ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಐದು ದಶಕಗಳ ಹಿಂದೆ ದಲಿತರು, ಬಡವರಿಗೆ ಇರುತ್ತಿದ್ದ ಹಲವು ಸಾಮಾಜಿಕ, ಸಾರ್ವಜನಿಕ ಬಹಿಷ್ಕಾರದಿಂದ ಮುಕ್ತಿ ನೀಡಿದ ದಿನ ಇದಾಗಿದ್ದು, ಇದೇ ದಿನ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿದ ದಿನವಾಗಿದೆ ಎಂದು ಡಿಎಸ್ಸೆಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ತಿಳಿಸಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿಸಿದ ದಲಿತ ಸಂಘರ್ಷ ಸಮಿತಿಯ 50ನೇ ಸಂಸ್ಥಾಪನಾ ದಿನದ ಅಂಗವಾಗಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ರಾಜ್ಯದಲ್ಲಿ ಬಡವರು, ದಲಿತರು, ಶೋಷಿತರು ಸಾಮಾಜಿಕ ಪಿಡುಗಿನಿಂದ ಮುಕ್ತವಾಗಿ ಜೀವಿಸುತ್ತಿದ್ದರೆ, ಅದಕ್ಕೆ ಕಾರಣ ಪ್ರೊ.ಕೃಷ್ಣಪ್ಪ ಕಾರಣೀಕರ್ತರು ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಿಸುವ ಮೂಲಕ ನಾಡಿನ ಮೂಲೆ ಮೂಲೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರ ವಿಚಾರಧಾರೆ ತಲುಪಿಸಿದ, ಶೋಷಿತರು, ದಮನಿತರು, ಪರಿಶಿಷ್ಟರಲ್ಲಿ ಜಾಗೃತಿ ಮೂಡಿಸಿದ ಶ್ರೇಯ ಪ್ರೊ.ಕೃಷ್ಣಪ್ಪನವರಿಗೆ ಸಲ್ಲುತ್ತದೆ. ಜಾತಿಯನ್ನೂ ಮೀರಿದ ಆಲೋಚನೆಗಳು ಕಂಡು ಬಂದರೆ ಅದರಲ್ಲಿ ಕೃಷ್ಣಪ್ಪ ಸ್ಥಾಪಿತ ಡಿಎಸ್ಸೆಸ್ ಪರಿಶ್ರಮ ಬಹಳ ಮುಖ್ಯವಾದುದಾಗಿದೆ ಎಂದು ಹೇಳಿದರು.ದಲಿತರ ಮೇಲೆ ನಡೆಯುತ್ತಿದ್ದ ಕೊಲೆ, ಸುಲಿಗೆ, ಶೋಷಣೆ, ಅತ್ಯಾಚಾರ, ಅನ್ಯಾಯದ ವಿರುದ್ಧ ಡಿಎಸ್ಸೆಸ್ ಹೋರಾಟವನ್ನೇ ಶುರು ಮಾಡಿತು. ಸರ್ಕಾರಿ ಭೂಮಿ ಅತಿಕ್ರಮಣ, ಸಾಗುವಳಿದಾರರು, ಭೂ ಹೀನರಿಗಾಗಿ ಭೂ ಮಂಜೂರಾತಿ ಹೋರಾಟ ನಡೆಸಿದ ಪ್ರೊ.ಕೃಷ್ಣಪ್ಪ ಹೋರಾಟ ಅವಿಸ್ಮರಣೀಯ. ಬೆಳಗಾವಿ ಜಿಲ್ಲೆ ಬೆಂಡಿಗೇರಿ ಘಟನೆ ವಿರೋಧಿಸಿ ಬೆಂಗಳೂರಿನಲ್ಲಿ ಧರಣಿ, ಭದ್ರಾವತಿ ತಾ. ಸಿದ್ಲಿಪುರದಲ್ಲಿ ಒಂದು ವರ್ಷ ನಿರಂತರ ಹೋರಾಟದ ಫಲವಾಗಿ ಸಾಕಷ್ಟು ಬದಲಾವಣೆಗೆ ಕಾರಣವಾಗಿತ್ತು ಎಂದು ಅವರು ಡಿಎಸ್ಸೆಸ್ ಹೋರಾಟದ ಮೆಲುಕು ಹಾಕಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ, ಹಿರಿಯ ಚಿಂತಕ ಡಾ.