ಸಾರಾಂಶ
-ಮೈಸೂರು ವಿವಿ ಕುಲಸಚಿವೆ ವಿ.ಆರ್. ಶೈಲಜಾ ಅಭಿಮತಫೋಟೋ- 18ಎಂವೈಎಸ್ 8- ಮೈಸೂರಿನ ಸೆನೆಟ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಮಾಜ ಕಾರ್ಯದಲ್ಲಿ ಹೊಸ ನೆಲೆಗಳು: ಶಿಕ್ಷಣ, ಸಂಶೋಧನೆ ಮತ್ತು ಅಭ್ಯಾಸದಲ್ಲಿ ಬದಲಾಗುತ್ತಿರುವ ಭೂಮಿಕೆ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
---ಕನ್ನಡಪ್ರಭ ವಾರ್ತೆ ಮೈಸೂರು
ಜಗತ್ತಿನಲ್ಲಿ ಯುದ್ಧ, ಜನಾಂಗೀಯ ದ್ವೇಷ, ಸಂಘರ್ಷ, ತಾರತಮ್ಯ, ಪ್ರಾಕೃತಿಕ ವಿಕೋಪದಂತ ಎಲ್ಲಾ ಬಿಕ್ಕಟ್ಟುಗಳಿಗೂ ಸೂಕ್ತ ಪರಿಹಾರವನ್ನು ಸಮಾಜ ವಿಜ್ಞಾನದ ಮೂಲಕ ಕಂಡುಕೊಳ್ಳಬಹುದು ಎಂದು ಮೈಸೂರು ವಿವಿ ಕುಲಸಚಿವೆ ವಿ.ಆರ್. ಶೈಲಜಾ ತಿಳಿಸಿದರು.ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಸಮಾಜ ಕಾರ್ಯ ಅಧ್ಯಯನ ವಿಭಾಗ, ಇಂಡಿಯನ್ ಸೊಸೈಟಿ ಆಫ್ ಪ್ರೊಫೆಷನಲ್ ಸೋಶಿಯಲ್ ವರ್ಕ್ ವತಿಯಿಂದ ಶನಿವಾರ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಆಯೋಜಿಸಿದ್ದ ಸಮಾಜ ಕಾರ್ಯದಲ್ಲಿ ಹೊಸ ನೆಲೆಗಳು: ಶಿಕ್ಷಣ, ಸಂಶೋಧನೆ ಮತ್ತು ಅಭ್ಯಾಸದಲ್ಲಿ ಬದಲಾಗುತ್ತಿರುವ ಭೂಮಿಕೆ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಸಮಾಜ ವಿಜ್ಞಾನ ವಿಷಯವು ನೈತಿಕ ಮೌಲ್ಯ ಬೆಳೆಸುವ ಜೊತೆಗೆ ಸಮಾಜವನ್ನು ಸಮಭಾವದಿಂದ ಮುನ್ನಡೆಸಲು ಸಹಕರಿಯಾದ ಜ್ಞಾನ ಮತ್ತು ಸಾಮರ್ಥ್ಯವನ್ನು ನೀಡುತ್ತದೆ ಎಂದರು.ವಿಜ್ಞಾನ ವಿದ್ಯಾರ್ಥಿಗಳಿಗೆ ಯಾವುದಾದರು ಒಂದು ಕೊಠಡಿ ಮಾತ್ರ ಪ್ರಯೋಗಾಲಯವಾದರೆ, ಮಾನವಿಕ ವಿಷಯದ ವಿದ್ಯಾರ್ಥಿಗಳಿಗೆ ಇಡೀ ಪ್ರಪಂಚವೇ ಪ್ರಯೋಗಾಲಯವಾಗುತ್ತದೆ ಎಂದು ಅವರು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಬಿ. ರಮೇಶ್ ಮಾತನಾಡಿ, ಸಂಶೋಧನೆ ಒಂದು ಸಾಮಾಜಿಕ ಜವಾಬ್ದಾರಿ ಆಗಿದೆ. ಆದ್ದರಿಂದ ವಿದ್ಯಾರ್ಥಿಗಳು ಮೊಬೈಲ್ ಗಳಲ್ಲಿನ ರೀಲ್ಸ್ ನಲ್ಲಿ ಮುಳುಗಿ ಹೋಗದೆ ನಿರಂತರವಾದ ಅಧ್ಯಯನ ಮತ್ತು ಪ್ರಯೋಗಾತ್ಮಕ ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ತುಮಕೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ವೈ.ಎಸ್. ಸಿದ್ದೇಗೌಡ, ಕರ್ನಾಟಕ ರಾಜ್ಯ ಮುಕ್ತ ವಿವಿಯ ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಇಂಡಿಯನ್ ಸೊಸೈಟಿ ಆಫ್ ಪ್ರೊಫೆಷನಲ್ ಸೋಶಿಯಲ್ ವರ್ಕ್ಸ್ ನ ಉಪಾಧ್ಯಕ್ಷ ಪ್ರೊ.ಆರ್. ಶಿವಪ್ಪ, ಪ್ರೊ.ಕೆ.ಜಿ. ಪರಶುರಾಮ, ಸಂಘಟನಾ ಕಾರ್ಯದರ್ಶಿ ಡಾ.ಎಚ್.ಪಿ. ಜ್ಯೋತಿ, ಡಾ. ಚಂದ್ರಮೌಳಿ, ಪ್ರೊ.ಬಿ.ಎಸ್. ಗುಂಜಾಲ್ ಮೊದಲಾದವರು ಇದ್ದರು.