ ಬಿಎ ಆನರ್ಸ್, ಎಂಎ, ಪಿಎಚ್‌ಡಿ ಹಾಗೂ ಪೂನಾ ವಿವಿಯಿಂದ ಎಂಎ ಇಂಗ್ಲಿಷ್, ವೇಲ್ಸ್ ವಿಶ್ವವಿದ್ಯಾಲಯದಿಂದ ಎಂಎ ಇಂಗ್ಲಿಷ್ ಪದವಿ ಪಡೆದಿದ್ದಾರೆ.

1959ರಿಂದ ಅಕೌಂಟೆಂಟ್ ಜನರಲ್ ಆಫೀಸ್‌ನಲ್ಲಿ ವೃತ್ತಿ ಆರಂಭಿಸುತ್ತಾರೆ. ನಂತರ ಉಸ್ಮಾನಿಯ ವಿಶ್ವವಿದ್ಯಾಲಯ, ಕೈವಲ್ಯಧಾಮ ಯೋಗ ಕೇಂದ್ರದಲ್ಲಿ ಸಂಶೋಧಕರಾಗ್ತಾರೆ. ಮಹಾರಾಷ್ಟ್ರದ ಅಂಬೇಡ್ಕರ್ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ 30 ವರ್ಷ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಾರೆ.

ಇವರ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿಗಳು ದೊರೆತಿವೆ. ಪಾಟೀಲ ಪುಟ್ಟಪ್ಪ ಪತ್ರಿಕೋದ್ಯಮ ಪ್ರಶಸ್ತಿ, ಬೆಟಗೇರಿ ಕೃಷ್ಣಶರ್ಮ ಪತ್ರಿಕೋದ್ಯಮ ಪ್ರಶಸ್ತಿ ಲಭಿಸಿವೆ.

ಡಾ.ಎಚ್.ಸಿ. ಸತ್ಯನ್: ಡಾ. ಎಚ್.ಸಿ. ಸತ್ಯನ್ ದಕ್ಷ ಆಡಳಿತಗಾರರು. ಸಾಮಾಜಿಕ ಕಳಕಳಿಯುಳ್ಳವರು.1960 ರ ಮೇ 15ರಂದು ಹಾಸನದಲ್ಲಿ ಜನಿಸಿದರು. ಪ್ರಾಥಮಿಕ, ಪ್ರೌಢ, ಕಾಲೇಜು ಶಿಕ್ಷಣವನ್ನು ಹಾಸನದಲ್ಲಿ, ಉನ್ನತ ಶಿಕ್ಷಣವನ್ನು ದೇಶದ ಬೇರೆ ಬೇರೆ ವಿಶ್ವವಿದ್ಯಾಲಯಗಳಿಂದ ಪಡೆದಿದ್ದಾರೆ. ಸತ್ಯನ್ ಅವರು ಮಾಹಿತಿ ಹಕ್ಕು ಕಾಯ್ದೆ ಆಯೋಗದ ರಾಜ್ಯ ಮಾಹಿತಿ ಆಯುಕ್ತರಾಗಿ ಹಾಗೂ ಮಾಹಿತಿ ಹಕ್ಕು ಆಯುಕ್ತರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಬುದ್ಧತೆ ಹೊಂದಿದ್ದಾರೆ. ಆಡಳಿತಾನುಭವದಲ್ಲಿ ಪಳಗಿದ ಸತ್ಯನ್ ತಮ್ಮ ಸೇವಾ ಅವಧಿಯಲ್ಲಿ ಗ್ರಾಪಂನಿಂದ ಉಚ್ಚ ನ್ಯಾಯಾಲಯದವರೆಗೆ ಅನೇಕ ವ್ಯಾಜ್ಯಗಳನ್ನು ಸಂವಿಧಾನಾತ್ಮಕವಾಗಿ ಬಗೆಹರಿಸಿದವರು.

ಮೈಸೂರು ಮಹಾರಾಜ ಶ್ರೀಕಂಠದತ್ತ ಒಡೆಯರಿಂದ ಗೌರವಿಸಲ್ಪಟ್ಟಿದ್ದಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಡಿ.ಲಿಟ್ (2024) ಪದವಿ ಪಡೆದಿದ್ದಾರೆ.