ಎಚ್.ವಿಶ್ವನಾಥ ಮಾತನಾಡಿ, ಬಡವರ ಮನೆ ಮನೆಯಲ್ಲೂ ಸ್ವಾಭಿಮಾನ, ಸಹಬಾಳ್ವೆಯ ಕಿಚ್ಚನ್ನು ಹೊತ್ತಿಸಿದ ಕೀರ್ತಿಯು ಪ್ರೊ.ಬಿ.ಕೃಷ್ಣಪ್ಪನವರಿಗೆ ಸಲ್ಲುತ್ತದೆ. ಉತ್ತರ ಭಾರತಕ್ಕೆ ಅಂಬೇಡ್ಕರ್‌ರನ್ನು ಪರಿಚಯಿಸಿದ ಶ್ರೇಯವು ಝಾನ್ಸಿರಾಮ್‌ರಿಗೆ ಸಲ್ಲುತ್ತದೆ. ಅದೇ ರೀತಿ ದಕ್ಷಿಣದಲ್ಲಿ ಅದೇ ಕೀರ್ತಿ ಪ್ರೊ.ಕೃಷ್ಣಪ್ಪನವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.ಡಿಎಸ್ಸೆಸ್ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ, ತಾಲೂಕು ಸಂಚಾಲಕ ಅಣಜಿ ಹನುಮಂತಪ್ಪ, ಮಹಿಳಾ ಸಂಚಾಲಕಿ ಕೆ.ವಿಜಯಲಕ್ಷ್ಮಿ, ಶಿವಮೊಗ್ಗ ಜಿಲ್ಲಾ ಸಂಚಾಲಕ ಎಂ.ಏಳುಕೋಟಿ, ಬುಳಸಾಗರ ಸಿದ್ದರಾಮಣ್ಣ, ಜಗಳೂರು ಸಂಚಾಲಕ ಕುಬೇಂದ್ರಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಪ್ರದೀಪ ಕೆಟಿಜೆ ನಗರ, ಆರ್.ಮಂಜುನಾಥ, ತಾಲೂಕು ಸಂಘಟನೆ ಸಂಚಾಲಕ ನಿಂಗಪ್ಪ ಅಣಜಿ, ಬೇತೂರು ಹನುಮಂತ, ನೀರ್ಥಡಿ ಮಂಜು ಇತರರು ಇದ್ದರು. ಭದ್ರಾವತಿಯಲ್ಲಿ ಹುಟ್ಟಿದ ಡಿಎಸ್ಸೆಸ್
ದಲಿತ ಚಳವಳಿಯೆಂದರೆ ಸದಾ ಮುಂಚೂಣಿಯಲ್ಲಿರುತ್ತಿದ್ದವರು ಪ್ರೊ.ಬಿ.ಕೃಷ್ಣಪ್ಪನವರು. ಜಾತಿ, ವರ್ಗ, ಲಿಂಗಬೇಧ ರಹಿತ ಸಮಾಜ ರಚನೆ ಉದ್ದೇಶ ಹೊಂದಿದ್ದ ಪ್ರೊ.ಬಿ.ಕೃಷ್ಣಪ್ಪ 1974-75ರಲ್ಲಿ ಭದ್ರಾವತಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿದರು. ಭದ್ರಾವತಿಯಲ್ಲಿ ಅಂದು ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಯಾಗಿ ಹುಟ್ಟು ಹಾಕಲ್ಪಟ್ಟ ದಲಿತ ಸಂಘರ್ಷ ಸಮಿತಿ ಇಡೀ ನಾಡಿನ ದಮನಿತರು, ಶೋಷಿತರು, ಅವಕಾಶ ವಂಚಿತರ ಧ್ವನಿಯಾಗಿದೆ. ಅದಕ್ಕೆ ಪ್ರೊ.ಬಿ.ಕೆ. ಪರಿಶ್ರಮ ಅಪಾರ.ಡಾ.ಎಚ್.ವಿಶ್ವನಾಥ, ದಾವಣಗೆರೆ ವಿವಿ ಹಿರಿಯ ಪ್ರಾಧ್ಯಾಪಕ