ಪ್ರೊ. ಕಬಡ್ಡಿ ಪಂದ್ಯಾವಳಿ, ಅಬ್ಬಿಗೇರಿ ತಂಡ ಚಾಂಪಿಯನ್

| Published : Mar 04 2024, 01:16 AM IST

ಸಾರಾಂಶ

ನರೇಗಲ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇತ್ತೀಚೆಗೆ ನಡೆದ ಗದಗ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಮೇಲಿನ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಅಬ್ಬಿಗೇರಿ ಗ್ರಾಮದ ತಂಡವು ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.

ನರೇಗಲ್ಲ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇತ್ತೀಚೆಗೆ ರಾಜ್ಯ ಅಮೆಚೂರ್ ಕಬಡ್ಡಿ, ಗದಗ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್, ಮಿಥುನ್ ಜಿ. ಪಾಟೀಲ ಅಭಿಮಾನಿಗಳ ಬಳಗ ಹಾಗೂ ಸ್ಥಳೀಯ ರೇಣುಕಾದೇವಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಗದಗ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಮೇಲಿನ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಅಬ್ಬಿಗೇರಿ ಗ್ರಾಮದ ತಂಡವು ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.

ಮೂರು ದಿನಗಳ ಪಂದ್ಯಾವಳಿಗೆ ಮೊದಲ ದಿನದಿಂದಲೇ ನಿರೀಕ್ಷೆಗೆ ಮೀರಿ ಜನರು ಕಬಡ್ಡಿ ನೋಡಲು ಆಗಮಿಸುವ ಮೂಲಕ ಆಯೋಜಕರಲ್ಲಿ ಹುರುಪು ತುಂಬಿದರು. ಅದರಲ್ಲೂ ಭಾನುವಾರದ ಸೆಮಿ ಹಾಗೂ ಫೈನಲ್ ಪಂದ್ಯಗಳ ವೀಕ್ಷಣೆಗೆ ನೂರಾರು ಮಹಿಳೆಯರು ಆಗಮಿಸಿದ್ದು ವಿಶೇಷವಾಗಿತ್ತು. ನಿಸರ್ಗ ಟೈಟನ್ಸ್ ನರೇಗಲ್ ಹಾಗೂ ಪವನ ಲಯನ್ಸ್ ಅಬ್ಬಿಗೇರಿ ತಂಡಗಳ ನಡುವೆ ನಡೆದ ರೋಮಾಂಚನಕಾರಿ ಕಬಡ್ಡಿಗೆ ಗ್ಯಾಲರಿಯಲ್ಲಿ ಕುಳಿತುಕೊಳ್ಳಲು ಸ್ಥಳಾವಕಾಶ ಇಲ್ಲದಷ್ಟು ಜನರು ಸೇರಿದ್ದರು.

ಈ ವೇಳೆ ಗದಗ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಗಣಾಚಾರಿ ಮಾತನಾಡಿ, ಮುಂದಿನ ಸಲ ಗ್ಯಾಲರಿಯನ್ನು ಇನ್ನೂ ದೊಡ್ಡಮಟ್ಟದ ಹಾಕಿಸುವಂತೆ ಸಲಹೆ ನೀಡಿದರು.ಗ್ರಾಮೀಣ ಭಾಗದಲ್ಲಿ ಕಬಡ್ಡಿಗೆ ಇಷ್ಟೊಂದು ಪ್ರೋತ್ಸಾಹ ಸಿಗುತ್ತದೆ ಎನ್ನುವುದನ್ನು ನೋಡಲು ಸಂತೋಷವಾಗುತ್ತದೆ. ಇಲ್ಲಿನ ಪ್ರತಿಭೆಗಳಿಗೆ ರಾಜ್ಯಮಟ್ಟದಲ್ಲಿ ಅವಕಾಶ ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡ ಮಿಥುನ್. ಜಿ. ಪಾಟೀಲ ಮಾತನಾಡಿ, ಐಪಿಎಲ್ ಮಾದರಿಯಲ್ಲಿ ಕಬಡ್ಡಿ ಲೀಗ್ ಆರಂಭಿಸಲು ಯುವಕರು ಯೋಚಿಸಿರುವುದು ಸೂಕ್ತವಾಗಿದೆ. ನಿರೀಕ್ಷೆಗೂ ಮೀರಿ ಜನರು ಜಾತ್ರೆಗೆ ಬಂದಂತೆ ನೋಡಲು ಬಂದಿರುವುದು ವಿಶೇಷವಾಗಿದೆ. ಈ ನೆಲದ ಪರಂಪರಾಗತ ಕ್ರೀಡೆ ಕಬಡ್ಡಿ ಯಶಸ್ಸು ಸಾಧಿಸಿ, ಎಲ್ಲರ ಮನೆ ಮನ ತಲುಪಿದೆ ಎಂದರು.

ಅಬ್ಬಿಗೇರಿಯ ಪವನ ಲಯನ್ಸ್ ತಂಡ ಪ್ರಥಮ ಸ್ಥಾನ ಪಡೆದು ₹ ೭೫ ಸಾವಿರ, ನರೇಗಲ್‌ನ ನಿಸರ್ಗ ಟೈಟಾನ್ಸ್ ತಂಡ ದ್ವಿತೀಯ ಪಡೆದು ₹ ೫೦ ಸಾವಿರ, ವೈಷ್ಣವಿ ಫ್ರಾಂಚೈಸಿ ತಂಡ ತೃತೀಯ ಸ್ಥಾನ ಪಡೆದು ₹ ೩೦ ಸಾವಿರ ಹಾಗೂ ರೋಣ ಎಂ.ಜಿ.ಪಿ. ಟೈಗರ್ಸ್ ತಂಡ ಚತುರ್ಥ ಸ್ಥಾನ ಪಡೆದು ₹೨೦ ಸಾವಿರ ನಗದು ಪಡೆದವು.

ಪಂದ್ಯಾವಳಿಯಲ್ಲಿ ಉತ್ತಮ ದಾಳಿಗಾರನಾಗಿ ನಾಗು ಕೊಣ್ಣೂರ ೧ ಸೈಕಲ್, ಉತ್ತಮ ಹಿಡಿತಗಾರನಾಗಿ ಪ್ರಜ್ವಲ್ ಕೆ ೧ ಸೈಕಲ್, ಸರ್ವೋತ್ತಮ ಆಟಗಾರನಾಗಿ ನಿಂಗನಗೌಡ ಹಿರೇಗೌಡರ ೧ ಸೈಕಲ್ ಗಳನ್ನು ಪಡೆದರು.

ಈ ವೇಳೆ ಶಿವನಗೌಡ ಪಾಟೀಲ, ನಿಂಗನಗೌಡ ಲಕ್ಕನಗೌಡ್ರ, ಶೇಖಪ್ಪ ಜುಟ್ಲ, ಕಳಕನಗೌಡ ಪೊಲೀಸ್ ಪಾಟೀಲ, ಅಲ್ಲಾಬಕ್ಷಿ ನದಾಫ್, ಅಸ್ಲಾಂ ಕೊಪ್ಪಳ, ಯಲ್ಲಪ್ಪ ಕಿರೇಸೂರ, ಗುಡದಪ್ಪ ಗೋಡಿ, ಸಂತೋಷ ಹನಮಸಾಗರ, ಸುರೇಶ ಕೊತಬಾಳ, ಸದ್ದಾಂ ನಶೇಖಾನ್ ಇದ್ದರು.